ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಸಂಕಷ್ಟದಲ್ಲೂ ಉತ್ತಮ ಆಡಳಿತ: ವೈ.ಎ.ನಾರಾಯಣಸ್ವಾಮಿ

ಪ್ರಶಿಕ್ಷಣ ಶಿಬಿರದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿಕೆ
Last Updated 24 ನವೆಂಬರ್ 2020, 16:47 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್–19, ಅತಿವೃಷ್ಟಿ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆರ್ಥಿಕ ಸುಧಾರಣೆಯೊಂದಿಗೆ ಜನಪರ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ನಡೆಸಿ ಜನ ಮನ್ನಣೆ ಪಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹೇಳಿದರು.

ಬಿಜೆಪಿ ಗ್ರಾಮಾಂತರ ಮಂಡಲವು ಕಾಮಧೇನಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಶಿಕ್ಷಣ ತರಬೇತಿ ಶಿಬಿರದಲ್ಲಿ ಮಾತನಾಡಿ, ‘ಪ್ರವಾಹ ಮತ್ತು ಕೋವಿಡ್ ಸವಾಲಿನ ನಡುವೆಯೂ ಉತ್ತಮ ಆಡಳಿತ ನೀಡಿದ ತೃಪ್ತಿ ಸರ್ಕಾರಕ್ಕಿದೆ’ ಎಂದು ಅಭಿಪ್ರಾಯಪಟ್ಟರು.

‘ಅತಿವೃಷ್ಟಿಯಿಂದ ಹಾನಿಗೊಳಗಾದ 2 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ ₹ 10 ಸಾವಿರ ಪರಿಹಾರ ನೀಡಲಾಗಿದೆ. ಹಾನಿಗೊಳಗಾದ ಮನೆ ಸೇರಿದಂತೆ ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ಮರು ನಿರ್ಮಾಣ ಮಾಡಲಾಗಿದೆ. ಪ್ರವಾಹ ಸಂತ್ರಸ್ತರಿಗಾಗಿ ₹ 6,018 ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಲಾಗಿದೆ’ ಎಂದು ವಿವರಿಸಿದರು.

‘ಕೋವಿಡ್ ನಿರ್ವಹಣೆ ಮತ್ತು ಲಾಕ್‌ಡೌನ್ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿದ ಭಾರತದ ಕಾರ್ಯವನ್ನು ವಿಶ್ವ ಸಂಸ್ಥೆಯೇ ಪ್ರಶಂಸಸಿದೆ. ದೇಶದ ಮಾದರಿಯನ್ನು ಇತರೆ ದೇಶಗಳಲ್ಲೂ ಅನುಸರಿಸಲಾಯಿತು. ಭಾರತ ಸಾಂಸ್ಕೃತಿಕ ನೆಲೆಗಟ್ಟು, ವಿಚಾರಧಾರೆ ಹೊಂದಿರುವ ರಾಷ್ಟ್ರ. 36 ವರ್ಷಗಳಿಂದ ಜಾರಿಯಲ್ಲಿರುವ ಶಿಕ್ಷಣ ನೀತಿ ಬದಲಾಯಿಸಿ, ಕೌಶಲಭರಿತ ಭಾರತ ನಿರ್ಮಾಣದ ಕನಸನ್ನು ಹೊತ್ತ ಹೊಸ ಶಿಕ್ಷಣ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ’ ಎಂದರು.

ಕಾರ್ಯಕರ್ತರೇ ಶಕ್ತಿ: ‘ಅಪ್ಪ ಮಕ್ಕಳ ಅಥವಾ ವಂಶಪಾರಂಪರ್ಯ ಆಡಳಿತಕ್ಕೆ ಮಣೆ ಹಾಕುವ ಪಕ್ಷ ಬಿಜೆಪಿಯಲ್ಲ. ಇಲ್ಲಿ ಹಣ, ಜಾತಿಗೆ ಮಾನ್ಯತೆಯಿಲ್ಲ. ಪಕ್ಷ ನಿಷ್ಠೆ, ದುಡಿಮೆಯನ್ನು ಗುರುತಿಸಲಾಗುತ್ತದೆ. ಸಾಮಾನ್ಯ ಕಾರ್ಯಕರ್ತರಿಗೆ ರಾಜ್ಯಸಭಾ ಟಿಕೆಟ್‍ ನೀಡಿದ ಉದಾಹರಣೆ ಬೇರೆ ಪಕ್ಷಗಳಲ್ಲಿ ಇಲ್ಲ. ಅಲ್ಲಿ ಜಾತಿ, ಹಣದ ಲೆಕ್ಕಾಚಾರ ನಡೆಯುತ್ತದೆ’ ಎಂದು ಟೀಕಿಸಿದರು.

‘ಕೇಂದ್ರ ಸರ್ಕಾರ ವರ್ಷಕ್ಕೆ ರೈತರಿಗೆ ₹ 6 ಸಾವಿರ ಹಾಗೂ ರಾಜ್ಯ ಸರ್ಕಾರ ₹ 4 ಸಾವಿರ ಪ್ಯಾಕೇಜ್ ನೀಡುತ್ತಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವು ರೈತರಿಗೆ ₹ 2,769 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ವಿವಿಧ ಯೋಜನೆಗಳಲ್ಲಿ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯಲಾಗಿದೆ. ರಾಜ್ಯದ ವಿದ್ಯಾವಂತರು ಸರ್ಕಾರದ ಸಾಧನೆ ಗಮನಿಸಿಯೇ ವಿಧಾನ ಪರಿಷತ್‌ನ 4 ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ’ ಎಂದರು.

ಬಿಜೆಪಿ ಗುರಿ: ‘ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ಒದಗಿಸುವುದು ಬಿಜೆಪಿಯ ಗುರಿ. ಆರೋಗ್ಯಕರ ಜೀವನಕ್ಕಾ ಸಿರಿಧಾನ್ಯಗಳ ಆಹಾರಕ್ಕೆ ₹ 197 ಕೋಟಿ ಮೀಸಲಿಡಲಾಗಿದೆ. 23 ಲಕ್ಷ ರೈತರಿಗೆ ಬೆಳೆ ಪರಿಹಾರ ನೀಡಲಾಗಿದೆ. ಹೂ ಮತ್ತು ತೋಟಗಾರಿಕೆ, ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಲಾಗಿದೆ. 1,493 ಪುನರ್ವಸತಿ ಕೇಂದ್ರಗಳ ಸ್ಥಾಪನೆ ಮೂಲಕ ಸಂಕಷ್ಟದಲ್ಲಿದ್ದ ಜನರ ಕೈಹಿಡಿಯಲಾಗಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಸ್ವಾಮಿ, ಗ್ರಾಮಾಂತರ ಘಟಕದ ಅಧ್ಯಕ್ಷ ಸಿ.ಡಿ.ರಾಮಚಂದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಗ್ರಾಮಾಂತರ ಅಧ್ಯಕ್ಷ ಶಶಿಕುಮಾರ್, ಜಿಲ್ಲಾ ರೈತ ಮೋರ್ಚಾ ಖಜಾಂಚಿ ರಾಜೇಶ್‌ಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT