ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಗಾರನ ಸಾವು: ಪರಿಹಾರಕ್ಕೆ ಧರಣಿ

ಅಧಿಕಾರಿಗಳಿಗೆ ಜಲಗಾರರ ಕಾಳಜಿಯಿಲ್ಲ: ಧರಣಿನಿರತರ ಆಕ್ರೋಶ
Last Updated 1 ಡಿಸೆಂಬರ್ 2021, 16:13 IST
ಅಕ್ಷರ ಗಾತ್ರ

ಕೋಲಾರ: ವಿದ್ಯುತ್‌ ಅವಘಡದಿಂದ ಮೃತಪಟ್ಟ ಜಿಲ್ಲೆಯ ಜಕ್ಕರಸಕುಪ್ಪ ಗ್ರಾಮ ಪಂಚಾಯಿತಿಯ ಜಲಗಾರ ರಂಗಪ್ಪ ಅವರ ಕುಟುಂಬಕ್ಕೆ ಪರಿಹಾರ ಕೊಡುವಂತೆ ಒತ್ತಾಯಿಸಿ ಜಿಲ್ಲಾ ಗ್ರಾ.ಪಂ ನೌಕರರ ಸಂಘದ ಸದಸ್ಯರು ಇಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿದರು.

‘ಗ್ರಾ.ಪಂಗಳಲ್ಲಿ ಕೆಲಸ ಮಾಡುವ ಜಲಗಾರರು ಮೂಲಸೌಕರ್ಯಗಳಲ್ಲಿದೆ ಬವಣೆಪಡುವಂತಾಗಿದೆ. ಅಧಿಕಾರಿಗಳು ಜಲಗಾರರನ್ನು ನಿರ್ಲಕ್ಷಿಸಿದ್ದಾರೆ. ಸ್ವಚ್ಛತಾ ಕಾರ್ಯ ನಿರ್ವಹಿಸುವ ಜಲಗಾರರಿಗೆ ಸುರಕ್ಷತಾ ಸಲಕರಣೆಗಳನ್ನು ಕೊಟ್ಟಿಲ್ಲ. ಅಧಿಕಾರಿಗಳಿಗೆ ಜಲಗಾರರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಜಲಗಾರ ರಂಗಪ್ಪ ಅವರ ಸಾವಿಗೆ ಗ್ರಾ.ಪಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ರಂಗಪ್ಪರ ಸಾವಿನ ನಂತರ ಅವರ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆದರೆ, ಅಧಿಕಾರಿಗಳು ಸೌಜನ್ಯಕ್ಕೂ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿಲ್ಲ. ಕುಟುಂಬಕ್ಕೆ ಪರಿಹಾರ ಸಹ ಕೊಟ್ಟಿಲ್ಲ’ ಎಂದು ಸಿಐಟಿಯು ಜಿಲ್ಲಾ ಘಟಕದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಕಿಡಿಕಾರಿದರು.

‘ಗ್ರಾಮ ಸ್ವರಾಜ್ಯ ಕನಸಿನೊಂದಿಗೆ ಅಸ್ತಿತ್ವಕ್ಕೆ ಬಂದ ಗ್ರಾ.ಪಂಗಳು ಅಧಿಕಾರಶಾಹಿಯ ನಿರ್ಲಕ್ಷ್ಯದಿಂದ ಸೊರಗಿವೆ. ಕೆಲ ಗೂಂಡಾ ಪ್ರವೃತ್ತಿಯ ರಾಜಕಾರಣಿಗಳು ಗ್ರಾ.ಪಂಗಳನ್ನು ಭ್ರಷ್ಟಾಚಾರದ ಕೇಂದ್ರಗಳನ್ನಾಗಿ ಮಾಡಿದ್ದಾರೆ. ಹಣಕ್ಕಾಗಿ ಅಧಿಕಾರಿಗಳನ್ನು ಶೋಷಿಸುತ್ತಿದ್ದಾರೆ. ಗ್ರಾಮಗಳ ಅಭಿವೃದ್ಧಿ ನಿರ್ಲಕ್ಷಿಸಿ ಕಾಮಗಾರಿಗಳಲ್ಲಿ ಜನರ ತೆರಿಗೆ ಹಣ ದೋಚುತ್ತಿದ್ದಾರೆ’ ಎಂದು ಆರೋಪಿಸಿದರು.

ಖಂಡನೀಯ: ‘ಸಂಸದ ಮುನಿಸ್ವಾಮಿ ಅವರು ಕಮ್ಮಸಂದ್ರ ಗ್ರಾ.ಪಂ ಪಿಡಿಒರನ್ನು ನಿಂದಿಸಿ ಬೆದರಿಕೆ ಹಾಕಿರುವುದು ಖಂಡನೀಯ. ಸಂಸದರು ತಮ್ಮ ಘನತೆ ಮರೆತು ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿರುವುದು ಖಂಡನೀಯ. ಅಧಿಕಾರಿಗಳು ಸಂಸದರ ಮನೆಯ ಕೂಲಿ ಆಳುಗಳಲ್ಲ. ಅಧಿಕಾರಿಗಳ ವಿರುದ್ಧ ಪದೇಪದೇ ನಾಲಿಗೆ ಹರಿಬಿಡುವ ಮುನಿಸ್ವಾಮಿ ಅವರಿಗೆ ಸ್ವಲ್ಪವೂ ಜವಾಬ್ದಾರಿಯಿಲ್ಲ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ರಾಜಕೀಯ ಒತ್ತಡಕ್ಕೆ ಮಣಿಯದೆ ಗ್ರಾ.ಪಂ ನೌಕರರಿಗೆ ರಕ್ಷಣೆ ನೀಡಬೇಕು. ಜಲಗಾರ ರಂಗಪ್ಪರ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಬೇಕು. ಜತೆಗೆ ಅವರ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು. ಪಿಡಿಒರನ್ನು ನಿಂದಿಸಿರುವ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಶ್ರೀನಿವಾಸರೆಡ್ಡಿ ಅವರ ಅಮಾನತು ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಸಂಸದರ ವಿರುದ್ಧ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಗ್ರಾ.ಪಂ ನೌಕರರ ಸಂಘದ ಅಧ್ಯಕ್ಷ ಅಮರನಾರಾಯಣ, ಕಾರ್ಯದರ್ಶಿ ಯಲ್ಲಪ್ಪ, ಖಜಾಂಚಿ ಕೇಶವರಾವ್, ಸದಸ್ಯರಾದ ರಮೇಶ್‌, ಶ್ರೀನಿವಾಸ್‌, ಮಂಜುನಾಥ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT