ಗ್ರಾಮಕ್ಕೆ ತೆರಳಿ ನೀರಿನ ಸಮಸ್ಯೆ ಅರಿಯಿರಿ

7
ಸಭೆಯಲ್ಲಿ ಎಂಜಿನಿಯರ್‌ಗಳಿಗೆ ಸಂಸದ ಮುನಿಯಪ್ಪ ಸೂಚನೆ

ಗ್ರಾಮಕ್ಕೆ ತೆರಳಿ ನೀರಿನ ಸಮಸ್ಯೆ ಅರಿಯಿರಿ

Published:
Updated:
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.

ಕೋಲಾರ: ‘ಎಂಜಿನಿಯರ್‌ಗಳು ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ವರದಿ ಕೊಡಬೇಕು. ಕುಳಿತ ಕಡೆಯೇ ಸುಳ್ಳು ಅಂಕಿ ಅಂಶ ಬರೆದುಕೊಂಡು ಬಂದು ಹೇಳಿದರೆ ಹಣ ಎಲ್ಲಿಂದ ತರುವುದು?’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಾದ್ಯಂತ ಹಿಂದಿನ ವರ್ಷ ಉತ್ತಮ ಮಳೆಯಾಗಿ ಕೆರೆಗಳಿಗೆ ನೀರು ಬಂದಿದೆ. ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ಜಲ ಮರುಪೂರಣಗೊಂಡಿದೆ. ಎಂಜಿನಿಯರ್‌ಗಳು ಕಚೇರಿಯ ಕುರ್ಚಿಗೆ ಅಂಟಿಕೊಳ್ಳದೆ ಹೊರ ಹೋಗಿ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತು ಕೊಡಬೇಕು’ ಎಂದರು.

‘ಜಿಲ್ಲೆಯಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇರುವ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ತುರ್ತಾಗಿ ಕೊಳವೆಬಾವಿ ಕೊರೆಸಲು ಕಾರ್ಯಪಡೆಯಲ್ಲಿ ಅನುದಾನವಿದೆ’ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಗೂಳಪ್ಪನವರ್ ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಳಬಾಗಿಲು ನಗರಸಭೆ ಅಧ್ಯಕ್ಷ ಮುರಳಿ, ‘ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅವರು ನೀರಿನ ಸಮಸ್ಯೆ ಸಂಬಂಧ ಯಾವ ಗ್ರಾಮಕ್ಕೆ ಹೋಗಿ ಪಟ್ಟಿ ತಯಾರಿಸಿಕೊಂಡು ಬಂದಿದ್ದಾರೆ. ಅವರಿಗೆ ಜನರ ಬಗ್ಗೆ ಕಾಳಜಿ ಇದೆಯಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ. ಅವುಗಳ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಏಜೆನ್ಸಿಯವರು ಪತ್ತೆಯಿಲ್ಲ. ಇಲಾಖೆಯವರನ್ನು ಕೇಳಿದರೆ ಏಜೆನ್ಸಿಯವರತ್ತ ಬೆಟ್ಟು ತೋರಿಸುತ್ತಾರೆ. ಅಧಿಕಾರಿಗಳಿಗೆ ಜನರ ಕಷ್ಟ ಹೇಗೆ ಅರ್ಥ ಮಾಡಿಸುವುದೆಂದು ಗೊತ್ತಾಗುತ್ತಿಲ್ಲ. ವಿಧಾನಸಭಾ ಚುನಾವಣೆ ವೇಳೆ ಗ್ರಾಮಗಳಿಗೆ ಹೋದಾಗ ನೀರಿನ ಸಮಸ್ಯೆಯ ಕಾರಣಕ್ಕೆ ಜನ ಘೇರಾವ್ ಹಾಕಿದ್ದಾರೆ. ಇದೆಲ್ಲಾ ಅಧಿಕಾರಿಗಳಿಗೆ ಅರ್ಥವಾಗಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಲ್‌ ತಡೆ ಹಿಡಿಯಿರಿ: ‘ಕೆನರಾ ಬ್ಯಾಂಕ್ ಹಾಗೂ ವಿವಿಧ ಖಾಸಗಿ ಕಂಪನಿಗಳ ಸಿಎಸ್‌ಆರ್ ನೆರವಿನಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಿಸಲಾಗಿದೆ. ಶೀಘ್ರವೇ ಏಜೆನ್ಸಿಯವರನ್ನು ಕರೆಸಿ ಘಟಕಗಳನ್ನು ದುರಸ್ತಿ ಮಾಡಿಸಿ. ಸರ್ಕಾರದ ಘಟಕಗಳನ್ನು ನಿರ್ಮಿಸಿರುವ ಗುತ್ತಿಗೆದಾರರ ಬಿಲ್‌ ತಡೆ ಹಿಡಿದು ದುರಸ್ತಿ ನಂತರ ಪಾವತಿಸಿ’ ಎಂದು ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.

‘ನೀರು ಬತ್ತಿರುವ ಕೊಳವೆ ಬಾವಿಗಳಲ್ಲಿನ ಪಂಪ್‌, ಮೋಟರ್‌, ಕೇಬಲ್ ಹಾಗೂ ಪೈಪ್‌ಗಳನ್ನು ಮೇಲೆತ್ತಿ ದಾಸ್ತಾನು ಮಾಡಬೇಕು. ಮುಂದೆ ಅವುಗಳನ್ನು ಬಳಸಿಕೊಳ್ಳಬಹುದು. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದು, ನೀರು ಬತ್ತಿರುವ ಕೊಳವೆ ಬಾವಿಗಳಲ್ಲೂ ನೀರು ಬರುತ್ತದೆ. ಆದ ಕಾರಣ ಹೊಸದಾಗಿ ಕೊಳವೆ ಬಾವಿ ಕೊರೆಸಬಾರದು. ಅಧಿಕಾರಿಗಳಿಗೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳನ್ನು ಸಂಪರ್ಕಿಸಿದರೆ ನೀರಿನ ಸಮಸ್ಯೆಯ ಸ್ಪಷ್ಟ ಚಿತ್ರಣ ಸಿಗುತ್ತದೆ’ ಎಂದು ಸಲಹೆ ನೀಡಿದರು.

ಅಮಾನತು ಮಾಡುತ್ತೇವೆ: ‘ಅಧಿಕಾರಿಗಳು ಸಭೆಗಳಲ್ಲಿ ಸುಳ್ಳು ಮಾಹಿತಿ ನೀಡುವುದನ್ನು ಚೆನ್ನಾಗಿ ಕಲಿತಿದ್ದಾರೆ. ಜನಪ್ರತಿನಿಧಿಗಳು ಈ ಸುಳ್ಳು ಮಾಹಿತಿ ನಂಬದೆ ಗ್ರಾಮಗಳಿಗೆ ಹೋದಾಗ ಜನರನ್ನು ಭೇಟಿಯಾಗಿ ನೀರಿನ ಸಮಸ್ಯೆಯ ವಾಸ್ತಾವಂಶ ತಿಳಿಯಬೇಕು. ಆಗ ಅಧಿಕಾರಿಗಳು ಎಚ್ಚೆತ್ತು ಗ್ರಾಮಗಳಿಗೆ ಭೇಟಿ ಕೊಟ್ಟು ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿತ್ತಾರೆ.

‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಾಹಿತಿಗೆ ತಾಳೆಯಾಗದಿದ್ದರೆ ಮೊದಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡುತ್ತೇವೆ. ನಂತರ ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ನೀರು ಪೂರೈಸುತ್ತಿಲ್ಲ: ‘ಮಾರ್ಕಂಡೇಯ ಡ್ಯಾಂನಿಂದ ಮಾಲೂರು ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ₹ 40 ಕೋಟಿ ಖರ್ಚು ಮಾಡಿದ್ದರೂ ನೀರು ಪೂರೈಸುತ್ತಿಲ್ಲ. ಡ್ಯಾಂನಲ್ಲಿ ನೀರಿದ್ದು, ಜಿ.ಪಂ ಸಿಇಒ ಅವರು ಸ್ಥಳ ಪರಿಶೀಲನೆ ನಡೆಸಿದ ನಂತರವೂ ಪ್ರಗತಿ ಆಗಿಲ್ಲ’ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಕೆ.ಎಸ್‌.ಲತಾಕುಮಾರಿ, ‘4 ಹಂತದಲ್ಲಿ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಕೆಲ ಗ್ರಾಮಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಕೆಲವೆಡೆ ಪೈಪ್‌ಲೈನ್‌ ಹಾಗೂ ಸಣ್ಣಪುಟ್ಟ ಸಮಸ್ಯೆಯಿದ್ದು, ಎರಡು ತಿಂಗಳೊಳಗೆ ಉದ್ದೇಶಿತ ಎಲ್ಲಾ ಗ್ರಾಮಗಳಿಗೆ ನೀರು ಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಮಾದರಿ ಕ್ಷೇತ್ರ: ‘ಸರ್ಕಾರಿ ಅಧಿಕಾರಿಯಾಗಿ ರಾಜ್ಯ ಮಟ್ಟದಲ್ಲಿ ಅನೇಕ ಹುದ್ದೆ ನಿರ್ವಹಿಸಿದ್ದೇನೆ. ಹೀಗಾಗಿ ಕ್ಷೇತ್ರದ ಕೆಲಸ ನಿರ್ವಹಣೆ ಕಷ್ಟವಲ್ಲ. ಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ಅನೇಕ ಹುದ್ದೆಗಳು ಖಾಲಿಯಿವೆ. ಸಿಇಒ ಹಂತದಲ್ಲಿ ನಿಯೋಜನೆ ಮಾಡಬಹುದಾದ ಹುದ್ದೆಗಳನ್ನು ತುಂಬಬೇಕು. ಜಿಲ್ಲಾಧಿಕಾರಿ, ಸಿಇಒ ಸಹಕಾರದ ಜತೆಗೆ ಸಂಸದರ ಸಹಕಾರ ಇದ್ದರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ’ ಎಂದು ಮುಳಬಾಗಿಲು ಶಾಸಕ ಎಚ್.ನಾಗೇಶ್ ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಜಿಲ್ಲಾಧಿಕಾರಿ (ಪ್ರಭಾರ) ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಟಪ್‌, ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !