ಶನಿವಾರ, ಡಿಸೆಂಬರ್ 14, 2019
21 °C
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ವೈದ್ಯಾಧಿಕಾರಿ ಪ್ರೀತಿ ಕಿವಿಮಾತು

ಆಸ್ತಿ ಗಳಿಕೆಗಿಂತ ಆರೋಗ್ಯ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಕ್ತಹೀನತೆಯು ಬಹು ದೊಡ್ಡ ಸಮಸ್ಯೆಯಾಗಿದ್ದು, ಹೆಣ್ಣು ಮಕ್ಕಳು ಪೌಷ್ಟಿಕ ಆಹಾರದ ಜತೆಗೆ ತರಕಾರಿ, ಸೊಪ್ಪು ಹೆಚ್ಚಾಗಿ ಸೇವಿಸಬೇಕು’ ಎಂದು ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ವೈದ್ಯಾಧಿಕಾರಿ ಡಾ.ಪ್ರೀತಿ ಕಿವಿಮಾತು ಹೇಳಿದರು.

ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರವು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಮಾತನಾಡಿದರು.

‘ಹಣ ಸಂಪಾದನೆ, ಆಸ್ತಿ ಗಳಿಕೆಗಿಂತ ಆರೋಗ್ಯ ಮುಖ್ಯ. ಕೋಟಿಗಟ್ಟಲೇ ಹಣ, ಆಸ್ತಿ ಸಂಪಾದಿಸಿ ಆರೋಗ್ಯವೇ ಸರಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಆದ ಕಾರಣ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು. ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ದುಶ್ಚಟಗಳಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು.

‘ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮನುಷ್ಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾನೆ. ಯಾಂತ್ರಿಕ ಜೀವನದಿಂದ ಮಾನಸಿಕ ಒತ್ತಡ ಹೆಚ್ಚಿ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜನರ ಆಹಾರ ಕ್ರಮ ಮತ್ತು ಜೀವನ ಶೈಲಿ ಬದಲಾದರೆ ರೋಗಮುಕ್ತ ಬದುಕು ಸಾಗಿಸಬಹುದು’ ಎಂದು ಹೇಳಿದರು.

‘ಉತ್ತಮ ಆರೋಗ್ಯದಿಂದ ಮಾತ್ರ ಉತ್ತಮ ಕಲಿಕೆ ಸಾಧ್ಯ. ಹಾಲು, ಹಣ್ಣು, ತರಕಾರಿ, ಸೊಪ್ಪು ಸೇವಿಸಿದರೆ ರಕ್ತಹೀನತೆ ಹೋಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಸರ್ಕಾರ ನೀಡುತ್ತಿರುವ ಕ್ಷೀರಭಾಗ್ಯ, ಬಿಸಿಯೂಟ ಯೋಜನೆ ಪ್ರಯೋಜನ ಪಡೆದುಕೊಳ್ಳಿ’ ಎಂದು ತಿಳಿಸಿದರು.

‘ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ನವಜಾತ ಶಿಶುವಿನಿಂದ 18 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮುಖ ಸಮಸ್ಯೆಯಾಗಿದೆ. ಆರೋಗ್ಯ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು. ಬಯಲು ಬಹಿರ್ದೆಸೆಗೆ ಹೋಗಬಾರದು. ಶೌಚಾಲಯ ಬಳಸಬೇಕು’ ಎಂದರು.

ಉಚಿತ ಸೇವೆ: ‘ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಿರುವ ಮಕ್ಕಳ ವಿವರವನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲಾಗುತ್ತದೆ. ವೈದ್ಯರ ಶಿಫಾರಸ್ಸಿನಂತೆ ಆ ಮಕ್ಕಳು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆರೋಗ್ಯ ಸೇವೆ ಪಡೆಯಬಹುದು’ ಎಂದು ವೈದ್ಯೆ ಡಾ.ಕವಿತಾ ವಿವರಿಸಿದರು.

ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಶಾಂತಾ, ಶಾಲೆಯ ಮುಖ್ಯ ಶಿಕ್ಷಕ (ಪ್ರಭಾರ) ಸಚ್ಚಿದಾನಂದಮೂರ್ತಿ, ಶಿಕ್ಷಕರಾದ ಶ್ವೇತಾ, ಸುಗುಣಾ, ವೆಂಕಟರೆಡ್ಡಿ, ಶ್ರೀನಿವಾಸಲು, ಸುನಿತಾ, ಡಿ.ಚಂದ್ರಶೇಖರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)