ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದಿಂದ ಸಮಾಜದಲ್ಲಿ ಉನ್ನತ ಸ್ಥಾನ

ಬೆಂಗಳೂರು ಉತ್ತರ ವಿ.ವಿ ಕುಲಸಚಿವ ಶ್ರೀನಿವಾಸ್ ಅಭಿಪ್ರಾಯ
Last Updated 12 ಜುಲೈ 2019, 14:49 IST
ಅಕ್ಷರ ಗಾತ್ರ

ಕೋಲಾರ: ‘ಜ್ಞಾನದಿಂದ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ. ಅಂಕ ಗಳಿಕೆಯು ವಿದ್ಯಾರ್ಥಿಗಳ ಬುದ್ಧಿಮತ್ತೆಯ ಮಾನದಂಡವಾಗಬಾರದು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಆರ್.ಶ್ರೀನಿವಾಸ್ ತಿಳಿಸಿದರು.

ಸಿ.ಬೈರೇಗೌಡ ತಾಂತ್ರಿಕ ವಿದ್ಯಾಲಯ, ಬಿ.ಆರ್.ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಶಿಶುಕ್ಷು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಾಯೋಗಿಕ ವಿಧಾನ ತುಂಬಾ ಮುಖ್ಯ. ಈ ವಿಧಾನದಿಂದ ಸರ್ವತ್ತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ನೂತನ ಆವಿಷ್ಕಾರಗಳ ಬಗ್ಗೆ ತಿಳಿದುಕೊಂಡು ಅದನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರಾಯೋಗಿಕ ವಿಧಾನ ಪರಿಣಾಮಕಾರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಇತ್ತೀಚೆಗೆ ಕಡಿಮೆಯಾಗುತ್ತಿದೆ. ಯುವಕ ಯುವತಿಯರು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕಾರ್ಯಾಗಾರಗಳು ಮತ್ತು ಶಿಬಿರಗಳಿಂದ ಹೆಚ್ಚಿನ ಕಲಿಕೆಯಾಗುವುದರ ಜತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ. ವಿದ್ಯಾರ್ಥಿಗಳು ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಕಲಿಕೆ ನಿಂತ ನೀರಲ್ಲ. ಸಂಪೂರ್ಣವಾಗಿ ಎಲ್ಲಾ ಕಲಿತಿದ್ದೇನೆ ಎಂಬುವರು ಯಾರೂ ಇಲ್ಲ. ತಿಳಿದಿರುವುದು ಸ್ವಲ್ಪ, ತಿಳಿಯದೇ ಇರುವುದೇ ಹೆಚ್ಚು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಕಲಿಕೆ ನಿರಂತರವಾಗಿ ನಡೆಯಬೇಕು. ಕಲಿಕೆಗೆ ತಾಳ್ಮೆ ಅವಶ್ಯಕ. ತಾಳ್ಮೆಯಿಂದ ಕಲಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಕಿವಿಮಾತು ಹೇಳಿದರು.

ಮುನ್ನೆಚ್ಚರಿಕೆ ವಹಿಸಬೇಕು: ‘ತ್ಯಾಜ್ಯವನ್ನು 4 ವಿಧವಾಗಿ ವಿಂಗಡಿಸಬಹುದು. ಹಸಿ ಕಸ, ಒಣ ಕಸ, ವೈದ್ಯಕೀಯ ತ್ಯಾಜ್ಯ ಹಾಗೂ ಇ–ತ್ಯಾಜ್ಯವನ್ನು ಮರು ಬಳಕೆಗೆ ಕಳುಹಿಸಿ ಕೊಡಬೇಕು. ಎಂಜಿನಿಯರ್ ವಿದ್ಯಾರ್ಥಿಗಳು ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಹೆಚ್ಚು ಜವಾಬ್ದಾರಿ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಕಟ್ಟಡ, ಚೆಕ್‌ಡ್ಯಾಂ, ರಸ್ತೆಗಳು ಸೇರಿದಂತೆ ಯಾವುದೇ ರೀತಿಯ ಕಾಮಗಾರಿ ಮಾಡುವಾಗ ಮುಂದಾಲೋಚನೆ ಮಾಡುವುದರ ಜತೆಗೆ ನೂತನ ತಂತ್ರಜ್ಞಾನ ಬಳಸಿಕೊಳ್ಳಬೇಕು. ಮಳೆ ನೀರು ಕೊಯ್ಲು ವ್ಯವಸ್ಥೆಗೆ ಆದ್ಯತೆ ನೀಡಬೇಕು. ಮಳೆ ನೀರು ಸಂಗ್ರಹಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಸುಧಾರಿತ ತಂತ್ರಜ್ಞಾನ: ‘ಪ್ರಚಲಿತ ದಿನಗಳಲ್ಲಿ ಸುಧಾರಿತ ತಂತ್ರಜ್ಞಾನ ಬಂದಿದೆ. ನೂತನ ತಂತ್ರಜ್ಞಾನ ತಿಳಿದು ಬಳಸಬೇಕು. ಮಳೆ ನೀರಿನ ಸಂರಕ್ಷಣೆ, ಕಸ ನಿರ್ವಹಣೆ, ಕಟ್ಟಡಗಳ ನಿರ್ಮಾಣ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಲಾಗುತ್ತದೆ’ ಎಂದು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೆ.ಎನ್.ನಾರಾಯಣಗೌಡ ವಿವರಿಸಿದರು.

‘ಗೊತ್ತಿಲ್ಲದ ವಿಚಾರಗಳನ್ನು ಉಪನ್ಯಾಸಕರ ಬಳಿ ಕೇಳಿ ತಿಳಿದುಕೊಳ್ಳಬೇಕು. ಮಾಡುವ ಕೆಲಸದಲ್ಲಿ ಹಂತಗಳು ಬೇರೆ ಬೇರೆ ಇರಬಹುದು. ಆದರೆ, ಮೌಲ್ಯ ಮಾತ್ರ ಒಂದೇ. ವಿದ್ಯಾರ್ಥಿಗಳು ಮೊದಲು ಮೌಲ್ಯ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ’ ಎಂದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ರಮಾಕಾಂತ್‌ ಯಾದವ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT