ಗುರುವಾರ , ಮೇ 19, 2022
21 °C
ಪಕ್ಷಕ್ಕೆ ದ್ರೋಹ ಬಗೆದರು: ನಗರಸಭಾ ಸದಸ್ಯ ಪ್ರವೀಣ್‌ಗೌಡ ತೀವ್ರ ವಾಗ್ದಾಳಿ

’ಪದಚ್ಯುತಿಗೆ ಗೋವಿಂದರಾಜು–ಶ್ರೀನಿವಾಸಗೌಡರು ಕಾರಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಾನು ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳ್ಳಲು ಶಾಸಕ ಕೆ.ಶ್ರೀನಿವಾಸಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ನೇರ ಕಾರಣರು’ ಎಂದು ನಗರಸಭಾ ಸದಸ್ಯ ಎನ್.ಎಸ್.ಪ್ರವೀಣ್‍ಗೌಡ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಕುತಂತ್ರದಿಂದ ಉಪಾಧ್ಯಕ್ಷಗಾದಿಯಿಂದ ಕೆಳಗಿಳಿದೆ ಎಂದು ಗೋವಿಂದರಾಜು ಅವರು ಹೇಳಿರುವುದರಲ್ಲಿ ಅರ್ಥವಿಲ್ಲ. ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರು ವಿಪ್ ಜಾರಿ ಮಾಡಿದ್ದರೂ ಗೋವಿಂದರಾಜು ಅವರು ಪಕ್ಷದ 3 ಮಂದಿ ನಗರಸಭಾ ಸದಸ್ಯರು ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯದ ಪರ ನಿಲ್ಲದಂತೆ ತಡೆಯುವ ಕೆಲಸ ಮಾಡಲಿಲ್ಲ’ ಎಂದು ಆರೋಪಿಸಿದರು.

‘ಗೌರವಯುತ ಸ್ಥಾನದಲ್ಲಿರುವ ಗೋವಿಂದರಾಜು ಅವರೇ ವಿಪ್ ಉಲ್ಲಂಘಿಸಿ ಸಭೆಗೆ ಗೈರಾಗಿದ್ದು ಏಕೆ? ಒಬ್ಬ ಭ್ರಷ್ಟ, ಕೆಲಸಕ್ಕೆ ಬಾರದ ವ್ಯಕ್ತಿ ಕಾಂಗ್ರೆಸ್‌ನ ಮುಬಾರಕ್‌ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಸಿದ ಪಿತೂರಿಗೆ ನಮ್ಮ ಪಕ್ಷದ ಮುಖಂಡರೇ ತಲೆಬಾಗಿದ್ದು ದುರಂತ’ ಎಂದು ಮಾರ್ಮಿಕವಾಗಿ ನುಡಿದರು.

‘ನಗರೋತ್ಥಾನ ಯೋಜನೆ ಕುರಿತು ಚರ್ಚಿಸಲು ಸಂಸದರು ಕರೆದಾಗ ಹೋಗಿದ್ದೇನೆ. ಆದರೆ, ಮುಬಾರಕ್ ಮತ್ತು ಅವರ ಅಕ್ರಮ ಕೂಟದ ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ಬಿಜೆಪಿ ಪರ ಇದ್ದೇನೆಂದು ಅಪಪ್ರಚಾರ ನಡೆಸಿದರು. ನಮ್ಮದೇ ಪಕ್ಷದವರಾದ ವಿಧಾನ ಪರಿಷತ್‌ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿಯವರು ರಾಮು ಅವರನ್ನು ಬಳಸಿಕೊಂಡು ನನ್ನನ್ನು ಅಧಿಕಾರದಿಂದ ಕೆಳಗಿಳಿಸುವ ಪಿತೂರಿ ಮಾಡಿದರು’ ಎಂದು ದೂರಿದರು.

ಕೊನೆ ಕ್ಷಣದಲ್ಲಿ ಗೈರು: ‘ಜೆಡಿಎಸ್‍ನ 8 ಮಂದಿ ನಗರಸಭಾ ಸದಸ್ಯರು ಮತ್ತು ಗೋವಿಂದರಾಜು ಅವರು ಅವಿಶ್ವಾಸ ನಿರ್ಣಯದ ಸಭೆಗೆ ಬಂದು ನನ್ನ ಪರ ಮತ ಹಾಕಿದ್ದರೆ ಅಧಿಕಾರ ಹೋಗುತ್ತಿರಲಿಲ್ಲ. ಗೋವಿಂದರಾಜು ಸಭೆಗೆ ಬರುತ್ತೇನೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಗೈರಾದರು. ನಮ್ಮದೇ ಪಕ್ಷದ ಅಲ್ಪಸಂಖ್ಯಾತ ಸದಸ್ಯರಲ್ಲಿ ಯಾರಾದರೂ ಉಪಾಧ್ಯಕ್ಷರಾಗಬೇಕು ಎಂದು ಬಯಸಿದ್ದರೆ ರಾಜೀನಾಮೆ ಕೊಡುತ್ತಿದ್ದೆ. ಆದರೆ, ಕಾಂಗ್ರೆಸ್‍ನ ಅಸ್ಲಂ ಪಾಷಾ ಅವರನ್ನು ಉಪಾಧ್ಯಕ್ಷರಾಗಿ ಮಾಡಲು ನನ್ನನ್ನೇಕೆ ಬಲಿ ಕೊಡಬೇಕಿತ್ತು? ಎಂದು ಪ್ರಶ್ನಿಸಿದರು.

‘ನನ್ನನ್ನು ಉಪಾಧ್ಯಕ್ಷಗಾದಿಯಲ್ಲಿ ಉಳಿಸಲು ಸ್ವಪಕ್ಷೀಯ ಜೆಡಿಎಸ್ ಮುಖಂಡರೇ ಮನಸ್ಸು ಮಾಡಲಿಲ್ಲ. ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜರಾಜೇಶ್ವರಿ ಅವರು ವಿಪ್‌ ಜಾರಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದರು. ಆದರೆ, ಚೌಡರೆಡ್ಡಿ ಅವರು ಮುಬಾರಕ್‌ ಜತೆ ಸೇರಿ ಪಕ್ಷಕ್ಕೆ ದ್ರೋಹ ಬಗೆದರು. ಚೌಡರೆಡ್ಡಿ ಅವರು, ವಿಪ್ ಉಲ್ಲಂಘನೆಯಿಂದ ಏನೂ ಆಗಲ್ಲ. ಪ್ರವೀಣ್‍ಗೌಡರನ್ನು ಕೆಳಗಿಳಿಸಿ ಎಂದು ಸ್ವಪಕ್ಷೀಯ ಸದಸ್ಯರಿಗೆ ಸದಸ್ಯರಿಗೆ ಸೂಚಿಸಿದ್ದರು. ಇಂತಹ ಮುಖಂಡರಿಂದ ಪಕ್ಷ ಉದ್ದಾರವಾಗುತ್ತಾ? ಎಂದು ಟೀಕಿಸಿದರು.

‘ಅವಿಶ್ವಾಸ ನಿರ್ಣಯಕ್ಕೆ ಸೋಲಾಗುತ್ತದೆ ಎಂಬ ನಂಬಿಕೆಯಿತ್ತು. ಆದರೆ, ನಮ್ಮದೇ ಪಕ್ಷದ ಸದಸ್ಯರು ಮುಬಾರಕ್‌ ಜತೆ ಶಾಮೀಲಾಗಿದ್ದಾರೆ ಎಂದು ತಿಳಿದ ನಂತರ ಹಾಗೂ ಗೋವಿಂದರಾಜು ಅವರು ಸಭೆಗೆ ಗೈರಾದಾಗ ಪ್ರಯತ್ನ ಕೈಚೆಲ್ಲಿದೆ. ಶಾಸಕರೊಬ್ಬರನ್ನು ಬಿಟ್ಟು ಉಳಿದೆಲ್ಲರೂ ಪ್ರವೀಣ್‌ಗೌಡರ ಪದಚ್ಯುತಿ ತಡೆಗೆ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟಿದ್ದೇವೆ ಎಂದು ಗೋವಿಂದರಾಜು ಹೇಳಿದ್ದಾರೆ. ಆದರೆ, ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿರುವುದು ನನ್ನ ವಿರುದ್ಧವಾಗಿ’ ಎಂದು ಕುಟುಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.