ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಿ:  ಪ್ರಭಾಕರ್ ಸಲಹೆ

Last Updated 20 ಸೆಪ್ಟೆಂಬರ್ 2019, 12:34 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಿದ್ದು, ಇವರ ಅನುಕೂಲಕ್ಕೆ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಬೇಕು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ಸಲಹೆ ನೀಡಿದರು.

ರೇಷ್ಮೆ ಇಲಾಖೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ದ್ವಿತಳಿ ರೇಷ್ಮೆ ಬೆಳೆಗಾರರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ತಾಂತ್ರಿಕತೆ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ‘ಸಾಕಷ್ಟು ರೈತರು ಹಾಗೂ ನೂಲು ಬಿಚ್ಚಾಣಿಕೆದಾರರು ರೇಷ್ಮೆಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ’ ಎಂದರು.

‘ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ ಮತ್ತು ಕೋಲಾರ ತಾಲ್ಲೂಕಿನ ರೇಷ್ಮೆ ಬೆಳೆಗಾರರ ಅನುಕೂಲಕ್ಕಾಗಿ ರೇಷ್ಮೆ ಕೃಷಿಗೆ ಸಂಬಂದಿಸಿದಂತೆ ರೈತ ಉತ್ಪಾದಕ ಸಂಸ್ಥೆ ಆರಂಭಿಸಬೇಕು. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದ್ವಿತಳಿ ಗೂಡು ಉತ್ಪಾದನೆ ಮಾಡಿದರೆ ಉತ್ತಮ ಇಳುವರಿ ಜತೆಗೆ ಆರ್ಥಿಕವಾಗಿ ಸಬಲರಾಗಬಹುದು’ ಎಂದು ಕಿವಿಮಾತು ಹೇಳಿದರು.

‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ. ಚೀನಾ ರೇಷ್ಮೆ ಆಮದಿನಿಂದ ದೇಶದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂಲು ಬಿಚ್ಚಾಣಿಕೆದಾರರು ದ್ವಿತಳಿ ರೇಷ್ಮೆ ಬೇಕೆಂದು ಬಯಸುತ್ತಾರೆ. ರೈತರು ದ್ವಿತಳಿ ರೇಷ್ಮೆ ಹುಳು ಸಾಕಾಣಿಕೆ ಮಾಡುವ ಮೂಲಕ ನೂಲು ಬಿಚ್ಚಾಣಿಕೆದಾರರ ಬೇಡಿಕೆ ಈಡೇರಿಸಬೇಕು’ ಎಂದು ತಿಳಿಸಿದರು.

‘ವಿದೇಶಿ ಮಾರುಕಟ್ಟೆಯ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ರೈತರು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಬೇಕು. ಆಧುನಿಕ ತಾಂತ್ರಿಕತೆ ಬಳಕೆಯಿಂದ ರೇಷ್ಮೆ ಹುಳುಗಳಿಗೆ ರೋಗಬಾಧೆ ತಪ್ಪಿಸಬಹುದು. ವೈಜ್ಞಾನಿಕ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

ಉತ್ತಮ ಭವಿಷ್ಯ: ‘ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾಗಿದೆ. ಮಣ್ಣಿನ ಫಲವತ್ತತೆ ಕಾಪಾಡಲು ರೈತರು ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಬೇಕು. ಪೋಷಕಾಂಶ ನಿರ್ವಹಣೆಯಲ್ಲಿ ಮಣ್ಣು ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಸುಣ್ಣಕಟ್ಟು ರೋಗ ಮತ್ತು ಎಲೆ ಸುರುಳಿ ರೋಗ ನಿಯಂತ್ರಿಸಿದರೆ ಹೆಚ್ಚಿನ ಇಳುವರಿ ಪಡೆಯಬಹುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯವಿದೆ. ಬೆಲೆ ಕುಸಿತಕ್ಕೆ ರೈತರು ಧೃತಿಗೆಡಬಾರದು. ಅಧಿಕ ಇಳುವರಿ, ಹಿಪ್ಪು ನೇರಳೆ ಮತ್ತು ದ್ವಿತಳಿ, ಹೈಬ್ರೀಡ್‌ ರೇಷ್ಮೆ ಹುಳುವಿನ ತಳಿಗಳನ್ನು ಬಳಸಿಕೊಂಡು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಬೇಕು. ಭವಿಷ್ಯದಲ್ಲಿ ಭಾರತದ ರೇಷ್ಮೆಗೆ ಬೇಡಿಕೆ ಹೆಚ್ಚಲಿದೆ’ ಎಂದು ವಿವರಿಸಿದರು.

ಮಣ್ಣು ಪರೀಕ್ಷೆ: ‘ರೇಷ್ಮೆ ಬೆಳೆಗಾರರು 2 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ರಸಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಸಬೇಕು. ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ ಉಚಿತವಾಗಿ ಮಣ್ಣು ಪರೀಕ್ಷೆ ಮಾಡಿ ಚೀಟಿ ವಿತರಿಸಲಾಗುತ್ತದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಎಂ.ನೊಬೆಲ್ ಮೊರಿಸನ್ ಮಾಹಿತಿ ನೀಡಿದರು.

ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿಜ್ಞಾನಿ ಶಿವಪ್ರಕಾಶ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ.ಆರ್.ಶಶಿಧರ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ವಿಸ್ತರಣಾಧಿಕಾರಿಗಳಾದ ಶ್ರೀಧರ್, ಕಲ್ಯಾಣಸ್ವಾಮಿ, ಜಯಶಂಕರ್, ಚಂದ್ರಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT