ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಚೇತನ ಯೋಜನೆ ಜಾರಿ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ

Last Updated 27 ಏಪ್ರಿಲ್ 2020, 15:05 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು 9 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅಂತರ್ಜಲ ಚೇತನ ಯೋಜನೆ ಜಾರಿಗೊಳಿಸಲಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ತಾಲ್ಲೂಕಿನ ಖಾಜಿಕಲ್ಲಹಳ್ಳಿ, ನರಸಾಪುರ ಕೈಗಾರಿಕಾ ಪ್ರದೇಶ, ಅಮ್ಮೇರಹಳ್ಳಿ ಹಾಗೂ ಕಲ್ವಮಂಜಲಿ ಗ್ರಾಮದಲ್ಲಿ ಸೋಮವಾರ ನರೇಗಾ ಕಾಮಗಾರಿಗಳು, ರಾಜಕಾಲುವೆ ಸ್ವಚ್ಛತೆ, ಬದುಗಳು, ಇಂಗು ಗುಂಡಿ ಮತ್ತು ಹೊಂಡ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

‘ಶೇ 5ರಷ್ಟು ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ. ಮುಂದಿನ 5 ವರ್ಷದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಈ ಕೆಲಸಕ್ಕೆ ಜನಪ್ರತಿನಿಧಿಗಳು ಸರ್ಕಾರದ ಜತೆ ಕೈಜೋಡಿಸಬೇಕು. ಅಂತರ್ಜಲ ವೃದ್ಧಿಗಾಗಿ ರೂಪಿಸಿರುವ ಅಂತರ್ಜಲ ಚೇತನ ಯೋಜನೆ ಜಾರಿಗೆ ಆರ್ಟ್‌ ಆಫ್‌ ಲಿವಿಂಗ್‌ (ಎಒಎಲ್‌) ಸಂಸ್ಥೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ಮೇ 5ರಂದು ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಲಾಗುತ್ತದೆ. ನಂತರ 2ನೇ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗುತ್ತದೆ. ನರೇಗಾ ಅನುದಾನವನ್ನೇ ಈ ಯೋಜನೆಗೆ ಬಳಸಲಾಗುತ್ತದೆ’ ಎಂದು ವಿವರಿಸಿದರು.

‘ನರೇಗಾದ ಕೂಲಿ ಮತ್ತು ಉಪಕರಣಗಳ ಹಣ ಬಾಕಿಯಿತ್ತು. ಕೇಂದ್ರದಿಂದ ₹ 1 ಸಾವಿರ ಕೋಟಿ ಬಿಡುಗಡೆಯಾಗಿದ್ದು, ಕೂಲಿ ಮತ್ತು ಉಪಕರಣ ಖರೀದಿ ಬಾಕಿ ಪಾವತಿಸಲಾಗಿದೆ. ರಾಜ್ಯದ 41 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ತಾಲ್ಲೂಕಿಗೆ ₹ ಕೋಟಿ ಅನುದಾನ ನೀಡಲಾಗಿದೆ’ ಎಂದು ಹೇಳಿದರು.

‘ಕೂಲಿ ಕಾರ್ಮಿಕರ ಬ್ಯಾಂಕ್‌ ಖಾತೆಗೆ ಸಕಾಲಕ್ಕೆ ಹಣ ಜಮಾ ಮಾಡಬೇಕು. ವಿಳಂಬ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸುತ್ತೇವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಅವರಿಗೆ ಕೆಲಸ ಕಲ್ಪಿಸುವ ಉದ್ದೇಶಕ್ಕೆ ನರೇಗಾದಡಿ ಸಮುದಾಯ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಕೂಲಿ ಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಂಡು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ವಿಶೇಷ ಪ್ಯಾಕೇಜ್: ‘ಲಾಕ್‌ಡೌನ್‌ ಕಾರಣಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದೆ. ಈ ಹಿಂದೆ ನರೇಗಾದಲ್ಲಿ ಯಂತ್ರೋಪಕರಣ ಬಳಕೆ ಮಾಡಿ ಕೆಲಸ ಮಾಡಿಸುತ್ತಿದ್ದರು. ಈಗ ನಿಯಮ ಕಠಿಣಗೊಳಿಸಲಾಗಿದ್ದು, ಕಾರ್ಮಿಕರು ಕೆಲಸ ಮಾಡಿದರೆ ಮಾತ್ರ ಹಣ ಜಮಾ ಮಾಡಲಾಗುತ್ತದೆ. ಯಂತ್ರೋಪಕರಣ ಬಳಸಿ ಕೆಲಸ ಮಾಡಿಸಿದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ರಾಜ್ಯದ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಕೆಲಸ ನಡೆಯುತ್ತಿವೆ. ವೈಯಕ್ತಿಕ ಕೆಲಸಗಳಿಗಿಂತ ಸಮುದಾಯ ಕೆಲಸಗಳಿಗೆ ಒತ್ತು ನೀಡಲಾಗುತ್ತಿದೆ. ಬರಪೀಡಿತ ಜಿಲ್ಲೆಗಳಲ್ಲಿ ಕೂಲಿ ಕಾರ್ಮಿಕರಿಗೆ ದಿನಕ್ಕೆ ₹ 275 ಕೂಲಿ ನೀಡಲಾಗುತ್ತಿದೆ. ಕೆಲಸ ಮಾಡಿದ 15 ದಿನದಲ್ಲಿ ಕಾರ್ಮಿಕರ ಖಾತೆಗೆ ಹಣ ಹಾಕಲಾಗುತ್ತಿದೆ’ ಎಂದರು.

ಜಿ.ಪಂ ಸಿಇಒ ಎಚ್.ವಿ.ದರ್ಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್, ತಹಶೀಲ್ದಾರ್ ಶೋಭಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT