ಬುಧವಾರ, ಏಪ್ರಿಲ್ 1, 2020
19 °C

ಗುಂಪು ಚರ್ಚೆ: ಜ್ಞಾನ ವೃದ್ಧಿಗೆ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶೈಕ್ಷಣಿಕ ಹಿನ್ನೆಲೆ, ಮಾರ್ಗದರ್ಶನ ಮತ್ತು ಉತ್ತಮ ಐಚ್ಛಿಕ ಆಯ್ಕೆಯೊಂದಿಗೆ ಮಾಡಿಯೇ ತೀರುವೆ ಎಂಬ ಛಲವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯ’ ಎಂದು ತಹಶೀಲ್ದಾರ್ ಮುನಿಶಾಮಿ ರೆಡ್ಡಿ ತಿಳಿಸಿದರು.

ನಗರದ ಎಕ್ಸಲೆಂಟ್ ಕೋಚಿಂಗ್ ಸೆಂಟರ್‌ನಲ್ಲಿ ಭಾನುವಾರ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ವಿದ್ಯಾರ್ಥಿಗಳು ಗುಂಪು ಚರ್ಚೆ ಮಾಡುವುದಿಂದ ಜ್ಞಾನ ವೃದ್ಧಿಯಾಗುತ್ತದೆ. ಜತೆಗೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳಿಸಲು ಸಹಕಾರಿಯಾಗುತ್ತದೆ’ ಎಂದರು.

‘ನಾವು ಆಯ್ಕೆ ಮಾಡುವ ವಿಷಯಗಳು ನಮ್ಮ ಯಶಸ್ಸು ಮತ್ತು ಸೋಲನ್ನು ನಿರ್ಧರಿಸುತ್ತದೆ. ಉತ್ತಮ ಆರ್ಥಿಕ, ಸಾಮಾಜಿಕ ಹಿನ್ನೆಲೆ ಇರದಿದ್ದರೂ ಉತ್ತಮ ಶೈಕ್ಷಣಿಕ ಹಿನ್ನೆಲೆ ಇರಬೇಕು. ನಾವು ಕಲಿತ, ಪಡೆದುಕೊಂಡ ಜ್ಞಾನ ನಮ್ಮ ಸಾಧನೆ ಮೇಲೆ ಪ್ರಭಾವ ಬೀರುತ್ತದೆ’ ಎಂದು ಹೇಳಿದರು.

‘ವಿದ್ಯಾರ್ಥಿಗಳ ಮನಸ್ಸು ಹಳ್ಳದ ರೀತಿ ಇರಬಾರದು. ನಿಮ್ಮ ಸೇವೆ ಕೇವಲ ಮನೆಗೆ ಮಾತ್ರ ಉಪಯೋಗಕ್ಕೆ ಬಂದರೆ ಸಾಲದು ಬದಲಾಗಿ, ದೇಶದ ಆಸ್ತಿ ಆಗುವ ಗುರಿ ಹೊಂದಬೇಕು. ಹೆಚ್ಚು ಗುಂಪು ಚರ್ಚೆಗಳನ್ನು ಮಾಡುವ ಮೂಲಕ ಹೆಚ್ಚು ಜ್ಞಾನ ಪಡೆಯಬಹುದು’ ಎಂದು ವಿವರಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆರ್.ಲಕ್ಷ್ಮಿನಾರಾಯಣ ಮಾತನಾಡಿ, ‘ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡವರ ಪೈಕಿ 400ಕ್ಕೂ ಹೆಚ್ಚು ಮಂದಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ ಸಿಗದೆ ಅವಕಾಶ ವಂಚಿತರಾಗುತ್ತಿದ್ದಾರೆ. ಅವರಿಗೆ ಅನುಕೂಲ ಕಲ್ಪಿಸಬೇಕು ಎಂಬ ಉದ್ದೇಶದಿಂದ ತರಬೇತಿ ನೀಡಲಾಗುತ್ತಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)