ಗುರುವಾರ , ಏಪ್ರಿಲ್ 22, 2021
28 °C

ಮಾವಿನ ಹೂ ಉಳಿದರೆ ಉತ್ತಮ ಫಸಲು; ವೈಜ್ಞಾನಿಕ ಕ್ರಮವಹಿಸಲು ತಜ್ಞರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಮಾವು ಬೆಳೆಗಾರರು ಮಾವಿನ ಹೂ ರಕ್ಷಣೆಗೆ ಅಗತ್ಯವಾದ ಕ್ರಮಕೈಗೊಳ್ಳಬೇಕು. ಹೂವನ್ನು ಸಮರ್ಪಕವಾಗಿ ಉಳಿಸಿಕೊಂಡರೆ ಮಾತ್ರ ಉತ್ತಮ ಫಸಲು ಪಡೆಯಲು ಸಾಧ್ಯವಾಗುತ್ತದೆ ಎಂದು ಹೊಗಳಗೆರೆ ತೊಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಆರ್.ಕೆ.ರಾಮಚಂದ್ರ ಹೇಳಿದರು.

ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸಮೀಪ ಮಾವಿನ ತೋಟವೊಂದಕ್ಕೆ ಮಂಗಳವಾರ ಭೇಟಿ ನೀಡಿ ಹೂವಿನ ಪರಿಸ್ಥಿತಿ ಪರಿಶೀಲಿಸಿದ ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದರು.

ಮಾವು ತಾಲ್ಲೂಕಿನ ಜನರ ಜೀವಾಳ. ಫಸಲು ಉಳಿಸಿಕೊಳ್ಳಲು ವೈಜ್ಞಾನಿಕ ಕ್ರಮ ಅನುಸರಿಸಬೇಕು. ರೋಗ ಹಾಗೂ ಕೀಟ ಬಾಧೆಯನ್ನು ನಿವಾರಿಸಬೇಕು ಎಂದು ಸಲಹೆ ಮಾಡಿದರು.

ಸಾಮಾನ್ಯವಾಗಿ ಮಾವಿನ ಬೆಳೆಯನ್ನು ಜಿಗಿ ಹುಳು, ಹಣ್ಣು ನೊಣ, ಓಟೆ ಕೊರಕ, ಎಲೆಗಂಟು ಮಸಕ, ರೆಂಬೆ ಕುಡಿ ಕೊರಕ, ಹಿಟ್ಟು ತಿಗಣಿ, ಎಲೆ ಭಕ್ಷಕ, ಕೆಂಪು ಇರುವೆ ಹಾಗೂ ಕಾಂಡ ಕೊರಕ ಹುಳು ಬಾಧೆ ಕಾಡುತ್ತದೆ. ಇಷ್ಟು ಮಾತ್ರವಲ್ಲದೆ ಚಿಟ್ಟು ರೋಗ, ದುಂಡಾಣು ಎಲೆ ಚುಕ್ಕೆ ರೋಗ ಪೀಡಿಸುತ್ತವೆ. ಇದು ಒಂದೊಂದು ಕಡೆ ಒಂದೊಂದು ಪೀಡೆ ಕಾಣಿಸಿಕೊಳ್ಳಲೂ ಬಹುದು ಎಂದು ಹೇಳಿದರು.

ಈಗ ಮಾವಿನ ಹೂವಿಗೆ ಜಿಗಿ ಹುಳುವಿನ ಕಾಟ ಕಂಡುಬಂದಿದೆ. ಇದು ಹೂ ಗೊಂಚಲಿನ ರಸ ಹೀರುತ್ತದೆ. ಇದರಿಂದಾಗಿ ಹೂಗಳು ಒಣಗಿ ಉದುರುತ್ತವೆ. ಅವು ಸ್ರವಿಸುವ ಅಂಟು ಪದಾರ್ಥದಿಂದಾಗಿ ಹೂ ಗೊಂಚಲಿನಲ್ಲಿ ಬೂಸ್ಪ್ ಕಾಣಿಸಿಕೊಳ್ಳುತ್ತದೆ. ಜಿಗಿ ಹುಳು ನಿಯಂತ್ರಣಕ್ಕೆ 4 ಗ್ರಾಂ ಕಾರ್ಬಾರಿಲ್, ಅಥವಾ 2 ಮಿ.ಲೀ ಮೆಲಾಥಿಯಾನ್ 50 ಇಸಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ಸಲಹೆ ಮಾಡಿದರು.

ಮಾವಿನ ಬೆಳೆಯಲ್ಲಿ ಸಾಮಾನ್ಯ ಹುಳು ನಿಯಂತ್ರಣಕ್ಕೆ ಇಮ್ಡಾ ಒಂದು ಲೀಟರ್ ನೀರಿಗೆ ಅರ್ಧ ಮಿ ಲೀ ಬೆರೆಸಿ ಸಿಂಪಡಣೆ ಮಾಡಬೇಕು. ಕರಾಟೆ 1 ಲೀಟರ್ ನೀರಿಗೆ 5.5 ಮಿಲೀ ಎರಡನೇ ಸಿಂಪಡಣೆಗೆ ಬಳಸಬೇಕು ಎಂದು ಹೇಳಿದರು.

ಮಾವು ಬೆಳೆಗಾರರು ಮಾವಿನ ಹೂ ರಕ್ಷಣೆಗೆ ಪೂರಕವಾಗಿ ಕೈಗೊಳ್ಳುವ ಕ್ರಮಗಳ ಜತೆಗೆ, ಪರಾಗ ಸ್ಪರ್ಶ ನಡೆಯುವ ಸಮಯದಲ್ಲಿ ಯಾವುದೇ ಔಷಧ ಸಿಂಪಡಣೆ ಮಾಡಬಾರದು. ಈ ಹಂತದಲ್ಲಿ ಔಷಧ ಸಿಂಪಡಣೆ ಮಾಡುವುದರಿಂದ ಪರಾಗ ಸ್ಪರ್ಶಕ್ಕೆ ಸಹಕರಿಸುವ ಕೀಟಗಳು ಸಾವನ್ನಪ್ಪುತ್ತವೆ. ಪರಾಗಸ್ಪರ್ಶ ಪರಿಣಾಮಕಾರಿಯಾಗಿ ನಡೆಯದಿದ್ದರೆ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಕಟ್ಟುವುದಿಲ್ಲ
ಎಂದು ಹೇಳಿದರು.

ರೈತರು ಮಾವು ಕೃಷಿಯಲ್ಲಿ ತಮ್ಮ ಅನುಭವದ ಜತೆಗೆ, ತಜ್ಞರು ನೀಡುವ ಸಲಹೆಗಳನ್ನು ಗೌರವಿಸಿ ಜಾರಿಗೆ ತರಬೇಕು. ಹಾಗೆ ಮಾಡುವುದರಿಂದ ಮಾವಿನ ಇಳುವರಿ ಹೆಚ್ಚುತ್ತದೆ. ಲಾಭದ ಪ್ರಮಾಣ ಹೆಚ್ಚುತ್ತದೆ. ಸರಿಯಾದ ಸಮಯದಲ್ಲಿ ಮಾವಿನ ಮರಗಳನ್ನು ಸವರುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ಮರದ ಎಲ್ಲ ಭಾಗಕ್ಕೆ ಬಿಸಿಲು ಬೀಳುವಂತೆ ಕೊಂಬೆಗಳನ್ನು ಸವರಬೇಕು ಎಂದರು.

ಮಾವು ಬೆಳೆಗಾರರಾದ ನಾರಾಯಣಸ್ವಾಮಿ, ಮುನಿವೆಂಕಟೇ ಗೌಡ, ಜಯರಾಮರೆಡ್ಡಿ, ಕೃಷ್ಣಪ್ಪ, ಶ್ರೀರಾಮರೆಡ್ಡಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು