ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಮೈದಾನ– ಕಾಂಪೌಂಡ್‌ ನಿರ್ಮಾಣ

ಗ್ರಾಮಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ ಭರವಸೆ
Last Updated 22 ನವೆಂಬರ್ 2019, 12:33 IST
ಅಕ್ಷರ ಗಾತ್ರ

ಕೋಲಾರ: ‘ನರೇಗಾ ಯೋಜನೆ ಅನುದಾನದಲ್ಲಿ ಶಾಲೆಗಳಿಗೆ ಮೈದಾನ ಮತ್ತು ಕಾಂಪೌಂಡ್, 14ನೇ ಹಣಕಾಸು ಯೋಜನೆಯಲ್ಲಿ ಶೌಚಾಲಯಗಳಿಗೆ ನೀರಿನ ಸೌಕರ್ಯ ಕಲ್ಪಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಂಜೀವಪ್ಪ ಭರವಸೆ ನೀಡಿದರು.

ತಾಲ್ಲೂಕಿನ ಅರಹಳ್ಳಿಯಲ್ಲಿ ಶುಕ್ರವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿ, ‘ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರೊಂದಿಗೆ ಚರ್ಚಿಸಿ ಕೊಠಡಿ ದುರಸ್ತಿ ಮಾಡಿಸಲಾಗುತ್ತದೆ. ಕಿಚನ್ ಗಾರ್ಡನ್ ಮಾಡಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಶಿಥಿಲ ನೀರಿನ ತೊಟ್ಟಿ ತೆರವು ಮಾಡಿಸುತ್ತೇವೆ. ಗ್ರಾಮ ಪಂಚಾಯಿತಿಯಿಂದ ಚರಂಡಿ ಸ್ವಚ್ಛಗೊಳಿಸುತ್ತೇವೆ. ಪ್ಲಾಸ್ಟಿಕ್‌ ಕವರ್‌ ಬಳಕೆಯಿಂದ ಪರಿಸರ ಮಾಲಿನ್ಯವಾಗುತ್ತದೆ. ಆದ ಕಾರಣ ಪ್ಲಾಸ್ಟಿಕ್‌ ಕವರ್‌ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಮಕ್ಕಳ ಗ್ರಾಮಸಭೆಯಲ್ಲಿ ಕೇಳಿಬಂದ ಸಮಸ್ಯೆಗಳಲ್ಲಿ ಕೆಲವನ್ನು ಸ್ಥಳೀಯವಾಗಿ ಪರಿಹರಿಸುತ್ತೇವೆ. ಶಾಲಾ ಮೈದಾನ ಮತ್ತು ಕಟ್ಟಡ ದುರಸ್ತಿಗೆ ಈಗಾಗಲೇ ನರೇಗಾದಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸುತ್ತೇವೆ. ಶಿಕ್ಷಕರ ವರ್ಗಾವಣೆ ದೂರನ್ನು ಶಿಕ್ಷಣ ಇಲಾಖೆ ಗಮನಕ್ಕೆ ತರುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಸುನೀತಾ ವಿವರಿಸಿದರು.

‘ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿ ಹಾಗೂ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವ ಯೋಗವನ್ನು ಕಲಿಸಲಾಗುತ್ತದೆ. ಒತ್ತಡ ಮುಕ್ತ ಬದುಕು ರೂಪಿಸಿಕೊಳ್ಳಲು ಯೋಗಾಭ್ಯಾಸ ದಾರಿದೀಪ. ಯೋಗ ಎಂಬುದು ಕೇವಲ ಭೌತಿಕ ಕ್ರಿಯೆಯಲ್ಲ. ಅದು ಜೀವನದ ಪರಿಪೂರ್ಣತೆಯ ದಾರಿ. ಮನುಷ್ಯನ ಕಣ ಕಣದಲ್ಲೂ ಪ್ರಕೃತಿಯ ಜತೆ ಜೀವನ ಸಾಕಾರಗೊಳಿಸುವ ಸಾಧನ’ ಎಂದು ಅಭಿಪ್ರಾಯಪಟ್ಟರು.

‘ಹೊಗರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗಿದ್ದು, ಸಮಸ್ಯೆ ಬಗೆಹರಿಸಬೇಕು. ಕೋಡಿಕಣ್ಣೂರು ಸರ್ಕಾರಿ ಶಾಲೆ ಹಿಂದೆ ಇರುವ ನೀರಿನ ತೊಟ್ಟಿ ಶಿಥಿಲವಾಗಿದ್ದು, ದುರಸ್ತಿ ಮಾಡಿಸಬೇಕು. ಆಟದ ಮೈದಾನ, ಶೌಚಾಲಯ ಮತ್ತು ಕ್ರೀಡಾ ಸಲಕರಣೆ ಒದಗಿಸಬೇಕು’ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ನ್ಯಾಯಾಧೀಶ ಗಂಗಾಧರ ಚನ್ನಬಸಪ್ಪ ಹಡಪದ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್.ವಿ.ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷ ಯಾಸ್‍ಮಿನ್‌ ತಾಜ್‌, ಉಪಾಧ್ಯಕ್ಷ ಉಷಾ, ಸದಸ್ಯ ಎ.ಟಿ.ಶ್ರೀನಿವಾಸ್, ನೋಡಲ್ ಅಧಿಕಾರಿ ಮಂಜುನಾಥ್, ಮಕ್ಕಳ ಸಂರಕ್ಷಣಾ ಘಟಕದ ಸದಸ್ಯ ಜಗದೀಶ್, ಯೋಗ ಶಿಕ್ಷಕ ರಘುಪತಿ, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಮಂಜುಳಾ ಭಾರ್ಗವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT