ಗುರುವಾರ , ಅಕ್ಟೋಬರ್ 28, 2021
19 °C

ಗ್ರಾ.ಪಂ. ಅನುದಾನ ದುರ್ಬಳಕೆ: ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ಬೇತಮಂಗಲ ಗ್ರಾ.ಪಂ.ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ₹ 1.4 ಕೋಟಿ ಅವ್ಯವಹಾರ ಸಂಬಂಧ ಸುದೀರ್ಘ ನಡೆಯಿತು. ಸೂಕ್ತ ದಾಖಲೆ ಮೂಲಕ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸದಸ್ಯರು ಪಟ್ಟುಹಿಡಿದರು.

ಕಳೆದ ಜನವರಿ ನಂತರ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಾಗಿನಿಂದ 14 ಮತ್ತು 15ನೇ ಹಣಕಾಸಿನ ಯೋಜನೆಯ ₹ 1.4 ಕೋಟಿ ಅನುದಾನದ ಬಗ್ಗೆ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸಭೆಯಲ್ಲಿ ಅನುಮೋದನೆ ಪಡೆಯದೆ ಅನುದಾನ ಪಾವತಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ 14 ಲೇಔಟ್‍ಗಳಿಗೆ ಖಾತೆ ಮಾಡಿದ್ದು, 1 ನಿವೇಶನ ಖಾತೆಗೆ ಗ್ರಾ.ಪಂ.ಗೆ ₹ 6,250 ಪಾವತಿ ಮಾಡಬೇಕೆಂಬ ಕಾನೂನು ಇದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಯಾರ ಗಮನಕ್ಕೂ ತರದೆ ನಿಗದಿತ ಶುಲ್ಕ ಪಡೆಯದೆ ಅಪ್ಸರ್ ಪಾಷಾ ಎಂಬುವರಿಗೆ 40 ಖಾತೆ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

‘ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿರುವ ಸಂಬಂಧ ಲೋಕನಾಯ್ಡು, ಅಮರೇಂದ್ರ ಮೌನಿ, ಶಶಿ, ಅಕಿಲ್ ಪಾಷಾ, ಇನಾಯಿತ್ ಉಲ್ಲಾಗೆ ತಲಾ ₹ 49 ಸಾವಿರದಂತೆ ಒಟ್ಟು ₹ 4 ಲಕ್ಷ ಪಾವತಿ ಮಾಡಲಾಗಿದೆ’ ಎಂದು ಪಿಡಿಒ ಭಾಸ್ಕರ್ ಸಭೆಗೆ ತಿಳಿಸಿದರು.

ಗ್ರಾಮದ ಶ್ರೀಮಾರುತಿ ಎಂಟರ್ ಪ್ರೈಸಸ್‌ ಅಂಗಡಿಯಿಂದ ಪೈಪ್‌ ಖರೀದಿ ಮಾಡಲು ₹ 15 ಲಕ್ಷ ಪಾವತಿ ಮಾಡಲಾಗಿದೆ. ಶ್ರೀಲಕ್ಷ್ಮೀವೆಂಕಟೇಶ್ವರ ಹಾರ್ಡ್‌ವೇರ್ ಅಂಗಡಿ ಮಾಲೀಕರಿಗೆ ₹ 5 ಲಕ್ಷ ಪಾವತಿ ಮಾಡಿದ್ದಾರೆ. ₹ 20 ಲಕ್ಷಕ್ಕೆ ಎಷ್ಟು ಮೊತ್ತದ ಪೈಪ್‌ಗಳು ಹಾಗೂ ವಿದ್ಯುತ್ ದೀಪ ಖರೀದಿ ಮಾಡಬಹುದು ಎಂದು ಸದಸ್ಯರು ಪ್ರಶ್ನಿಸಿದರು.

‘ಅನುದಾನ ಬಳಕೆಗೆ ಸೂಕ್ತ ದಾಖಲೆಗಳಿವೆ. 2-3 ದಿನಗಳಲ್ಲಿ ಸದಸ್ಯರಿಗೆ ನೀಡುತ್ತೇನೆ. ಯಾವುದೇ ಅಕ್ರಮ ನಡೆದಿರುವುದು ಸಾಬೀತಾದರೆ ಕಾನೂನು ರೀತಿಯಲ್ಲಿ ಯಾವುದೇ ಶಿಕ್ಷೆಯಾದರೂ ಅನುಭವಿಸಲು ಸಿದ್ಧ’ ಎಂದು ಪಿಡಿಒ ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಅಧ್ಯಕ್ಷರಾದ ಮಮತಾ ಗಣೇಶ್, ಉಪಾಧ್ಯಕ್ಷ ನಂದೀಶ್, ಕಾರ್ಯದರ್ಶಿ ವೆಂಕಟೇಶ್ ಹಾಗೂ ಸದಸ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು