ಶುಕ್ರವಾರ, ನವೆಂಬರ್ 15, 2019
24 °C
₹ 28 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಸಭೆಯಲ್ಲಿ ನಿರ್ಧಾರ

ಹುತ್ತೂರು ಶಾಲೆಗೆ ಹೈಟೆಕ್‌ ಸ್ಪರ್ಶ

Published:
Updated:
Prajavani

ಕೋಲಾರ: ತಾಲ್ಲೂಕಿನ ಹುತ್ತೂರು ಸರ್ಕಾರಿ ಪ್ರೌಢ ಶಾಲೆಗೆ ಹೈಟೆಕ್ ಸ್ಪರ್ಶ ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ನಿಧಿ ಹಾಗೂ ನರೇಗಾ ಯೋಜನೆಯಡಿ ₹ 28 ಲಕ್ಷ ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ಅ.2ರಂದು ಚಾಲನೆ ನೀಡಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಗಾಂಧಿ ಜಯಂತಿ ಆಚರಣೆ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹಾಗೂ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ ಅಧ್ಯಕ್ಷತೆಯಲ್ಲಿ ಶಾಲೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕಾಮಗಾರಿಗಳ ಸಂಬಂಧ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ನಾಗರಾಜಗೌಡ, ‘ಸರ್ಕಾರಿ ಶಾಲೆ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಸ್ಪಂದಿಸಿರುವುದು ಸ್ವಾಗತಾರ್ಹ. ಈ ಶಾಲೆ ತಾಲ್ಲೂಕಿಗೆ ಮಾದರಿಯಾಗಲಿದೆ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿದ್ದಾರೆ. ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸುತ್ತಾರೆ. ಆದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಶಾಲೆ ಆವರಣದಲ್ಲಿ ಮಣ್ಣು ತುಂಬಿಸಿ ಸಮತಟ್ಟು ಮಾಡಬೇಕು. ವಾಹನ ನಿಲುಗಡೆ ಸ್ಥಳದಲ್ಲಿ ಟೈಲ್ಸ್ ನೆಲಹಾಸು ನಿರ್ಮಿಸಲಾಗಿದೆ. ಲರ್ನಿಂಗ್ ನೇಚರ್ ಹಟ್ ಸಹ ನಿರ್ಮಿಸಲಾಗುವುದು. ಸುಸಜ್ಜಿತ ಆಟದ ಮೈದಾನ, ಹೈಟೆಕ್ ಶೌಚಾಲಯ, ಕಿಚನ್ ಗಾರ್ಡನ್, ಸೈಕಲ್ ಸ್ಟಾಂಡ್ ನಿರ್ಮಾಣ ಮಾಡಲಾಗುತ್ತದೆ’ ಎಂದು ತಿಳಿಸಿದರು.

‘ಶಾಲೆಯ ಅಕ್ಷರ ದಾಸೋಹ ಕೊಠಡಿ ಉನ್ನತೀಕರಣ, ಕುಡಿಯುವ ನೀರು ವ್ಯವಸ್ಥೆ, ಮಳೆ ಕೊಯ್ಲು ಪದ್ಧತಿ ಅಳವಡಿಕೆ ಜತೆಗೆ ವಿವಿಧ ಬಗೆಯ 300 ಸಸಿ ನೆಡಲಾಗುವುದು. ವಿದ್ಯುದೀಕರಣ, ವಿದ್ಯುತ್ ದೀಪ ಅಳವಡಿಕೆ, ಗ್ರಂಥಾಲಯ ಪುನರ್ ನಿರ್ಮಾಣ ಕಾಮಗಾರಿಗ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅನುಮೋದನೆ: ‘ಗ್ರಾ.ಪಂ ನಿಧಿಯಿಂದ ₹ 2 ಲಕ್ಷ, 14ನೇ ಹಣಕಾಸು ಯೋಜನೆ, ನರೇಗಾ, ಹೊಳಲಿ ಗ್ರಾಮದಲ್ಲಿನ ಜಾಲಿ ಮರಗಳ ಹರಾಜಿನಿಂದ ಬಂದ ಅನುದಾನ ₹ 3 ಲಕ್ಷ, ನೈರ್ಮಲ್ಯ ಯೋಜನೆಯ ₹ 1 ಲಕ್ಷ ಸೇರಿದಂತೆ ಒಟ್ಟು ₹ 28 ಲಕ್ಷದ ವಿವಿಧ ಕಾಮಗಾರಿ ನಡೆಸಲಾಗುತ್ತದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಮಗಾರಿಗಳಿಗೆ ಈಗಾಗಲೇ ಅನುಮೋದನೆ ನೀಡಿದ್ದಾರೆ’ ಎಂದು ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಮ್ಮ ತಿಳಿಸಿದರು.

‘ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಂತೆಯೇ ಅಭಿವೃದ್ಧಿಪಡಿಸುತ್ತೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಯುಕೆಜಿ, ಎಲ್‌ಕೆಜಿ ಹಾಗೂ 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೂ ಆಂಗ್ಲ ಮಾಧ್ಯಮ ಆರಂಭಿಸಬೇಕು’ ಎಂದು ಗ್ರಾ.ಪಂ ಸದಸ್ಯ ಸತೀಶ್‌ಬಾಬು ಒತ್ತಾಯಿಸಿದರು.

‘ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕು’ ಎಂದು ಶಾಲೆಯ ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಮನವಿ ಮಾಡಿದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಿವಾನಂದ್, ಶಾಲೆ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.

ಪ್ರತಿಕ್ರಿಯಿಸಿ (+)