ಗುರುವಾರ , ಡಿಸೆಂಬರ್ 8, 2022
18 °C
ಕೆ.ಸಿ.ವ್ಯಾಲಿ ಯೋಜನೆ ಟೀಕಿಸಿದ್ದಕ್ಕೆ ಎಂಎಲ್‌ಸಿ ಅನಿಲ್‌ ಕುಮಾರ್‌ ವಾಗ್ದಾಳಿ

ಜನರ ದಾರಿ ತಪ್ಪಿಸುತ್ತಿರುವ ಕುಮಾರಸ್ವಾಮಿ: ಅನಿಲ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೆ.ಸಿ.ವ್ಯಾಲಿ ಯೋಜನೆ ಟೀಕಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌ನ ಎಂ.ಎಲ್‌.ಅನಿಲ್‌ ಕುಮಾರ್‌, ‘ಮೊಸಳೆ ಕಣ್ಣೀರು ಸುರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ನಡೆದುಕೊಳ್ಳುವ ರೀತಿಯೇ ಇದು? ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ವಿರುದ್ಧ ಅವರ ಆರೋಪ ಶುದ್ಧ ಸುಳ್ಳು ಹಾಗೂ ಖಂಡನೀಯ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ ತಜ್ಞರು, ವಿಜ್ಞಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬೇರೆ ರಾಜ್ಯಗಳೂ ಅನುಷ್ಠಾನಕ್ಕೆ ಮುಂದಾಗಿವೆ. ಆದರೆ, ಬೆಂಗಳೂರಿನಿಂದ ಕೊಳಚೆ ನೀರು ತಂದು ಜಿಲ್ಲೆಯ ಜನರನ್ನು ರೋಗಗ್ರಸ್ತರನ್ನಾಗಿ ಮಾಡಲಾಗಿದೆ, ಕಾಂಗ್ರೆಸ್‌ನವರು ದುಡ್ಡು ಹೊಡೆದರು ಎಂಬೆಲ್ಲಾ ಸುಳ್ಳು ಆರೋಪಗಳನ್ನು ಕುಮಾರಸ್ವಾಮಿ ಮಾಡಿದ್ದಾರೆ.‌ 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಅವರೇ ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆಗೆ ಒಪ್ಪಿಗೆ ನೀಡಿದ್ದರು’ ಎಂದು ತಿರುಗೇಟು ನೀಡಿದರು.

‘‌ಕುಡಿಯುವ ನೀರು ಅಥವಾ ಕೃಷಿಗೆ ಪೂರೈಸುವುದು ಕೆ.ಸಿ.ವ್ಯಾಲಿ ಮೂಲ ಉದ್ದೇಶ ಅಲ್ಲ. ಅಂತರ್ಜಲ ಮರುಪೂರಣವೇ ಈ ಯೋಜನೆ ಗುರಿ. ಪಕ್ಷಾತೀತವಾಗಿ ಆಗ ಒಪ್ಪಿಗೆ ನೀಡಲಾಗಿತ್ತು. ಇದರಿಂದಾಗಿ ಕೆರೆಗಳು ಭರ್ತಿಯಾದವು’ ಎಂದರು.

ಏಕೆ ಮುಂದುವರಿಸಲಿಲ್ಲ?: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಎತ್ತಿನ ಹೊಳೆ ಯೋಜನೆಗೆ ಚಾಲನೆ‌ ನೀಡಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ, ಬಳಿಕ ಬಂದ ಬಿಜೆಪಿ ಏಕೆ ಮುಂದುವರಿಸಲಿಲ್ಲ? ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆ ಬಗ್ಗೆ ಅಪಾರ ಕಾಳಜಿ ಹೊಂದಿರುವವರು ಏಕೆ ಸುಮ್ಮನಾದರು? ವೈಫಲ್ಯ ಮರೆಮಾಚಲು ಕಾಂಗ್ರೆಸ್ ಬಗ್ಗೆ ಮಾತ‌ನಾಡುತ್ತಿದ್ದಾರೆ’ ಎಂದು ಟೀಕಾ ಪ್ರಹಾರ ನಡೆಸಿದರು.

ಜಿಲ್ಲೆಯಲ್ಲಿ ಬಿಜೆಪಿ ಸಂಸದ ಗೆಲ್ಲಲು ಕಾಂಗ್ರೆಸ್‌ನ ಘಟಬಂಧನ್‌ ಕಾರಣ ಎಂಬ ಆರೋಪಕ್ಕೆ ‌ಪ್ರತಿಕ್ರಿಯಿಸಿ, ‘ಒಂದೇಒಂದು ದಾಖಲೆ‌ ನೀಡಲಿ ನೋಡೋಣ. ಘಟಬಂಧನ್ ಎಂಬುದು ಸೃಷ್ಟಿ ಅಷ್ಟೆ. ಅದು ಘಟಬಂಧನ್ ಅಲ್ಲ ಗಟ್ಟಿ ಬಂಧನ’ ಎಂದರು.

‘ಸಾಲ ಮನ್ನಾ ಎಚ್‌ಡಿಕೆ ಕೂಸಲ್ಲ:‘ರೈತರ ಸಾಲ ಮನ್ನಾ ಜನಕ ಕುಮಾರಸ್ವಾಮಿ ಅಲ್ಲ. ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್ ದೇಶದ ರೈತರ ಸಾಲ ಮನ್ನಾ ಮಾಡಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ₹ 50 ಸಾವಿರ ಸಾಲ ಮನ್ನಾ ಮಾಡಿದ್ದರು. ಆನಂತರ ನಮ್ಮ ಬೆಂಬಲದಿಂದ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಮಾಡಿದ ಸಾಲ ಮನ್ನಾ ಯೋಜನೆಯಲ್ಲಿ ಕಾಂಗ್ರೆಸ್ ಪಾಲೂ ಇದೆ’ ಎಂದು ಅನಿಲ್‌ ಕುಮಾರ್‌ ಹೇಳಿದರು.

‘ಮಗುವಿನ ಜನ್ಮಕ್ಕೆ ತಂದೆ ಅಥವಾ ತಾಯಿ ಮಾತ್ರ ಕಾರಣವೇ? ಸಮ್ಮಿಶ್ರ ಸರ್ಕಾರದಲ್ಲಿ ಸಾಲ ಮನ್ನಾ ಕ್ರೆಡಿಟ್ ಕಾಂಗ್ರೆಸ್‌ಗೂ ಸೇರಬೇಕು’ ಎಂದರು.

ಅವಕಾಶ ಸಿಕ್ಕಾಗ ಏನು ಮಾಡಿದಿರಿ?: ‘ಮುಸ್ಲಿಮರಿಗೆ ಮುಖ್ಯಮಂತ್ರಿ ಪಟ್ಟ, ದಲಿತರು, ಮಹಿಳೆಯರಿಗೆ ಡಿಸಿಎಂ‌ ಪಟ್ಟ ನೀಡುವುದಾಗಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಸಮ್ಮಿಶ್ರ‌ ಸರ್ಕಾರದಲ್ಲಿ ಜೆಡಿಎಸ್‌ ಕೋಟಾದಡಿ ಎಷ್ಟು ಮಂದಿ ದಲಿತರು, ಮುಸ್ಲಿಮರು, ಮಹಿಳೆಯರನ್ನು ಸಚಿವರನ್ನಾಗಿ ಮಾಡಿದ್ದರು’ ಎಂದು ಅನಿಲ್‌ ಕುಮಾರ್‌ ಪ್ರಶ್ನಿಸಿದರು.

‘126 ಕ್ಷೇತ್ರಗಳಲ್ಲಿ ಯಾತ್ರೆ ಮಾಡುತ್ತಿದ್ದಾರೆ. 113 ಸ್ಥಾನ ಪಡೆದು ಅಧಿಕಾರ ರಚಿಸುತ್ತಾರಂತೆ. 224 ಸ್ಥಾನಗಳಲ್ಲಿ ಸ್ಪರ್ಧಿಸಿ ರಾಷ್ಟ್ರೀಯ ಪಕ್ಷಗಳು ಲಗಾಟೆ ಹೊಡೆದರೂ 113 ಬರುವುದೇ ಕಷ್ಟ‌’ ಎಂದು ವ್ಯಂಗ್ಯವಾಡಿದರು.

ಜೆಡಿಎಸ್‌ನದ್ದು ಜಾತ್ಯತೀತ ಡೋಂಗಿತನ: ‘ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಕಾರಣ‌ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗ ಶಾಸಕರಿಗೆ ಕುಮಾರಸ್ವಾಮಿ ಸ್ಪಂದಿಸಲೇ ಇಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಆಪರೇಷನ್ ಕಮಲದ ಬಗ್ಗೆ ಅವರಿಗೆ ಗುಪ್ತಚರ‌‌ ಇಲಾಖೆ ಮಾಹಿತಿ ನೀಡಲಿಲ್ಲವೇ? ಪಕ್ಕದ ತೆಲಂಗಾಣದ ಮುಖ್ಯಮಂತ್ರಿ ಈಚೆಗೆ ಆಪರೇಷನ್ ತಪ್ಪಿಸಲಿಲ್ಲವೇ’ ಎಂದು ಅನಿಲ್‌ ಕುಮಾರ್‌ ಪ್ರಶ್ನಿಸಿದರು.

‘ಜನರ ದಿಕ್ಕು ತಪ್ಪಿಸಿ ಯಾಮಾರಿಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ 100 ಸ್ಥಾನ ಗೆಲ್ಲದಂತೆ ನೋಡಿಕೊಳ್ಳಲು ಜೆಡಿಎಸ್‌ನವರು ಹೋಮ ಮಾಡುತ್ತಿದ್ದಾರೆ. ಆಗ ಚೌಕಾಸಿ ಮಾಡಿ ಅಧಿಕಾರ ಪಡೆಯಬಹುದು ಎಂಬ ಹುನ್ನಾರ. ಈಗಲೇ ಎಲ್ಲಾ ಕಡೆ ಅವರು ಬಿಜೆಪಿ ಜೊತೆ ಸೇರುತ್ತಿದ್ದಾರೆ. ಅವರದ್ದು ಜಾತ್ಯತೀತ ‌ಡೋಂಗಿತನ’ ಎಂದು ಟೀಕಿಸಿದರು.

ನಗರಸಭೆ ಸದಸ್ಯ ಅಂಬರೀಶ್, ಮುಖಂಡ ಮೈಲಾಂಡಹಳ್ಳಿ ಮುರಳಿ, ವರದೇನಹಳ್ಳಿ ವೆಂಕಟೇಶ್, ವೈ.ಶಿವಕುಮಾರ್, ವಕ್ಕಲೇರಿ ರಾಜಪ್ಪ, ಚಿಂಜಮಲೆ ರಮೇಶ್, ವರದೇನಹಳ್ಳಿ ವೆಂಕಟೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು