ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕಳೆಗಟ್ಟಿದ ಗುರು ಪೌರ್ಣಿಮೆ ಸಂಭ್ರಮ

Last Updated 24 ಜುಲೈ 2021, 12:22 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ಆತಂಕದ ನಡುವೆಯೂ ಜಿಲ್ಲೆಯಾದ್ಯಂತ ಶನಿವಾರ ಗುರು ಪೌರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರದ ಸಾಯಿ ಬಾಬಾ ಮಂದಿರದಲ್ಲಿ ಬಾಬಾ ಮೂರ್ತಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ ಮತ್ತು ಭಜನೆ ಏರ್ಪಡಿಸಲಾಗಿತ್ತು.

ಭಕ್ತರು ಸಾಯಿ ಬಾಬಾ ದರ್ಶನಕ್ಕಾಗಿ ಮಂದಿರದ ಬಳಿ ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕಾರ್ಯಕ್ರಮ ಆರಂಭವಾದವು. ಸಾಯಿ ಬಾಬಾ ಮೂರ್ತಿ ಹಾಗೂ ಇಡೀ ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಅನ್ನದಾನಕ್ಕೆ ಅವಕಾಶ ಇಲ್ಲವಾದರೂ ಭಕ್ತಸಾಗರ ಮಾತ್ರ ಪ್ರತಿ ವರ್ಷದಂತೆ ಬಾಬಾ ದರ್ಶನಕ್ಕೆ ಸಾಗಿ ಬಂತು. ಸಾವಿರಾರು ಭಕ್ತರು ಪ್ರವಾಸಿ ಮಂದಿರ ಮುಂಭಾಗದ ರಸ್ತೆವರೆಗೂ ಸಾಲುಗಟ್ಟಿ ನಿಂತಿದ್ದರು. ಮಂದಿರದ ಮುಂಭಾಗ ಬ್ಯಾರಿಕೇಡ್‌ಗಳನ್ನು ಹಾಕಿ ಭಕ್ತರನ್ನು ಒಳಗೆ ಬಿಡಲಾಯಿತು.

ನೂಕು ನುಗ್ಗಲು ಉಂಟಾಗದಂತೆ ಮಂದಿರದ ಬಳಿ ಪೊಲೀಸರು ಹಾಗೂ ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಸೇವಾದಳ ಕಾರ್ಯಕರ್ತರು ಮಹಿಳೆಯರು ಹಾಗೂ ವಯೋವೃದ್ಧರಿಗೆ ನೆರವಾದರು.

ಸಂಸದ ಎಸ್‌.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ ಸೇರಿದಂತೆ ಹಲವು ಗಣ್ಯರು ಬಾಬಾ ದರ್ಶನ ಪಡೆದರು. ದೇವರ ದರ್ಶನದ ನಂತರ ಭಕ್ತರಿಗೆ ವಿಭೂತಿ, ತೀರ್ಥ ವಿತರಣೆ ಮಾಡಲಾಯಿತು.

ದೇವಾಲಯ ಮುಂಭಾಗದಲ್ಲಿ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ದಿನ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಭಕ್ತರ ವಾಹನಗಳ ನಿಲುಗಡೆಗೆ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆ, ಕೆಇಬಿ ಕಚೇರಿ ರಸ್ತೆ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಅನುಕೂಲಕ್ಕಾಗಿ ದೇವಾಲಯದ ಬಳಿ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಕೇಂದ್ರದ ಸೋಮೇಶ್ವರಸ್ವಾಮಿ, ವೆಂಕಟರಮಣಸ್ವಾಮಿ, ಜಲಕಂಠೇಶ್ವರ, ಕಾಶಿ ವಿಶ್ವನಾಥ ದೇವಾಲಯದಲ್ಲೂ ವಿಶೇಷ ಅಲಂಕಾರ ಮತ್ತು ಪೂಜೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT