ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆಯಿಂದ ಅಂತರ್ಜಲ ಕುಸಿತ

ಆರ್‌ಡಿಡಬ್ಲ್ಯೂಎಸ್‌ಡಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ನಾಗರಾಜ್ ಅಭಿಪ್ರಾಯ
Last Updated 18 ನವೆಂಬರ್ 2020, 9:56 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯು ಬರಪೀಡಿತ ಪ್ರದೇಶವಾಗಿದ್ದು, ಜನರು ನೀರನ್ನು ಹಿತಮಿತವಾಗಿ ಬಳಸಿ ಮುಂದಿನ ತಲೆಮಾರಿಗೆ ಕೊಡುಗೆಯಾಗಿ ನೀಡಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಆರ್‌ಡಿಡಬ್ಲ್ಯೂಎಸ್‌ಡಿ) ಕಾರ್ಯ ನಿರ್ವಾಹಕ ಎಂಜಿನಿಯರ್‌ ಬಿ.ಪಿ.ನಾಗರಾಜ್ ಕಿವಿಮಾತು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಿ ಎಕಾನಾಮಿಕ್ ಅಗ್ರಿಕಲ್ಚರ್ ಡೆವಲಪ್‌ಮೆಂಟ್‌ ಸೊಸೈಟಿ (ರೀಡ್ಸ್) ಸಹಯೋಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

‘ನೀರು ಮುಗಿದು ಹೋಗುವ ಸಂಪನ್ಮೂಲವಾಗಿದ್ದು, ಮಿತವಾಗಿ ಬಳಸದಿದ್ದರೆ ಮುಂದೆ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಜಿಲ್ಲೆಯ ನೀರಿನ ಬವಣೆ ನೀಗಿಸಲು ಅನುಸರಿಸಬೇಕಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಳೆ ನೀರು ಕೊಯ್ಲು, ಸಸಿ ನಾಟಿ, ಕೆರೆಗಳನ್ನು ತುಂಬಿಸುವುದು, ಕಲ್ಯಾಣಿಗಳಲ್ಲಿ ಹೂಳು ತೆಗೆಸುವ ಪ್ರಕ್ರಿಯೆಯು ಜನಾಂದೋಲನದಂತೆ ನಡೆಯಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನೀರಿಲ್ಲದೆ ಕಷ್ಟ ಅನುಭವಿಸುತ್ತಿರುವ ಜನರಿಗೆ ನೀರಿನ ಮಹತ್ವ ಏನೆಂದು ಗೊತ್ತಿದೆ. ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ನೀರು ಅಮೃತಕ್ಕೆ ಸಮ. ಮಳೆ ಕೊರತೆಯಿಂದ ಪ್ರತಿ ವರ್ಷ ಅಂತರ್ಜಲ ಮಟ್ಟ 38 ಮೀಟರ್‌ನಷ್ಟು ಕುಸಿಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಚ್ಛತೆ ಕಾಪಾಡಿ: ‘ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಬೇಕು. ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕು’ ಎಂದು ಸ್ವಚ್ಛ ಭಾರತ್ ಮಿಷನ್ ಯೋಜನೆ ಜಿಲ್ಲಾ ಸಂಯೋಜಕ ಜಗದೀಶ್ ತಿಳಿಸಿದರು.

‘ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ 746 ಮಿಲಿ ಮೀಟರ್‌ ಇದ್ದು, ಜನರು ಮಳೆ ನೀರು ಸಂರಕ್ಷಿಸಿ ಅಂತರ್ಜಲ ವೃದ್ಧಿಸಬೇಕು. ಪ್ರತಿ ಹನಿ ಮಳೆ ನೀರನ್ನು ಸಂರಕ್ಷಿಸಬೇಕು. ಕೃಷಿ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಗಿಡ ಮರ ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೂ ಒತ್ತು ನೀಡಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಶ್ರೀನಿವಾಸ್ ಹೇಳಿದರು.

‘ಪ್ರತಿ ಮನೆಗೂ 2024ರೊಳಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಕೊಡುವುದು ಜಲಜೀವನ್‌ ಮಿಷನ್‌ ಯೋಜನೆಯ ಗುರಿ. ಮನೆ ಮನೆಗೂ ಗಂಗೆ ಹರಿಸುವ ಕಾರ್ಯ ಇದಾಗಿದೆ’ ಎಂದು ಜಲಜೀವನ್ ಮಿಷನ್ ಜಿಲ್ಲಾ ಸಂಯೋಜಕ ಹರೀಶ್ ವಿವರಿಸಿದರು.

ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತ, ಕಳ್ಳೀಪುರ, ನಡುಪಲ್ಲಿ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಲಾಯಿತು. ಬೀದಿ ನಾಟಕದ ಮೂಲಕ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜಲ ಜೀವನ್ ಮಿಷನ್ ತಂಡದ ಪ್ರತಿನಿಧಿ ಕರೀಂಸಾಬ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಪ್ಪ, ಗ್ರಾ.ಪಂ ಮಾಜಿ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT