ಬುಧವಾರ, ನವೆಂಬರ್ 13, 2019
28 °C
ವಿಶ್ವ ದೃಷ್ಟಿ ದಿನಾಚರಣೆಯಲ್ಲಿ ಜಿ.ಪಂ ಸಿಇಒ ದರ್ಶನ್‌ ಕಿವಿಮಾತು

ನೇತ್ರದಾನ ಜನಾಂದೋಲನ ಆಗಲಿ

Published:
Updated:
Prajavani

ಕೋಲಾರ: ‘ನೇತ್ರದಾನವು ಜನಾಂದೋಲನ ರೀತಿ ಆಗಬೇಕು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಕಿವಿಮಾತು ಹೇಳಿದರು.

ಜಿಲ್ಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ದೃಷ್ಟಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ದೃಷ್ಟಿ ದೋಷ ಸಮಸ್ಯೆಯಿಂದ ನರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ನೇತ್ರದಾನ ಮಹಾದಾನ. ಮನುಷ್ಯನ ದೇಹದ ಜತೆ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಿ ಮತ್ತೊಬ್ಬರಿಗೆ ದೃಷ್ಟಿ ಭಾಗ್ಯ ಕಲ್ಪಿಸಬೇಕು’ ಎಂದರು.

‘ಮಾನವನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಅತ್ಯಂತ ಜಾಗರೂಕತೆಯಿಂದ ಕಣ್ಣು ಕಾಪಾಡಿಕೊಳ್ಳಬೇಕು. ಕಣ್ಣಿನ ಸಮಸ್ಯೆ ಕಾಣಿಸಿಕೊಂಡ ತಕ್ಷಣ ನಿರ್ಲಕ್ಷಿಸದೆ ವೈದ್ಯರಿಂದ ತಪಾಸಣೆ ಮಾಡಿಸಿ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಜೀವನವಿಡೀ ತೊಂದರೆ ಅನುಭವಿಸಬೇಕಾಗುತ್ತದೆ. ಅಂಧರು ರಸ್ತೆ ದಾಟುವಾಗ ಅವರಿಗೆ ನೆರವಾಗುವ ಮನೋಭಾವ ಜನರಲ್ಲಿ ಇಲ್ಲದಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.

‘ಮನುಷ್ಯನ ದೇಹಕ್ಕೆ ಸಾವು ಬರುತ್ತದೆ. ಆದರೆ, ಕಣ್ಣಿಗೆ ಸಾವಿಲ್ಲ. ಸತ್ತ ನಂತರ ಕಣ್ಣುಗಳನ್ನು ಸಂರಕ್ಷಿಸಿ ಸಕಾಲದಲ್ಲಿ ದಾನ ಮಾಡಿದರೆ ಮತ್ತೊಬ್ಬರ ಬಾಳಿನ ಅಂಧಕಾರ ಹೋಗಲಾಡಿಸಬಹುದು. ನೇತ್ರದಾನಕ್ಕೆ ಮುಂದಾಗುವ ಜತೆಗೆ ಇತರರನ್ನೂ ಪ್ರೇರೇಪಿಸಿದರೆ ಅಂಧತ್ವ ನಿವಾರಿಸಬಹುದು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ನೇತ್ರ ದಾನಕ್ಕೆ ನಾನೂ ಅರ್ಜಿ ಸಲ್ಲಿಸಿದ್ದೇನೆ’ ಎಂದರು.

‘ಪ್ರತಿ ವರ್ಷ ವಿಶ್ವ ದೃಷ್ಟಿ ದಿನ ಆಚರಿಸಿ ದೃಷ್ಟಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಂಚಾರ ವೈದ್ಯರ ತಂಡವು ಪ್ರತಿ ತಿಂಗಳು ಚಿಕಿತ್ಸೆ ಕೊಡುತ್ತಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಪಟಾಕಿ ಸಿಡಿಸುವ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್ ಸಲಹೆ ನೀಡಿದರು.

ತಪಾಸಣೆ ಗುರಿ: ‘ಜಿಲ್ಲೆಯಲ್ಲಿ ಹುಟ್ಟು ಕುರುಡುತನದಿಂದ ಶೇ 12ರಷ್ಟು ಮಂದಿಗೆ ಹಾಗೂ ವೃದ್ಧಾಪ್ಯದ ಕಾರಣದಿಂದ ಶೇ 5ರಷ್ಟು ಮಂದಿಗೆ ಅಂಧತ್ವ ಕಾಡುತ್ತಿದೆ. ಶ್ರೀನಿವಾಸಪುರ ಮತ್ತು ಕೆಜಿಎಫ್ ಭಾಗದಲ್ಲಿ ಅಂಧರ ಸಂಖ್ಯೆ ಹೆಚ್ಚಿದೆ. ಮಧುಮೇಹ, ರಕ್ತದೊತ್ತಡದಿಂದ ಹಾಗೂ ಗ್ಲೊಕೊಮಾ ಕಡಿಮೆಯಾದರೆ ದೃಷ್ಟಿ ಸಮಸ್ಯೆ ಎದುರಾಗುತ್ತದೆ’ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ವಿವರಿಸಿದರು.

‘ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 2 ಸಾವಿರ ಮಂದಿಯ ನೇತ್ರ ತಪಾಸಣೆ ಮಾಡುವ ಗುರಿ ನೀಡಲಾಗಿದೆ. ಪ್ರತಿ ಪ್ರಕರಣಕ್ಕೆ ₹ 2 ಸಾವಿರ ಗೌರವಧನ ನೀಡಲಾಗುವುದು. ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚವಾಗಿ ₹ 1 ಸಾವಿರ ನೀಡಲಾಗುವುದು’ ಎಂದು ತಿಳಿಸಿದರು.

ಆರ್‍.ಎಲ್.ಜಾಲಪ್ಪ ಆಸ್ಪತ್ರೆ ವೈದ್ಯೆ ಡಾ.ಸಂಗೀತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗೀತಾ, ಪ್ರೇಮಾ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)