ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಗಳಿಕೆಗಿಂತ ಆರೋಗ್ಯ ಮುಖ್ಯ

ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ರಾಜೇಂದ್ರ ಅಭಿಪ್ರಾಯ
Last Updated 30 ಅಕ್ಟೋಬರ್ 2019, 14:37 IST
ಅಕ್ಷರ ಗಾತ್ರ

ಕೋಲಾರ: ‘ಸಾವಿರಾರು ವಿದ್ಯಾರ್ಥಿಗಳಿರುವ ನಮ್ಮ ಕಾಲೇಜಿನ ಅಭಿವೃದ್ಧಿಗೆ ದಾನಿಗಳು ಹಣಕಾಸು ನೆರವು ನೀಡಿದ್ದಾರೆ. ದಾನಿಗಳ ಉದಾರ ನೆರವಿನಿಂದ ಕಾಲೇಜು ಪಥದಲ್ಲಿ ಸಾಗಿದೆ’ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ.ರಾಜೇಂದ್ರ ಹೇಳಿದರು.

ರೆಡ್‌ಕ್ರಾಸ್‌ ಹಾಗೂ ಬೆಂಗಳೂರಿನ ಸಂಜೀವಿನಿ ಸಂಸ್ಥೆ ಸಹಯೋಗದಲ್ಲಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆರಂಭಿಸಿರುವ ಪ್ರಥಮ ಚಿಕಿತ್ಸಾ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ‘ದಾನಿಗಳು ಕಾಲೇಜಿಗೆ ನೆರವು ನೀಡದಿದ್ದರೆ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ ಸಾಕಷ್ಟು ಸಮಸ್ಯೆಯಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ಕಾಲೇಜಿನಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಈ ಪೈಕಿ ಸಾಕಷ್ಟು ಮಂದಿ ಗ್ರಾಮೀಣ ಭಾಗದವರು. ಕ್ರೀಡಾ ಚಟುವಟಿಕೆ ಸೇರಿದಂತೆ ಸಂದರ್ಭಗಳಲ್ಲಿ ವಿದ್ಯಾರ್ಥಿನಿಯರು ತಲೆ ಸುತ್ತಿ ಬೀಳುವ, ಗಾಯಗೊಳ್ಳುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ತಕ್ಷಣಕ್ಕೆ ಕಾಲೇಜಿನಲ್ಲಿ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸಾ ಕೇಂದ್ರದ ಅಗತ್ಯವಿತ್ತು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ, ರ್ಯಾಂಕ್ಹಾಗೂ ಚಿನ್ನದ ಪದಕ ಪಡೆಯುವುದಕ್ಕಷ್ಟೇ ಸೀಮಿತವಾಗದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಣ ಸಂಪಾದನೆ, ಆಸ್ತಿ ಗಳಿಕೆಗಿಂತ ಆರೋಗ್ಯ ಮುಖ್ಯ. ಕೋಟಿಗಟ್ಟಲೇ ಹಣ, ಆಸ್ತಿ ಸಂಪಾದಿಸಿ ಆರೋಗ್ಯವೇ ಸರಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮನುಷ್ಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾನೆ. ಯಾಂತ್ರಿಕ ಜೀವನದಿಂದ ಮಾನಸಿಕ ಒತ್ತಡ ಹೆಚ್ಚಿ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜನರ ಆಹಾರ ಕ್ರಮ ಮತ್ತು ಜೀವನ ಶೈಲಿ ಬದಲಾದರೆ ರೋಗಮುಕ್ತ ಬದುಕು ಸಾಗಿಸಬಹುದು’ ಎಂದು ಕಿವಿಮಾತು ಹೇಳಿದರು.

ಚಿಕಿತ್ಸೆ ಪಡೆಯಿರಿ: ‘ಮಾನವೀಯ ಗುಣ, ಮೌಲ್ಯ ಬೆಳೆಸುವುದು ರೆಡ್‌ಕ್ರಾಸ್‌ ಸಂಸ್ಥೆಯ ಧ್ಯೇಯ. ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಕೇಂದ್ರ ಆರಂಭಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೆ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಸುನಿಲ್ ತಿಳಿಸಿದರು.

‘ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಶುಶ್ರೂಷಕಿಯೊಬ್ಬರನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯೊಂದಿಗೆ ಚರ್ಚಿಸುತ್ತೇವೆ. ಜತೆಗೆ ಕೇಂದ್ರಕ್ಕೆ ಬೇಕಾದ ಔಷಧ ಮಾತ್ರೆಗಳು ಪೂರೈಕೆಯಾಗಲಿವೆ’ ಎಂದು ವಿವರಿಸಿದರು.

ಸಂಜೀವಿನಿ ಸಂಸ್ಥೆ ಅಧ್ಯಕ್ಷ ಮಹಾನಂದ್, ಟ್ರಸ್ಟಿ ಅಮರನಾರಾಯಣ, ಕಾಲೇಜಿನ ಉಪನ್ಯಾಸಕರಾದ ಸೌಮ್ಯ, ವಿನುತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT