ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆ ಬಾವಿ ಬಾಡಿಗೆಗೆ ಪಡೆಯಿರಿ

ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಸೂಚನೆ
Last Updated 7 ಏಪ್ರಿಲ್ 2020, 14:11 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರಿ ಅಧಿಕಾರಿಗಳ ಮೇಲೆಯೇ ಎಲ್ಲಾ ಜವಾಬ್ದಾರಿ ಹಾಕುವ ಬದಲು ಜನಪ್ರತಿನಿಧಿಗಳು ಪರಿಸ್ಥಿತಿಯ ಗಂಭೀರತೆ ಅರಿತು ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕೆಲಸ ಮಾಡಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಕಸ ಹಾಗೂ ನೀರಿನ ಸಮಸ್ಯೆ ಸಂಬಂಧ ಇಲ್ಲಿ ಮಂಗಳವಾರ ನಡೆದ ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಮನೆಗಳಿಂದ ಕಸ ಸಂಗ್ರಹಿಸುವ ಸಂದರ್ಭದಲ್ಲೇ ಒಣ ಮತ್ತು ಹಸಿ ಕಸ, ಪ್ಲಾಸ್ಟಿಕ್, ಕಾಗದ ಪ್ರತ್ಯೇಕಿಸಬೇಕು’ ಎಂದು ಸಲಹೆ ನೀಡಿದರು.

‘ವಾರ್ಡ್‌ಗಳಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆದರೆ ನೀರು ಸಿಗುವುದು ಖಚಿತವಿಲ್ಲ. ಆದ ಕಾರಣ ಖಾಸಗಿ ಕೊಳವೆ ಬಾವಿ ಮಾಲೀಕರೊಂದಿಗೆ ಬಾಡಿಗೆ ಕರಾರು ಮಾಡಿಕೊಂಡು ನೀರು ಪಡೆಯುವುದು ಸೂಕ್ತ. ಖಾಸಗಿ ಕೊಳವೆ ಬಾವಿಗೆ ತಿಂಗಳಿಗೆ ₹ 18 ಸಾವಿರ ಬಾಡಿಗೆ ನಿಗದಿಪಡಿಸಿ. ಖಚಿತವಾಗಿ ನೀರು ಸಿಗುವ ಕಡೆ ಮಾತ್ರ ಕೊಳವೆ ಬಾವಿ ಕೊರೆಸಿ’ ಎಂದು ನಗರಸಭೆ ಆಯುಕ್ತರಿಗೆ ಸೂಚಿಸಿದರು.

‘ಅಮ್ಮೇರಹಳ್ಳಿ ಮತ್ತು ಮಡೇರಹಳ್ಳಿ ಕೆರೆಯಂಗಳದ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದರೆ ಅಲ್ಲಿನ ಪಂಪ್‌ ಮೋಟರ್‌ ಹೊರ ತೆಗೆದು ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಅಳವಡಿಸಿ. ಮಳೆಗಾಲದಲ್ಲಿ ನೀರು ಕೆರೆಗಳಿಂದ ವ್ಯರ್ಥವಾಗಿ ಹರಿದು ಹೋಗದಂತೆ ಸಂರಕ್ಷಣೆ ಮಾಡಿ’ ಎಂದು ಹೇಳಿದರು.

‘ಯರಗೋಳ್‌ ಯೋಜನೆ ಕಾಮಗಾರಿ ಮುಗಿಯುತ್ತಾ ಬಂದಿದೆ. ಡ್ಯಾಂನಲ್ಲಿ ಪ್ರಸ್ತುತ 5 ಅಡಿಯಷ್ಟು ನೀರು ಸಂಗ್ರಹವಾಗಿದೆ. ಮಳೆಗಾಲದಲ್ಲಿ ಡ್ಯಾಂ ತುಂಬುವ ನಿರೀಕ್ಷೆಯಿದ್ದು, ನೀರಿನ ಸಮಸ್ಯೆ ಬಗೆಹರಿಯಲಿದೆ. ಜಿಲ್ಲಾ ಕೇಂದ್ರದ ನೂತನ ವಾರ್ಡ್‌ಗಳು, ಮಾಲೂರು ಮತ್ತು ಬಂಗಾರಪೇಟೆ ವಾರ್ಡ್‌ಗಳಲ್ಲಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ನಡೆಯಬೇಕಿದೆ. ಈ ವಾರ್ಡ್‌ಗಳ ಪಟ್ಟಿ ಮಾಡಿ ನೀಲನಕ್ಷೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸೂಚನೆ ನೀಡಿದರು.

ಅಪ್ಪಣೆ ಬೇಕಿಲ್ಲ: ‘ಕೋಲಾರ ನಗರದ ಕಸ ವಿಲೇವಾರಿಗೆ ಅನೇಕ ಕಡೆ ಭೂಮಿ ಗುರುತಿಸಿದ್ದರೂ ಎಲ್ಲೆಡೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ. ಈ ಎಲ್ಲಾ ಭೂಮಿ ಸರ್ಕಾರದ್ದೇ ಆಗಿದೆ. ಕಸ ವಿಲೇವಾರಿ ಸ್ವಂತ ಕೆಲಸವಲ್ಲ. ಇದು ಸಾರ್ವಜನಿಕರದೇ ಭೂಸ್ವಾಧೀನಕ್ಕೆ ಯಾರ ಅಪ್ಪಣೆ ಬೇಕಿಲ್ಲ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಗುಡುಗಿದರು.

‘ನಗರದ ಮನೆಗಳಲ್ಲಿ 2 ದಿನಕ್ಕೊಮ್ಮೆ ಹಸಿ ಕಸ ಮತ್ತು 5 ದಿನಕ್ಕೊಮ್ಮೆ ಒಣ ಕಸ ಸಂಗ್ರಹಿಸಬೇಕು. ಕಸದಿಂದ ಗೊಬ್ಬರ ತಯಾರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಕಸದ ಉತ್ಪಾದನೆಯಿಂದ ಯಾರಿಗೆ ತೊಂದರೆ ಆಗುವುದಿಲ್ಲ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ’ ಎಂದು ಸ್ವಷ್ಟಪಡಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ, ನಗರಸಭೆ ಸದಸ್ಯರಾದ ಎಸ್‌.ಆರ್‌.ಮುರಳಿಗೌಡ, ರಾಘವೆಂದ್ರ, ಮಂಜುನಾಥ್, ಪ್ರವೀಣ್, ರಾಕೇಶ್, ನಾರಾಯಣಮ್ಮ, ತಹಶೀಲ್ದಾರ್‌ ಶೋಭಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT