ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಮನುಷ್ಯನ ದುರಾಸೆಗೆ ಪರಿಸರ ನಾಶ

Last Updated 21 ಆಗಸ್ಟ್ 2021, 14:50 IST
ಅಕ್ಷರ ಗಾತ್ರ

ಕೋಲಾರ: ‘ಆಧುನಿಕತೆ ಬೆಳೆದಂತೆ ಬೃಹತ್ ಕಟ್ಟಡಗಳು ನಿರ್ಮಾಣಗೊಳುತ್ತಿವೆ. ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ಪರಿಸರವಾದಿ ತ್ಯಾಗರಾಜ್‌ ಕಳವಳ ವ್ಯಕ್ತಪಡಿಸಿದರು.

ಸ್ವರ್ಣಭೂಮಿ ಪ್ರತಿಷ್ಠಾನ, ಕ್ರೇಜಿ ಕ್ರೀಯೇಟರ್ಸ್ ಸಾಂಸ್ಕೃತಿಕ ಮತ್ತು ಕ್ರೀಡಾ ಯುವಕರ ಸಂಘದ ಸಹಯೋಗದಲ್ಲಿ ನಗರದ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೀಜದುಂಡೆ ಬಿತ್ತನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ. ಮನುಷ್ಯನಿಗೆ ಅಗತ್ಯವಾಗಿ ಬೇಕಿರುವ ಮೂಲಸೌಕರ್ಯವನ್ನು ನಿಸರ್ಗ ಕಲ್ಪಿಸಿದೆ. ಒಂದು ಮರ ದಿನಕ್ಕೆ ಒಂದು ಕೆ.ಜಿ ಆಮ್ಲಜನಕ ಉತ್ಪಾದನೆ ಮಾಡುತ್ತದೆ, ಮರಗಳ ನಾಶದಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಅರಿತು ಅರಣ್ಯ ಸಂಪತ್ತು ಉಳಿಸಿ’ ಎಂದು ಕಿವಿಮಾತು ಹೇಳಿದರು.

‘ಮುಂದಿನ ಪೀಳಿಗೆಗೆ ಉತ್ತಮ ಗಾಳಿ ಮತ್ತು ಪರಿಸರ ಸಿಗುವಂತೆ ಮಾಡಲು ಯುವ ಸಮೂಹ ಜಾಗೃತಗೊಳ್ಳಬೇಕು. ವಾಹನ ಸಂಖ್ಯೆ ಹೆಚ್ಚಳದಿಂದ ವಾಯು ಮಾಲಿನ್ಯವಾಗುತ್ತಿದೆ. ಗಿಡ ಮರ ಬೆಳಸಿ ಪೋಷಿಸಬೇಕು’ ಎಂದು ಸ್ವರ್ಣಭೂಮಿ ಪ್ರತಿಷ್ಠಾನದ ಬಿ.ಶಿವಕುಮಾರ್ ಸಲಹೆ ನೀಡಿದರು.

‘ಅಂತರಗಂಗೆ ಬೆಟ್ಟದಲ್ಲಿ ಬೆಳೆದಿರುವ ನೀಲಗಿರಿ ಮರಗಳಿಗೆ ಪರ್ಯಾಯವಾಗಿ ಪ್ರಾಣಿ ಪಕ್ಷಿಗಳಿಗೆ ಉಪಯುಕ್ತವಾಗಿ ಹಣ್ಣಿನ ಗಿಡ ಮರಗಳನ್ನು ಬೆಳೆಸಬೇಕು. ಅರಣ್ಯ ಪ್ರದೇಶದ ವಿಸ್ತಾರ ಹೆಚ್ಚಿಸುವ ನಿಟ್ಟಿನಲ್ಲಿ ಹಣ್ಣಿನ ಬೀಜದುಂಡೆಗಳನ್ನು ಹಾಕುವ ಕಾರ್ಯ ನಿರಂತರವಾಗಿ ಸಾಗುತ್ತಿದೆ. ಮುಂದೆ 1 ಲಕ್ಷ ಬೀಜದುಂಡೆ ಹಾಕುವ ಯೋಜನೆಯಿದೆ’ ಎಂದು ವಿವರಿಸಿದರು.

ಕಾರ್ಯಕ್ರಮ ಆಯೋಜಕ ಮಹೇಶ್‌ರಾವ್ ಕದಂ, ಪ್ರತಿಷ್ಠಾನದ ಸದಸ್ಯರಾದ ಬಾಬು, ಅಮೋಘ, ಕೇಶವ್, ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT