ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಮಡಿಲು ತುಂಬಿದ ಸವಿಜೇನು

Last Updated 7 ನವೆಂಬರ್ 2020, 1:18 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡು ಹಾಗೂ ಮುದಿಮಡಗು ಸಮೀಪದ ಗುಡ್ಡಗಾಡು ಜೇನಿಗೆ ಪ್ರಸಿದ್ಧಿ. ಗ್ರಾಮೀಣ ಪ್ರದೇಶದ ಜೇನುಗಾರರು ಕಾಡಲ್ಲಿ ಸುತ್ತಾಡಿ ಜೇನು ತೆಗೆದು ರಸ್ತೆ ಬದಿಯಲ್ಲಿ ಮಾರುತ್ತಾರೆ.

ಈಗ ಎಲ್ಲೆಡೆ ವನಸುಮಗಳು ಅರಳಿ ನಗುತ್ತಿವೆ. ಹಾಗಾಗಿ ಕಾಡು ಹಾಗೂ ಬೆಟ್ಟದಲ್ಲಿ ಜೇನು ಸಿಗುತ್ತಿದೆ. ಹಾಗಾಗಿ ಕೆಲವು ಸ್ಥಳೀಯರು ಜೇನು ಹುಟ್ಟುಗಳನ್ನು ಹುಡುಕಿ, ಜೇನು ತೆಗೆದು ಮಾರುತ್ತಿದ್ದಾರೆ. ಜೇನಿನಲ್ಲೂ ಹಲವು ಬಗೆಗಳಿವೆ, ಕಡ್ಡಿ ಜೇನು, ಹುತ್ತ ಜೇನು, ಪೊಟರೆ ಜೇನು, ಹೆಜ್ಜೇನು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಹೆಜ್ಜೇನನ್ನು ಹೊರತುಪಡಿಸಿ ಉಳಿದ ಜೇನಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಹೆಜ್ಜೇನು ತಿನ್ನಲು ಸ್ವಲ್ಪ ಹುಳಿ ಹಾಗಾಗಿ ಜನ ಅದನ್ನುಖರೀದಿಸಲು ಹಿಂದೇಟು ಹಾಕುತ್ತಾರೆ.

ಶ್ರೀನಿವಾಸಪುರದಿಂದ ಆಂಧ್ರಪ್ರದೇಶದ ಮದನಪಲ್ಲಿಗೆ ಹೋಗುವ ಕಾಡು ರಸ್ತೆಯ ಪಕ್ಕ ಪ್ಲಾಸ್ಟಿಕ್‌ ಬಾಟಲಿಗೆ ಜೇನು ತುಂಬಿ ಕೋಲಿಗೆ ನೇತುಹಾಕಿರುತ್ತಾರೆ. ಆ ಮಾರ್ಗವಾಗಿ ಸಾಗುವ ಜನ, ಜೇನು ಬೇಕಾಗಿದ್ದಲ್ಲಿ ವಾಹನ ನಿಲ್ಲಿಸಿ ಖರೀದಿಸಿ ಕೊಂಡೊಯ್ಯುತ್ತಾರೆ. ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ಜೇನು ತುಪ್ಪ ಕೆಜಿಯೊಂದಕ್ಕೆ ₹500 ಇದೆ. ಆದರೆ ಇಲ್ಲಿನ ಜೇನುಗಾರರು ಅಷ್ಟೇ ತೂಕದ ಜೇನನ್ನು ₹200 ರಿಂದ ₹250ಕ್ಕೆ ಮಾರಾಟ ಮಾಡುತ್ತಾರೆ.

ಪ್ರತಿ ವರ್ಷ ಆಂಧ್ರಪ್ರದೇಶದ ಜೇನುಗಾರರು ತಾಲ್ಲೂಕಿಗೆ ಬರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಕಾಡು ಸುತ್ತಿ ಜೇನು ತೆಗೆಯುತ್ತಾರೆ. ಅಂದು ತೆಗೆದ ಜೇನನ್ನು ಅಂದೇ ಮಾರಿಬಿಡುವುದು ರೂಢಿ. ಉಳಿದರೆ ಶ್ರೀನಿವಾಸಪುರಕ್ಕೆ ತಂದು ಮಾರುತ್ತಾರೆ. ಜೇನಿನ ಸಾಚಾತನ ತಿಳಿಸಲು ಜೇನು ಹುಟ್ಟುಗಳನ್ನೂ ಪ್ರದರ್ಶಿಸುತ್ತಾರೆ.

ಮಾವಿನ ಹೂ ಬರುವ ಕಾಲದಲ್ಲಿ ಜೇನು ಹುಟ್ಟುಗಳ ಸಂಖ್ಯೆ ಹೆಚ್ಚುತ್ತವೆಯಾದರೂ, ಜೇನಿಗೆ ಒಂದು ನಿರ್ದಿಷ್ಟವಾದ ಕಾಲವೆಂಬುದಿಲ್ಲ. ಜೇನ್ನೊಣ ದೂರ ಪ್ರಯಾಣ ಮಾಡಿ ಹೂಗಳನ್ನು ಹುಡುಕಿ, ಮಧುವನ್ನು ತಂದು ಸಂಗ್ರಹಿಸುತ್ತದೆ. ಮುಖ್ಯವಾಗಿ ಅದಕ್ಕೆ ನೀರು ಮತ್ತು ರಕ್ಷಣೆ ಬೇಕು. ಮೊದಲು ಮಾವಿನ ಮರಗಳಿಗೆ ಯಾವುದೇ ಔಷಧಿ ಸಿಂಪಡಣೆ ಮಾಡುತ್ತಿರಲಿಲ್ಲ. ಹಾಗಾಗಿ ಜೇನ್ನೊಣಗಳು ಮರಗಳಲ್ಲಿ ನಿರ್ಭಯವಾಗಿ ವಾಸಿಸುತ್ತಿದ್ದವು. ಮಾವಿನ ಸುಗ್ಗಿ ಕಾಲದಲ್ಲಿ ಕಾಯಿ ಕೀಳುವವರು ತೆಗೆದು ಸವಿಯುತ್ತಿದ್ದರು. ಬೇಕಾದವರು ಮನೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಆದರೆ ಮಾವಿನ ಮರಗಳಿಗೆ ಹಲವು ಬಗೆಯ ರೋಗ ಹಾಗೂ ಕೀಟ ಬಾಧೆ ಒಕ್ಕರಿಸಿದ ಮೇಲೆ, ಹಲವು ಸಲ ಔಷಧಿ ಸಿಂಪಡಣೆ ಮಾಡಬೇಕಾದ ಅಗತ್ಯ ಉಂಟಾಗಿದೆ. ಇದರಿಂದ ಜೇನ್ನೊಣ ಮಾವಿನ ತೋಟದಿಂದ ದೂರ ಉಳಿದಿದೆ.

ಹೆಜ್ಜೇನಿಗೆ ಎತ್ತರವಾದ ಮರಗಳ ಕೊರತೆ ಉಂಟಾಗಿದೆ. ಸಾಮಾನ್ಯ ಎತ್ತರದ ಮರಗಳಲ್ಲಿ ಮನೆ ಮಾಡಲು ಯತ್ನಿಸುವ ಜೇನ್ನೊಣಗಳು ಜನರ ಕೆಂಗಣ್ಣಿಗೆ ಬಲಿಯಾಗುತ್ತದೆ. ಜೇನು ಹುಟ್ಟುಗಳಿಗೆ ರಾತ್ರಿ ಹೊತ್ತು ಬೆಂಕಿ ಹಚ್ಚಿ ನಾಶಪಡಿಸುತ್ತಾರೆ. ಇದರಿಂದ ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಪರಾಗ ಸ್ಪರ್ಶ ಕ್ರಿಯೆಗೆ ತೊಂದರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT