ಮಂಗಳವಾರ, ನವೆಂಬರ್ 12, 2019
27 °C
ಶಾಸಕರ ಮಧ್ಯ ಪ್ರವೇಶಕ್ಕೆ ಅಪ್ಪಸಂದ್ರ– ಅಜ್ಜಪ್ಪನಹಳ್ಳಿ ರೈತರ ಒತ್ತಾಯ

ಸಾಗುವಳಿ ಚೀಟಿ ನೀಡಲು ಹಿಂದೇಟು

Published:
Updated:
Prajavani

ಕೋಲಾರ: ‘ಸಾಗುವಳಿ ಚೀಟಿಗೆ ಸಲ್ಲಿಸಿದ್ದ ಅರ್ಜಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ವಜಾಗೊಳಿಸಿ ವಂಚಿಸುವ ಸಂಚು ಮಾಡಿದ್ದಾರೆ’ ಎಂದು ಆರೋಪಿಸಿ ತಾಲ್ಲೂಕಿನ ಅಪ್ಪಸಂದ್ರ ಮತ್ತು ಅಜ್ಜಪ್ಪನಹಳ್ಳಿಯ 20ಕ್ಕೂ ಹೆಚ್ಚು ರೈತರು ಶಾಸಕ ಕೆ.ಶ್ರೀನಿವಾಸಗೌಡ ಅವರಿಗೆ ಇಲ್ಲಿ ಸೋಮವಾರ ದೂರು ಸಲ್ಲಿಸಿದರು.

‘ಹಲವು ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿದ್ದೇವೆ. ಜಮೀನು ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕಂದಾಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಆದ ಕಾರಣ ನೀವು ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಿ’ ಎಂದು ರೈತರು ಶಾಸಕರಿಗೆ ಮನವಿ ಮಾಡಿದರು.

‘ತಂದೆ ಕಾಲದಿಂದಲೂ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ. 1999ರಲ್ಲಿ ಅಕ್ರಮ ಸಕ್ರಮದಡಿ (ಫಾರಂ 53 ಮತ್ತು 54) ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅಧಿಕಾರಿಗಳು ಸಾಗುವಳಿ ಚೀಟಿ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ಅಪ್ಪಸಂದ್ರದ ರೈತ ನಂಜುಂಡಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಕಂದಾಯ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿದ್ದಾಗ ರಾಗಿ, ಅವರೆ ಬಿತ್ತನೆ ಮಾಡಲಾಗಿತ್ತು. ಅಧಿಕಾರಿಗಳು ಜಮೀನು ಕಲ್ಲುಗಳಿಂದ ಕೂಡಿದ್ದು, ಕೃಷಿಗೆ ಯೋಗ್ಯವಲ್ಲ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ಅಕ್ರಮ ಸಕ್ರಮದ ಅರ್ಜಿಗಳನ್ನು ವಜಾಗೊಳಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಉಪ ವಿಭಾಗಾಧಿಕಾರಿಯು ನಮ್ಮ ವಿರುದ್ಧ ದೂರು ದಾಖಲಿಸಿ ವಿನಾಕಾರಣ ಕಚೇರಿಗೆ ಅಲೆಸುತ್ತಿದ್ದಾರೆ. ಕಂದಾಯ ಅಧಿಕಾರಿಗಳು ಕೈಗಾರಿಕೆಗಳಿಗೆ ಕೊಡಲು ಅಪ್ಪಸಂದ್ರ ಗ್ರಾಮದಲ್ಲಿ ೧೪ ಎಕರೆ ಮತ್ತು ಅಜ್ಜಪ್ಪನಹಳ್ಳಿ ಸಮೀಪ ೩೦ ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರೆ. ಆ ಜಮೀನು ರೈತರ ಅನುಭವದಲ್ಲಿದೆ ಎಂಬುದಕ್ಕೆ ಇಲಾಖೆಯಲ್ಲಿ ದಾಖಲೆಪತ್ರಗಳಿವೆ. ಸಾಗುವಳಿ ಚೀಟಿ ನೀಡಿದರೆ ಭೂಪರಿಹಾರ ಪಡೆಯಲು ಸಹಾಯವಾಗುತ್ತದೆ’ ಎಂದು ಹೇಳಿದರು.

ಪ್ರಾಮಾಣಿಕ ಪ್ರಯತ್ನ: ರೈತರ ಮನವಿಗೆ ಸ್ಪಂದಿಸಿದ ಶಾಸಕರು, ‘ಸಾಗುವಳಿ ಚೀಟಿ ನೀಡಿಕೆ ಸಂಬಂಧ ಈ ಹಿಂದೆ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿತ್ತು. ಕೈಗಾರಿಕೆಗಳು ಸ್ಥಾಪನೆಯಾಗುವುದು ಸ್ಥಳೀಯರ ಪುಣ್ಯ. ಜಮೀನಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ನರಸಾಪುರ ಮತ್ತು ವೇಮಗಲ್ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಿರುವುದರಿಂದ ಸ್ವಲ್ಪ ಮಟ್ಟಿಗೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿದೆ. ಕಂಪನಿಗಳಿಗೆ ಭೂಮಿ ನೀಡಿರುವ ಕೆಲ ರೈತರ ಮಕ್ಕಳಿಗೆ ಕೆಲಸ ನೀಡದಿರುವ ಬಗ್ಗೆ ದೂರು ಬಂದಿದ್ದು, ಅರ್ಹರಿಗೆ ಕೆಲಸ ನೀಡುವಂತೆ ಕಂಪನಿ ಮುಖ್ಯಸ್ಥರಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ನರಸಾಪುರ ಮತ್ತು ವೇಮಗಲ್‌ ಭಾಗದಲ್ಲಿ ರೈತರು ಕೈಗಾರಿಕೆಗಳಿಗೆ ಜಮೀನು ನೀಡಿದ್ದಾರೆ. ಅವರ ಭೂಮಿಗೆ ನೀಡಿರುವ ದರವನ್ನೇ ನಿಮ್ಮ ಜಮೀನಿಗೂ ಕೊಡಿಸುತ್ತೇನೆ. ಸಾಗುವಳಿ ಚೀಟಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ. ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಪರಿಹಾರ ಕೊಡಿಸುತ್ತೇನೆ’ ಎಂದು ತಿಳಿಸಿದರು.

ಜಮೀನು ನೀಡಿಲ್ಲ: ‘ನಮ್ಮ ಕಂಪನಿಗೆ ಅಗತ್ಯವಿರುವಷ್ಟು ಜಮೀನು ನೀಡಿಲ್ಲ. ಕೇವಲ 3 ಎಕರೆ ಜಾಗದಲ್ಲಿ ಕೈಗಾರಿಕೆ ಸ್ಥಾಪಿಸಿ ೩೦೦ ಮಂದಿಗೆ ಕೆಲಸ ಕೊಟ್ಟಿದ್ದೇವೆ. ಉತ್ಪಾದನಾ ವೆಚ್ಚ ಕಳೆದು ಶೇ ೨೦ರಷ್ಟು ಲಾಭ ಸಿಗುತ್ತಿಲ್ಲ. ಆದಷ್ಟು ಬೇಗೆ ಜಾಗ ನೀಡಿದರೆ ರೈತರಿಗೆ ಕಂಪನಿಯಿಂದ ಪರಿಹಾರ ಕೊಡುತ್ತೇವೆ’ ಎಂದು ಸೆರೆಬ್ರ ಕೈಗಾರಿಕೆ ಸಿಇಒ ರವಿಕುಮಾರ್ ಮಾಹಿತಿ ನೀಡಿದರು.

‘ಕಂಪನಿಗಳಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದ ಯುವಕರನ್ನು ಇತ್ತೀಚೆಗೆ ವಜಾಗೊಳಿಸಲಾಗಿದೆ. ಈ ಬಗ್ಗೆ ಮಾತನಾಡಲು ಕಂಪನಿ ಆಡಳಿತ ಮಂಡಳಿಯವರು ಸಿಗುತ್ತಿಲ್ಲ’ ಎಂದು ಗ್ರಾಮಸ್ಥ ಪ್ರಾಣೇಶ್‌ರಾವ್ ಆರೋಪಿಸಿದರು.

ಪ್ರತಿಕ್ರಿಯಿಸಿ (+)