ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ

7
ಮೂಲಸೌಕರ್ಯ ಸಮಸ್ಯೆಗೆ ಮುಕ್ತಿ: ನಿಲ್ದಾಣದ ಚಿತ್ರಣವೇ ಬದಲು

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ

Published:
Updated:
ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಆವರಣಕ್ಕೆ ಹೊಸದಾಗಿ ಕಾಂಕ್ರಿಟ್‌ ಹಾಕುತ್ತಿರುವುದು.

ಕೋಲಾರ: ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ ನೀಡಲಾಗುತ್ತಿದ್ದು, ಪ್ರಯಾಣಿಕರ ಮೂಲಸೌಕರ್ಯದ ಬೇಡಿಕೆ ಸಾಕಾರಗೊಳ್ಳುತ್ತಿದೆ.

ಜಿಲ್ಲಾ ಕೇಂದ್ರದಲ್ಲಿನ ಈ ಬಸ್‌ ನಿಲ್ದಾಣವು 16,078 ಚದರ ಮೀಟರ್‌ ವಿಸ್ತಾರವಾಗಿದೆ. ನಿಲ್ದಾಣದಿಂದ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡಿಗೆ ಪ್ರತಿನಿತ್ಯ ಎರಡು ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1.50 ಲಕ್ಷ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಬೇರೆಡೆಗೆ ಪ್ರಯಾಣ ಮಾಡುತ್ತಾರೆ.

ನಿಲ್ದಾಣದಲ್ಲಿನ ಮೂಲಸೌಕರ್ಯ ಸಮಸ್ಯೆಯಿಂದಾಗಿ ಪ್ರಯಾಣಿಕರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರತಿನಿತ್ಯ ಬವಣೆ ಪಡುವಂತಾಗಿತ್ತು. ನಿಲ್ದಾಣದ ಅರ್ಧ ಭಾಗಕ್ಕೆ ಮಾತ್ರ ಕಾಂಕ್ರಿಟ್‌ ಹಾಕಲಾಗಿತ್ತು. ಉಳಿದ ಅರ್ಧ ಭಾಗ ಗುಂಡಿಮಯವಾಗಿತ್ತು. ತುಂತುರು ಮಳೆ ಬಂದರೂ ಗುಂಡಿಗಳಲ್ಲಿ ನೀರು ನಿಂತು ನಿಲ್ದಾಣ ಕೆಸರು ಗದ್ದೆಯಂತಾಗುತ್ತಿತ್ತು.

ಗುಂಡಿಗಳ ಮಧ್ಯೆ ಬಸ್‌ಗಳು ಆಮೆ ಗತಿಯಲ್ಲಿ ಸಾಗುತ್ತಿದ್ದವು. ಬಸ್‌ಗಳ ಸಂಚರಿಸಿದಾಗ ಪ್ರಯಾಣಿಕರಿಗೆ ಧೂಳಿನ ಮಜ್ಜನವಾಗುತ್ತಿತ್ತು. ಇನ್ನು ಮಳೆಗಾಲದಲ್ಲಿ ಪ್ರಯಾಣಿಕರ ಮೇಲೆ ಕೆಸರು ಹಾರಿ ಸಾಕಷ್ಟು ಅವಾಂತರ ಸೃಷ್ಟಿಸುತ್ತಿತ್ತು. ನಿಲ್ದಾಣಕ್ಕೆ ಸಂಪೂರ್ಣವಾಗಿ ಕಾಂಕ್ರಿಟ್ ಹಾಕಬೇಕು ಹಾಗೂ ಹೊಸ ಕೊಳವೆ ಬಾವಿ ಕೊರೆಸಿ ನೀರಿನ ಸೌಕರ್ಯ ಕಲ್ಪಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.

ಪ್ರಯಾಣಿಕರ ಸ್ನೇಹಿ:  ಕೊನೆಗೂ ಮೂಲಸೌಕರ್ಯ ಸಮಸ್ಯೆಗೆ ಸ್ಪಂದಿಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿಯಾಗಿ ಮಾಡಲು ಹೊರಟಿದೆ. ನಿಲ್ದಾಣದ ಅವರಣದಲ್ಲಿ ಮೂರು ಸಾವಿರ ಚದರ ಮೀಟರ್‌ಗೆ ಹೊಸದಾಗಿ ಕಾಂಕ್ರಿಟ್‌ ಹಾಕಲಾಗುತ್ತಿದೆ. ಜತೆಗೆ ಪ್ರಯಾಣಿಕರ ತಂಗುದಾಣ (ಶೆಲ್ಟರ್‌) ಮತ್ತು ಹೆಚ್ಚುವರಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ, ವಾಹನ ನಿಲುಗಡೆ (ಪಾರ್ಕಿಂಗ್‌) ಸ್ಥಳದ ವ್ಯವಸ್ಥೆ ಮಾಡಲಾಗುತ್ತಿದೆ.

ನೀರಿನ ಸಮಸ್ಯೆಗೆ ಮುಕ್ತಿ: ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸದ್ಯ ಕುಡಿಯುವ ನೀರಿನ ಸೌಕರ್ಯವಿಲ್ಲ. ನಿಲ್ದಾಣದ ಪ್ರವೇಶ ಭಾಗದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ನಿಲ್ದಾಣದಲ್ಲಿ ಕೊಳವೆ ಬಾವಿ ಸಹ ಇಲ್ಲ. ಮತ್ತೊಂದೆಡೆ ನಗರಸಭೆಯಿಂದಲೂ ನೀರು ಪೂರೈಕೆಯಾಗುತ್ತಿಲ್ಲ.

ಹೀಗಾಗಿ ನಿಲ್ದಾಣದ ಸಿಬ್ಬಂದಿ ಪ್ರತಿನಿತ್ಯ ಮನೆಯಿಂದಲೇ ಬಾಟಲಿಗಳಲ್ಲಿ ಕುಡಿಯುವ ನೀರು ತರುತ್ತಿದ್ದಾರೆ. ಪ್ರಯಾಣಿಕರು ನಿಲ್ದಾಣದಲ್ಲಿನ ಅಂಗಡಿಗಳಲ್ಲಿ ಹಣ ಕೊಟ್ಟು ನೀರು ಖರೀದಿಸುವ ಪರಿಸ್ಥಿತಿ ಇದೆ. ನಿಲ್ದಾಣದ ಶೌಚಾಲಯಗಳ ನಿರ್ವಹಣೆಯ ಟೆಂಡರ್‌ ಪಡೆದಿರುವ ಗುತ್ತಿಗೆದಾರರು ಖಾಸಗಿ ಟ್ಯಾಂಕರ್‌ ಮಾಲೀಕರಿಂದ ನೀರು ಖರೀದಿಸುತ್ತಿದ್ದಾರೆ. ನೀರಿನ ಸಮಸ್ಯೆಗೆ ಮುಕ್ತಿ ಕಾಣಿಸಲು ಸಂಸ್ಥೆಯು ಹೊಸದಾಗಿ ಕೊಳವೆ ಬಾವಿ ಕೊರೆಸಲು ಯೋಜನೆ ರೂಪಿಸಿದೆ.

ಮಳೆ ನೀರು ಕೊಯ್ಲು: ನಿಲ್ದಾಣದಿಂದ ಮಳೆ ನೀರು ವ್ಯರ್ಥವಾಗಿ ಹೊರಗೆ ಹರಿದು ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯು ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆಗೆ ಮುಂದಾಗಿದೆ. ನಿಲ್ದಾಣದ ಆವರಣದಲ್ಲಿ ಬೀಳುವ ಮಳೆ ನೀರನ್ನು ತೊಟ್ಟಿಯಲ್ಲಿ ಸಂಗ್ರಹಿಸಿಕೊಂಡು ಶೌಚಾಲಯ ಹಾಗೂ ನಿಲ್ದಾಣದ ಸ್ವಚ್ಛತಾ ಕಾರ್ಯಕ್ಕೆ ಬಳಸಲು ಉದ್ದೇಶಿಸಲಾಗಿದೆ.  ಕಾರಂಜಿಕಟ್ಟೆ ಮುಖ್ಯರಸ್ತೆಯ ಕಡೆಗೆ ರಾಜಕಾಲುವೆಗೆ ಹೊಂದಿಕೊಂಡಂತೆ ನಿಲ್ದಾಣಕ್ಕೆ ತಡೆಗೋಡೆ (ಕಾಂಪೌಂಡ್‌) ನಿರ್ಮಿಸಲಾಗುತ್ತಿದೆ. ಮೂರ್ನಾಲ್ಕು ವಾರಗಳಲ್ಲಿ ನಿಲ್ದಾಣದ ಚಿತ್ರಣವೇ ಬದಲಾಗಲಿದ್ದು, ನಿಲ್ದಾಣವು ಮತ್ತಷ್ಟು ಜನಸ್ನೇಹಿಯಾಗಲಿದೆ.

ಸಂಸ್ಥೆಗೆ ಲಾಭ ಗಳಿಕೆಗಿಂತ ಪ್ರಯಾಣಿಕರ ಹಿತರಕ್ಷಣೆಯೇ ಮುಖ್ಯ. ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಜತೆಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಸ್ಥಳ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ನಿಲ್ದಾಣದ ಆವರಣಕ್ಕೆ ಕಾಂಕ್ರಿಟ್‌ ಹಾಕಿಸುವುದು ಸೇರಿದಂತೆ ₹ 3 ಕೋಟಿ ಅಂದಾಜು ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ.
–ಕೆ.ವಿ.ಮಂಜುನಾಥ್‌, ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಅಂಕಿ ಅಂಶ.....
* 16,078 ಚ.ಮೀ ನಿಲ್ದಾಣದ ವಿಸ್ತಾರ
* ಪ್ರತಿನಿತ್ಯ 2 ಸಾವಿರ ಬಸ್‌ ಸಂಚಾರ
* 1.50 ಲಕ್ಷ ಪ್ರಯಾಣಿಕರ ಪ್ರಯಾಣ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !