ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ರೋಹಿಣಿ ಕಟೋಚ್‌ ಸೆಪಟ್

Last Updated 9 ಸೆಪ್ಟೆಂಬರ್ 2018, 15:25 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಮಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಸಹಕರಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್ ಕೋರಿದರು.

ಮಾದಕ ವಸ್ತುಗಳ ಮಾರಾಟ ಮಾಡುವವರ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುವ ಮೂಲಕನಗರದಲ್ಲಿ ಪೊಲೀಸ್ ಇಲಾಖೆವತಿಯಿಂದ ಭಾನುವಾರ ನಡೆದ ನಗರ ಠಾಣೆ ಮತ್ತು ಗಲ್‌ಪೇಟೆ ಠಾಣೆ ವ್ಯಾಪ್ತಿಯ ಗಸ್ತು ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಅದೇ ರೀತಿ ಮಾದಕ ದ್ರವ್ಯ ಮಾರಾಟ ನಿಯಂತ್ರಣ ಮಾಡಲು ಸಹಾಯವಾಣಿ ಆರಂಭಿಸಲಾಗುವುದು, ಅದಕ್ಕೆ ಕರೆ ಮಾಡಿ ಮಾಹಿತಿ ನೀಡಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ಗಾಂಜಾ ಮಾರಾಟ ಮತ್ತು ಸೇವನೆ ಶಾಲಾ, ಕಾಲೇಜು ಭಾಗಗಳಲ್ಲಿ ಹೆಚ್ಚಾಗಿ ನಡೆಯುತ್ತಿರುತ್ತದೆ. ಸೇವನೆ ನಡೆಯುತ್ತಿರುವುದು ಸರ್ಕಾರದ ಗಮಮಕ್ಕೆ ಬಂದು ಇವುಗಳನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ’ ಎಂದರು.

‘ಜಿಲ್ಲಾ ಕೇಂದ್ರದ ಮೂಲಕ ಪ್ರಮುಖ ಸಂಪರ್ಕ ರಸ್ತೆಗಳು ಹಾದುಹೋಗುತ್ತದೆ. ಇಲ್ಲೂ ಕಾನೂನು ಬಾಹಿರ ಚಟುವಟಿಕೆ ನಡೆಯುವ ಅವಕಾಶ ಹೆಚ್ಚಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲೂ ಗಾಂಜಾ ಮಾರಾಟ ಮತ್ತು ಸೇವನೆಗಳು ನಡೆಯುತ್ತಿರಬಹುದು. ಈ ಬಗ್ಗೆ ಸಹಾಯವಾಣಿ 1908ಗೆ ಕರೆ ಮಾಡಿ ಇಲಾಖೆ ಗಮನಕ್ಕೆ ತರಬೇಕು’ ಎಂದು ಹೇಳಿದರು.

‘ಬೀಟ್ ಪೊಲೀಸರಿಗೆ ಇಲಾಖೆಯಿಂದಲೇ ಮೊಬೈಲ್ ಸಿಮ್ ನೀಡಲಾಗುತ್ತಿದ್ದು, ಸಂಖ್ಯೆಯನ್ನು ಗಸ್ತು ಸದಸ್ಯರಿಗೆ ನೀಡಲಾಗುವುದು. ಇದರ ಜತೆಗೆ ವಾಟ್ಸ್‍ಆ್ಯಪ್ ಗ್ರೂಪ್ ರಚಿಸಲಾಗುವುದು. ಇದರಿಂದ ಸಂಹವನಕ್ಕೆ ಸಹಕಾರಿಯಾಗುತ್ತದೆ. ವದಂತಿಗಳನ್ನು ಗ್ರೂಪ್‌ಗೆ ಹಾಕಬೇಡಿ. ನಿಖರ ಮಾಹಿತಿಗಳನ್ನಷ್ಟೇ ನೀಡಿ’ ಎಂದು ಸಲಹೆ ನೀಡಿದರು.

‘ಇಲಾಖೆಯಲ್ಲಿ ಮಹಿಳಾ ಸಬಲೀಕರಣವೂ ಆಗಬೇಕಿದೆ. ಇನ್ನು ಮುಂದೆ ಮಹಿಳಾ ಪೇದೆಗಳನ್ನು ಕೂಡ ಗಸ್ತು ಕಾರ್ಯಕ್ಕೆ ನಿಯೋಜಿಸಲಾಗುವುದು. ಈ ಸಂಬಂಧ ಸೂಕ್ತ ತರಬೇತಿ ನೀಡಿ ಜವಾಬ್ದಾರಿ ವಹಿಸಲಾಗುವುದು’ ಎಂದರು.

‘ಬೀಟ್ ವ್ಯವಸ್ಥೆ ಹಿಂದಿನಿಂದಲೂ ಇತ್ತು. ಜನಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚುತ್ತದೆ. ನಗರ ಹಾಗೂ ಗ್ರಾಮಗಳಲ್ಲಿ ಸಣ್ಣಸಣ್ಣ ವಿಚಾರಕ್ಕೆ ಆರಂಭವಾಗುವ ಗಲಾಟೆ ದೊಡ್ಡದಾಗುತ್ತಾ ಕೊನೆಗೆ ಕಾನೂನು ಸುವ್ಯವಸ್ಥೆ ಕೆಡುವ ಮಟ್ಟಕ್ಕೆ ಬರುತ್ತದೆ. ಸಮಸ್ಯೆ ಸಣ್ಣದಾಗಿದ್ದಾಗಲೇ ಪರಿಹರಿಸಿಕೊಳ್ಳಬೇಕು. ಹೀಗಾಗಿ ಸ್ಥಳೀಯರು ಆಯಾ ಭಾಗಕ್ಕೆ ನಿಯೋಜಿಸಿರುವ ಬೀಟ್ ಪೊಲೀಸ್‌ಗೆ ಮಾಹಿತಿ ನೀಡುವ ಕೆಲಸ ಮಾಡಿದರೆ ಪರಿಸ್ಥಿತಿ ನಿಯಂತ್ರಿಸಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ನಗರ ಠಾಣೆ ಸಿಪಿಐ ಎಂ.ಜೆ.ಲೋಕೇಶ್, ಪಿಎಸ್‍ಐ ಎಂ.ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT