ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ಓಆರ್‌ಎಸ್‌ ದಿನಾಚರಣೆ ನಡೆಸಿ

ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಸೂಚನೆ
Last Updated 17 ಜುಲೈ 2021, 15:34 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಓಆರ್‌ಎಸ್‌ ದಿನಾಚರಣೆ ನಡೆದ ಅತಿಸಾರ ಭೇದಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಶನಿವಾರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಈ ವರ್ಷ ಹೆಚ್ಚಿನ ಮಳೆಯಾಗುತ್ತಿದ್ದು, ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾ ಹಾಗೂ ಅತಿಸಾರ ಭೇದಿ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ ವಹಿಸಬೇಕು’ ಎಂದು ತಿಳಿಸಿದರು.

‘1 ವರ್ಷದಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಅತಿಸಾರ ಭೇದಿ ಕಂಡುಬರುತ್ತದೆ. ಅತಿಸಾರ ಭೇದಿ ನಿಯಂತ್ರಣ ಕುರಿತು ಪೋಷಕರಿಗೆ ಅರಿವು ಮೂಡಿಸಬೇಕು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ಕೊಟ್ಟು ಅತಿಸಾರ ಭೇದಿ ಪ್ರಕರಣ ಕಂಡುಬಂದರೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಬೇಕು. ಓಆರ್‌ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ಅಗತ್ಯ ಇರುವಷ್ಟು ಸಂಗ್ರಹಣೆ ಮಾಡಿ’ ಎಂದರು.

‘ಜಿಲ್ಲೆಯಾದ್ಯಂತ ಶೇ 100ರಷ್ಟು ಶೌಚಾಲಯ ನಿರ್ಮಿಸಿದ್ದರೂ ಜನರು ಬಳಕೆ ಮಾಡುತ್ತಿಲ್ಲ. ಕೆಲವೆಡೆ ಬಯಲು ಬಹಿರ್ದೆಸೆ ಮುಂದುವರಿದಿದೆ. ಬಯಲು ಬಹಿರ್ದೆಸೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಆದ ಕಾರಣ ವೈಯಕ್ತಿಕ ಶೌಚಾಲಯ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ’ ಎಂದು ಕಿವಿಮಾತು ಹೇಳಿದರು.

‘ಜುಲೈ 19ರಿಂದ ಆ.2ರವರೆಗೆ ಅತಿಸಾರಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಓಆರ್ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ನೀಡಲಾಗುತ್ತದೆ. ಮಕ್ಕಳ ಮರಣ ತಪ್ಪಿಸುವುದು ಇದರ ಮುಖ್ಯ ಉದ್ದೇಶ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ವಿವರಿಸಿದರು.

‘ಮಕ್ಕಳಿಗೆ ಶುದ್ಧ ಕುಡಿಯುವ ನೀರು, ವಯಸ್ಸಿಗೆ ಅನುಗುಣವಾಗಿ ಚುಚ್ಚುಮದ್ದು ನೀಡಬೇಕು. ಮಕ್ಕಳಿಗೆ ತಾಯಿ ಎದೆಹಾಲು ನೀಡಿಕೆ, ಪೌಷ್ಟಿಕ ಆಹಾರ ಸೇವನೆ, ಶೌಚಾಲಯ ಬಳಸುವುದು, ಶೌಚಾಲಯ ಬಳಸಿದ ನಂತರ ಹಾಗೂ ಆಹಾರ ಸೇವನೆ ಮುನ್ನ ಕೈ ತೊಳೆಯುವ ವಿಧಾನ ಅಳವಡಿಸಿಕೊಳ್ಳಬೇಕು. ಮಕ್ಕಳು ಮಲವಿಸರ್ಜನೆ ಮಾಡಿದಾಗ ತಾಯಂದಿರು ಶುಚಿ ಮಾಡಿದ ನಂತರ ಕಡ್ಡಾಯವಾಗಿ ಕೈ ತೊಳೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಕ್ಕಳ ಸಮೀಕ್ಷೆ: ‘ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ 5 ವರ್ಷದೊಳಗಿನ ಮಕ್ಕಳ ಸಮೀಕ್ಷೆ ನಡೆಸುತ್ತಾರೆ. ಜತೆಗೆ ಕೈ ತೊಳೆಯುವ ವಿಧಾನ, ಶೌಚಾಲಯ ಬಳಕೆ, ತಾಯಿಯ ಹಾಲಿನ ಮಹತ್ವ ಹಾಗೂ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸುತ್ತಾರೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ಹೇಳಿದರು.

‘ಓಆರ್ಎಸ್ ದ್ರಾವಣ ತಯಾರಿಸುವುದು ಹಾಗೂ ಕೈ ತೊಳೆಯುವ ವಿಧಾನದ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಕ ಪ್ರಚಾರ ನಡೆಸುತ್ತೇವೆ. ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಶೌಚಾಲಯ ಬಳಸಬೇಕು. ಮಗು ಮಲವಿಸರ್ಜನೆ ಮಾಡಿದರೆ ಅದನ್ನು ಪೋಷಕರು ಸ್ವಚ್ಛಗೊಳಿಸಿ ಮಲವನ್ನು ಶೌಚಾಲಯದಲ್ಲಿ ಹಾಕಬೇಕು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್, ತಾಲ್ಲೂಕು ವೈದ್ಯಾಧಿಕಾರಿ ರಮ್ಯ ದೀಪಿಕಾ, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT