ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯವು ಜೀವದ ಮುನ್ನುಡಿ

Last Updated 4 ಜುಲೈ 2018, 14:21 IST
ಅಕ್ಷರ ಗಾತ್ರ

ಕೋಲಾರ: ‘ದೇಹವು ಭಾವನಾತ್ಮಕವಾಗಿ ಮನುಷ್ಯನ ಅಸ್ತಿತ್ವದ ಸಂಕೇತ. ಮುಖವು ವಯಸ್ಸಿನ ಕನ್ನಡಿಯಾದರೆ ಹೃದಯವು ಜೀವದ ಮುನ್ನುಡಿ. ಮುಷ್ಟಿ ಗಾತ್ರದ ಹೃದಯದ ಬಡಿತದಲ್ಲಿ ಲಯ ತಪ್ಪಿದರೆ ಜೀವ ಹೋದಂತೆ’ ಎಂದು ಹೃದ್ರೋಗ ತಜ್ಞ ಡಾ.ಅಶ್ವತ್ಥ್‌ ನಾರಾಯಣ ಹೇಳಿದರು.

ಆರ್‌.ಎಲ್‌.ಜಾಲಪ್ಪ ನಾರಾಯಣ ಹೃದ್ರೋಗ ಕೇಂದ್ರದ ವತಿಯಿಂದ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೃದಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಹೃದಯವು ಮನುಷ್ಯನ ದೇಹದ ಬಹು ಮುಖ್ಯ ಅಂಗ. ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡರೆ ಜೀವಕ್ಕೆ ಅಪಾಯವಿರುತ್ತದೆ’ ಎಂದರು.

‘ಹಣ ಸಂಪಾದನೆ, ಆಸ್ತಿ ಗಳಿಕೆಗಿಂತ ಆರೋಗ್ಯ ಮುಖ್ಯ. ಕೋಟಿಗಟ್ಟಲೇ ಹಣ, ಆಸ್ತಿ ಸಂಪಾದಿಸಿ ಆರೋಗ್ಯವೇ ಸರಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಆದ ಕಾರಣ ಜನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ, ಅಸಮತೋಲಿತ ಆಹಾರ ಮತ್ತು ಒತ್ತಡದ ಜೀವನ ಶೈಲಿಯಿಂದ ಜನರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ದೇಶದಲ್ಲಿ ಎರಡು ದಶಕದಿಂದ ರಕ್ತದೊತ್ತಡ, ಹೃದ್ರೋಗ ಮತ್ತು ಮಧುಮೇಹ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಚಿಕ್ಕ ವಯಸ್ಸಿನ ಯುವಕ ಯುವತಿಯರೇ ಹೃದ್ರೋಗದ ಕಾರಣಕ್ಕೆ ಆಸ್ಪತ್ರೆಗೆ ಬರುತ್ತಿದ್ದಾರೆ. ಹೃದ್ರೋಗ ಕುರಿತ ಮಾಹಿತಿ ಕೊರತೆ, ಆರೋಗ್ಯದ ನಿರ್ಲಕ್ಷ್ಯದಿಂದ ಸಮಸ್ಯೆ ಗಂಭೀರವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಶಿಬಿರ ಸಹಕಾರಿ: ‘ಆರ್‌.ಎಲ್‌.ಜಾಲಪ್ಪ ನಾರಾಯಣ ಹೃದ್ರೋಗ ಕೇಂದ್ರವು ಜನರ ಆರೋಗ್ಯದ ಕಾಳಜಿಯಿಂದ ಆಗಾಗ್ಗೆ ಹೃದ್ರೋಗ ತಪಾಸಣಾ ಶಿಬಿರಗಳನ್ನು ನಡೆಸುತ್ತಿದೆ. ಶಿಬಿರದಲ್ಲಿ ಉಚಿತವಾಗಿ ತಪಾಸಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಮನುಷ್ಯನ ಕಾಯಿಲೆ ಪತ್ತೆ ಹಚ್ಚಿ ಸಕಾಲಕ್ಕೆ ಚಿಕಿತ್ಸೆ ಕೊಡಲು ಇಂತಹ ಶಿಬಿರಗಳು ಸಹಕಾರಿ’ ಎಂದು ತಿಳಿಸಿದರು.

ಶಿಬಿರದಲ್ಲಿ ಪಾಲ್ಗೊಂಡಿದ್ದ 200ಕ್ಕೂ ಹೆಚ್ಚು ಮಂದಿಗೆ ರಕ್ತ ಪರೀಕ್ಷೆ, ಇಸಿಜಿ, ಮಧುಮೇಹ ತಪಾಸಣೆ ಮಾಡಲಾಯಿತು. ವೈದ್ಯರಾದ ಡಾ.ಅಂಬರೀಶ್, ಡಾ.ಹರ್ಷ, ಡಾ.ಮಹೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT