ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ನಿರ್ವಹಣೆಯಿಂದ ಉತ್ತಮ ಇಳುವರಿ

ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ಅಭಿಪ್ರಾಯ
Last Updated 30 ನವೆಂಬರ್ 2019, 14:16 IST
ಅಕ್ಷರ ಗಾತ್ರ

ಕೋಲಾರ: ‘ಹಿಪ್ಪುನೇರಳೆ ತೋಟಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಾಗ ಉತ್ತಮ ಇಳುವರಿ ಪಡೆಯಲು ಸಾಧ್ಯ’ ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಎಂ.ಕೆ.ಪ್ರಭಾಕರ್ ತಿಳಿಸಿದರು.

ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ವತಿಯಿಂದ ರೇಷ್ಮೆ ಬಿತ್ತನೆ ಕೋಠಿ ಸಭಾಂಗಣದಲ್ಲಿ ಶನಿವಾರ ನಡೆದ ರೇಷ್ಮೆ ಬೆಳೆಗಾರರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ₨ ೧೫.೫೦ ಕೋಟಿ ಖರ್ಚು ಮಾಡಲಾಗಿದ್ದು, ಇದು ವ್ಯರ್ಥವಾಗಬಾರದು’ ಎಂದು ಹೇಳಿದರು.

‘ರಾಜ್ಯದಲ್ಲೇ ಅತಿ ಹೆಚ್ಚು ಬೈವೋಲ್ಟೀನ್ ಗೂಡು ವಹಿವಾಟು ನಡೆಸಿರುವ ಜಿಲ್ಲೆ ಕೋಲಾರ. ನವೆಂಬರ್‌ನಲ್ಲಿ ಕೋಲಾರ ಮಾರುಕಟ್ಟೆಯಲ್ಲಿ ೮೦ ಟನ್ ಗೂಡು ವಹಿವಾಟು ನಡೆದರೆ ಇದರಲ್ಲಿ ೭೦ ಟನ್ ಜಿಲ್ಲೆಯ ರೈತರು ಬೆಳೆದಿದ್ದಾರೆ’ ಎಂದರು.

‘ರೇಷ್ಮೆ ಚಾಕಿ ಸಾಕಾಣಿಕೆದಾರರ ಮೇಲೆ ನಿಗಾ ಇಡಲಾಗಿದ್ದು, ಪ್ರತಿ ಚಾಕಿ ಸೆಂಟರ್‌ಗಳಿಗೆ ಮೊಟ್ಟೆ ಚಾಕಿಗೆ ಕಾಲಾವಧಿ ನಿಗದಿಪಡಿಸಲಾಗಿದೆ. ಇದನ್ನು ಮೀರಿದರೆ ಪ್ರೋತ್ಸಾಹಧನ ನೀಡುವುದಿಲ್ಲ. ಕಾಮಸಮುದ್ರ ಭಾಗದ ಕೆಲ ರೈತರು ಮಂಡ್ಯ, ದಾವಣಗೆರೆ ಇತರೆ ಭಾಗದಿಂದ ತಂದಿದ್ದರು, ಜಿಲ್ಲೆಯ ಚಾಕಿಸಾಕಾಣಿಕೆದಾರರಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ಹೊರ ಭಾಗದಿಂದ ತಂದ ಚಾಕಿಗೂ ಪ್ರೋತ್ಸಾಹಧನ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಇಲಾಖೆಗೆ ಅನುದಾನ ₨ ೩ರಿಂದ ₨ ೪ ಕೋಟಿ ಅನುದಾನ ಸಿಗಬಹುದು. ಆದರೆ ನರೇಗಾ ಯೋಜನೆಡಿ ₨ ೧೫.೫೦ ಕೋಟಿ ಬಳಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಇಲಾಖೆ ಮಾಡಲಾಗದ ಸಾಧನೆ ಜಿಲ್ಲೆಯಲ್ಲಿ ಆಗಿದೆ’ ಎಂದು ತಿಳಿಸಿದರು.

‘ನರೇಗಾ ಯೋಜನೆಯಡಿ ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಿದ ತೋಟಗಳ ನಿರ್ವಹಣೆಗೆಂದು ೨ ಮತ್ತು ೩ನೇ ವರ್ಷ ನೀಡುವ ಅನುದಾನವನ್ನು ರೈತರು ಸರಿಯಾಗಿ ಸದ್ಬಳಕೆ ಮಾಡಿಕೊಂಡಿದ್ದಾರೆಯೇ ಇಲ್ಲವೇ ಎಂಬುದನ್ನು ತೋಟಗಳನ್ನು ನೋಡಿದಾಗ ತಿಳಿಯುತ್ತದೆ. ಇಲಾಖೆ ಮೇಲಾಧಿಕಾರಿಗಳು ಕೇಂದ್ರದ ತಂಡ ಭೇಟಿ ನೀಡಿ ಪರಿಶೀಲನೆ ವೇಳೆ ಫಲಿತಾಂಶ ಕಾಣದಿದ್ದಲ್ಲಿ ಬೊಟ್ಟು ಮಾಡಿ ತೊರಿಸುವಂತಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ಕೋರಿದರು.

ರೇಷ್ಮೆ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಶಂಕರೇಗೌಡ ಮಾತನಾಡಿ, ‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಲು ಸಮಯ ಕೇಳಲಾಗಿದ್ದು, ಉಪ ಚುಮಾವಣೆ ಮುಗಿದ ನಂತರ ಸಮಯ ತಿಳಿಸುವ ಭರವಸೆ ಸಿಕ್ಕಿದೆ’ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ದೊಡ್ಡಮಲ್ಲೆ ಗೋಪಾಲಪ್ಪ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ರಮೇಶ್, ಬಂಗಾರಪೇಟೆ ತಾಲ್ಲೂಕು ಮಂಜುನಾಥ್, ಜಿಲ್ಲಾ ಸಂಘಂದ ನಿರ್ದೇಶಕ ವೆಂಕಟಾಚಲಪತಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುನಾಥ್, ಎಸ್.ಎನ್.ಶ್ರೀನಿವಾಸ್, ವೆಂಕಟೇಶಪ್ಪ, ನಾಗರಾಜ್, ಅಶ್ವತ್ಥನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT