ಗುರುವಾರ , ಆಗಸ್ಟ್ 22, 2019
26 °C
ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ತಾ.ಪಂ ಅಧ್ಯಕ್ಷ ಆಂಜಿನಪ್ಪ ಹೇಳಿಕೆ

ಆರೋಗ್ಯ– ಸ್ವಚ್ಛತೆ ಜನರ ಆದ್ಯತೆಯಾಗಲಿ

Published:
Updated:
Prajavani

ಕೋಲಾರ: ‘ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಜತೆಗೆ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಆದ್ಯತೆಯಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಕಿವಿಮಾತು ಹೇಳಿದರು.

ತಾಲ್ಲೂಕಿನ ಶೆಟ್ಟಿಕೊತ್ತನೂರು ಗ್ರಾಮದಲ್ಲಿ ಶನಿವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿ, ‘ಆರೋಗ್ಯ ಇಲಾಖೆಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಜನ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಮೃತಪಡುತ್ತಿದ್ದಾರೆ. ಆರಂಭದಲ್ಲೇ ಚಿಕಿತ್ಸೆ ನೀಡಲು ಆರೋಗ್ಯ ಶಿಬಿರಗಳು ಪೂರಕ. ಜತೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು.

‘ಈ ಹಿಂದೆ ಗ್ರಾಮಗಳಲ್ಲಿ ಕಾಯಿಲೆ ಬಂದರೆ ಗುಳೆ ಹೋಗುವ ಪರಿಸ್ಥಿತಿಯಿತ್ತು. ಕಾಯಿಲೆಯ ಹಾಗೂ ಸಕಾಲಕ್ಕೆ ಚಿಕಿತ್ಸೆ ಪಡೆಯುವ ಅರಿವಿಲ್ಲದೆ ಅನೇಕರು ಸಾಯುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರಗಳು ಒತ್ತು ನೀಡುತ್ತಿವೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ವಿವರಿಸಿದರು.

‘ಆರೋಗ್ಯ ಸೇವೆಗಿಂತ ದೊಡ್ಡ ಸೇವೆ ಮತ್ತೊಂದಿಲ್ಲ. ಜನರು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಿರಬೇಕು. ಈ ಹಿಂದೆ ಆಸ್ಪತ್ರೆಗಳ ಕೊರತೆಯ ಕಾರಣಕ್ಕೆ ಜನ ಕಾಯಿಲೆಗೆ ಚಿಕಿತ್ಸೆ ಪಡೆಯಲಾಗದೆ ಮೃತಪಡುತ್ತಿದ್ದರು. ಈಗ ಹೋಬಳಿ ಕೇಂದ್ರದಲ್ಲೂ ಆಸ್ಪತ್ರೆಗಳಿದ್ದು, ಇದರ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

ಮಾನವೀಯತೆಯಿಂದ ನಡೆದುಕೊಳ್ಳಿ: ‘ಈ ಹಿಂದೆ ಗ್ರಾಮೀಣ ಭಾಗದ ಜನ ಚಿಕಿತ್ಸೆಗಾಗಿ ಹತ್ತಾರು ಕಿಲೋ ಮೀಟರ್‌ ನಡೆದು ಹೋಗಬೇಕಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಗ್ರಾಮದ ಸಮೀಪವೇ ಆಸ್ಪತ್ರೆಗಳು ಲಭ್ಯವಿವೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯು ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್ ಪ್ರಸಾದ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಸಂತ್‌ಕುಮಾರ್, ವೈದ್ಯ ಡಾ.ಚರಣ್ ಹಾಜರಿದ್ದರು.

Post Comments (+)