ಸರ್ಕಾರಿ ಕಾಲೇಜುಗಳಲ್ಲಿ ಸಮಸ್ಯೆ ಬಗೆಹರಿಸಲು ಭರವಸೆ

7
ಪರಂಪರೆ ಕೂಟ, ಸಾಂಸ್ಕೃತಿಕ ಕಾರ್ಯ ಚಟುವಟಿಕೆ ಉದ್ಘಾಟನಾ ಸಮಾರಂಭ

ಸರ್ಕಾರಿ ಕಾಲೇಜುಗಳಲ್ಲಿ ಸಮಸ್ಯೆ ಬಗೆಹರಿಸಲು ಭರವಸೆ

Published:
Updated:
Deccan Herald

ಕೋಲಾರ: ‘ಸರ್ಕಾರಿ ಕಾಲೇಜುಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಭರವಸೆ ನೀಡಿದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಂಪರೆ ಕೂಟ ಮತ್ತು ಸಾಂಸ್ಕೃತಿಕ ಕಾರ್ಯ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಈಗಾಗಲೇ ಪ್ರಾಂಶುಪಾಲರಿಂದ ಸಮಸ್ಯೆಗಳ ಪಟ್ಟಿ ತೆಗೆದುಕೊಂಡು ಅಗತ್ಯ ಅನುದಾನ ಬಿಡುಗಡೆಗೆ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದ್ದು, ಹಣ ಬಿಡುಗಡೆಗೆ ಮಾಡುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ’ ಎಂದರು.

‘ಹೆಣ್ಣು ಮಕ್ಕಳ ಮೇಲೆ ವಿಶ್ವಾಸವಿಟ್ಟು ಪೋಷಕರು ಕಾಲೇಜಿಗೆ ಕಳುಹಿಸುವ ನಂಬಿಕೆ ಉಳಿಸಿಕೊಳ್ಳಬೇಕು. ಸರಿಯಾದ ರೀತಿ ಪ್ರೋತ್ಸಾಹ ಸಿಕ್ಕಿದೆ ಆದರೆ ನಂದಿನಿ ಅಂತಹ ಮತ್ತಷ್ಟು ಸಾಧಕರು ಸೃಷ್ಟಿಯಾಗುವುದು ಖಚಿತ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಬೇಕು’ ಎಂದು ಹೇಳಿದರು.

‘ಈ ಹಿಂದೆ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಪೋಷಕರು ಚಿಂತಿಸುವಂತಾಗಿತ್ತು. ಇಷ್ಟು ಸುಲಭವಾಗಿ ಕಳುಹಿಸುತ್ತಿರಲಿಲ್ಲ. ಅದರೆ ಈಗಾ ಚೇತರಿಸಿಕೊಂಡಿದ್ದಾರೆ ಎಂಬುವುದಕ್ಕೆ ವಿದ್ಯಾರ್ಥಿಗಳ ದಾಖಲಾತಿಯೇ ಸಾಕ್ಷಿ’ ಎಂದರು.

‘ವಿದ್ಯಾರ್ಥಿಗಳು ಸಾಧಕರನ್ನು ಸ್ಪೂರ್ಥಿಯಾಗಿ ತೆಗೆದುಕೊಂಡಾಗ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಲತಾ ಕುಮಾರಿ ತಿಳಿಸಿದರು.

‘ಇತ್ತೀಚಿನಗಳಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರು ಇದ್ದಾರೆ. ಅದೇ ರೀತಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಮುಂದಿದ್ದಾರೆ. ಎದುರಾಗುವ ಸವಾಲುಗಳನ್ನು ಮೆಟ್ಟಿನಿಂತು ಸಾಧನೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಪ್ರತಿಯೊಬ್ಬರ ಯಶಸ್ಸಿನ ಹಿಂದೆ ದೊಡ್ಡ ಸಂಘರ್ಷವೇ ಇರುತ್ತದೆ. ಅನುಭವಿಗಳ ಮಾತು ಕೇಳಿದರೆ ತಮ್ಮ ಗುರಿ ಮುಟ್ಟಲು ಸ್ಪೂರ್ಥಿ ಸಿಗುತ್ತದೆ. ಯಾವುದೇ ಒಂದು ವಿಚಾರದಲ್ಲಿ ತಾಳ್ಮೆ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದರು.

‘ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಪೋಷಕರು ಕಾಲೇಜಿಗೆ ಕಳುಹಿಸುತ್ತಾರೆ. ಅವರ ಕನಸ್ಸನ್ನು ನನಸು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ದ್ವೇಷ, ಆಸೂಯೆ, ಕೀಳರಿಮೆ ಬಿಟ್ಟು ಧೈರ್ಯದಿಂದ ಮುನ್ನುಗಿದಾಗ ಅವಕಾಶಗಳು ಹುಡುಕಿಕೊಂಡು ಬರುತ್ತವೆ’ ಎಂದು ಹೇಳಿದರು.

‘ನಿಮ್ಮಲ್ಲಿರುವ ವಿಫಲತೆಗಳ ಬಗ್ಗೆ ಬೇರೆಯವರು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕೊಡಬೇಡಿ. ಸೋಲನ್ನು ಒಪ್ಪಿಕೊಳ್ಳದೆ ಸಮಾಜದಲ್ಲಿ ತಪ್ಪು ಮಾಡುವವರನ್ನು ಪ್ರಶ್ನಿಸುವಂತರಾಗಬೇಕು. ಹಿರಿಯರ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಿ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲ್ಲೇ ಜೀವನದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು ಎಂಬ ಆಸೆ ಇರುತ್ತದೆ. ಅದರ ಈಡೇರಿಕೆಗೆ ಅಗತ್ಯವಾಗಿ ಶಿಕ್ಷಕರಿಂದಲೂ ಮಾರ್ಗದರ್ಶನ ಸಿಗುತ್ತದೆ. ಆದರೆ ತಮ್ಮಲ್ಲಿ ಧೈರ್ಯ ಎಂಬುದು ಬಹಳ ಮುಖ್ಯ. ಒಂದು ಪ್ರಯತ್ನದಲ್ಲಿ ವಿಫಲತೆ ಕಂಡಾಗ ಮತ್ತೆ ಮತ್ತೆ ಪ್ರಯತ್ನಿಸುವ ಮೂಲಕ ಸಾಧನೆ ತೋರಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಸಚಿವ ಎಂ.ಶಂಕರರೆಡ್ಡಿ ಮಾತನಾಡಿ, ‘ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

‘ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವಿಭಜನೆಯಿಂದ ಸುಲಭವಾಗಿದೆ. ಅಧುನಿಕ ತಂತ್ರಜ್ಞಾನದಿಂದ ವಿದ್ಯಾರ್ಥಿಗಳ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಲಾಗುತ್ತದೆ. ಕಾಲಕಾಲಕ್ಕೆ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸುವುದು ಹಿಂದಿನಂತೆ ವಿಳಂಭವಾಗುವುದಿಲ್ಲ’ ಎಂದು ಹೇಳಿದರು.

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ವರ್ಧೆ ನೀಡುವ ಮಟ್ಟಿಗೆ ಬೆಳೆಯಲು ಸರ್ಕಾರಿ ಮಹಿಳಾ ಕಾಲೇಜು ನಿದರ್ಶನವಾಗಿದೆ. ಉತ್ತರ ವಿಶ್ವವಿದ್ಯಾಲಯದಿಂದ ಐಎಎಸ್, ಐಪಿಎಸ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ನಿರ್ಧರಿಸಿದ್ದು, ಇದರ ಉಪಯೋಗಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು’ ಎಂದು ಕೋರಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಅಶ್ವಥ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವಿಜಯ್‌ಕುಮಾರ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !