ಪ್ರಯಾಣಿಕರ ನಂಬಿಕೆ ಗಳಿಸಿದರೆ ಗೌರವ

ಮಂಗಳವಾರ, ಮಾರ್ಚ್ 26, 2019
23 °C
ರಾಜ್ಯ ಆಟೊ ಚಾಲಕರ ಮತ್ತು ಮಾಲೀಕರ ಒಕ್ಕೂಟದ ಅಧ್ಯಕ್ಷ ಸುರೇಶ್‌ಕುಮಾರ್ ಅಭಿಪ್ರಾಯ

ಪ್ರಯಾಣಿಕರ ನಂಬಿಕೆ ಗಳಿಸಿದರೆ ಗೌರವ

Published:
Updated:
Prajavani

ಕೋಲಾರ: ‘ಆಟೊ ಚಾಲಕರು ಪ್ರಯಾಣಿಕರ ನಂಬಿಕೆ ಗಳಿಸಿದಾಗ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ’ ಎಂದು ರಾಜ್ಯ ಆಟೊ ಚಾಲಕರ ಮತ್ತು ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.

ಕಾರ್ಮಿಕ ಇಲಾಖೆಯು ವಾಣಿಜ್ಯ ವಾಹನ ಚಾಲಕರಿಗೆ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರ ಮತ್ತು ಸಾಮಾಜಿಕ ಭದ್ರತಾ ಯೋಜನೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಾಹನ ಚಾಲಕರು ಮತ್ತು ಮಾಲೀಕರು ಸಂಚಾರ ನಿಯಮಗಳು ಹಾಗೂ ಮೋಟಾರು ವಾಹನ ಕಾಯ್ದೆ ಬಗ್ಗೆ ತಿಳಿಯಲೇಬೇಕು. ಜತೆಗೆ ವಿಮೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮಾಲೀಕರಿಗೆ ತೊಂದರೆಯಾಗುತ್ತದೆ’ ಎಂದು ಎಚ್ಚರಿಸಿದರು.

‘ದಿನೇ ದಿನೇ ಅಪಘಾತ ಪ್ರಮಾಣ ಹೆಚ್ಚುತ್ತಿದ್ದು, ಅಪಘಾತ ಸಂಭವಿಸಿದ ಸ್ಥಳದಿಂದ ಆಸ್ಪತ್ರೆಗೆ ತೆರಳಬೇಕಾದರೆ ಕನಿಷ್ಠ 30ರಿಂದ 45 ನಿಮಿಷವಾಗುತ್ತಿದೆ. ಚಿಕಿತ್ಸೆ ಸಿಗುವುದು ವಿಳಂಬವಾಗುತ್ತಿರುವುದರಿಂದ ಸಾವು ನೋವು ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆಟೊ, ಟ್ಯಾಕ್ಸಿ, ಕ್ಯಾಬ್, ಲಾರಿ, ಬಸ್, ವಾಣಿಜ್ಯ ವಾಹನ ಚಾಲಕರಿಗೆ ಪ್ರಥಮ ಚಿಕಿತ್ಸೆ ತರಬೇತಿಯು ಅಗತ್ಯವಾಗಿದೆ’ ಎಂದು ಕಿವಿಮಾತು ಹೇಳಿದರು.

‘ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ 500 ಮಂದಿಗೆ ತರಬೇತಿಯನ್ನು ನೀಡಿ ಉಚಿತವಾಗಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕೊಡಲಾಗುತ್ತಿದೆ. ತರಬೇತಿ ಪಡೆದ ಪ್ರತಿಯೊಬ್ಬರೂ ಸಕಾಲದಲ್ಲಿ ಅದನ್ನು ಉಪಯೋಗಿಸಬೇಕು’ ಎಂದು ಸಲಹೆ ನೀಡಿದರು.

ವಿಶೇಷ ಸ್ಥಾನಮಾನ: ‘ಚಾಲಕರು ಮೊದಲು ಆರೋಗ್ಯದ ಕಡೆ ಗಮನ ಹರಿಸಬೇಕು. ಇದರಿಂದ ಅಪಘಾತ ಪ್ರಮಾಣ ತಗ್ಗಿಸಬಹುದು’ ಎಂದು ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಗೋಪಾಲಕೃಷ್ಣೇಗೌಡ ಅಭಿಪ್ರಾಯಪಟ್ಟರು.

‘ಕಾರ್ಮಿಕರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಅನೇಕ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳ ಅರಿವೇ ಇಲ್ಲ. ಪ್ರತಿ ಕಾರ್ಮಿಕರು ಸರ್ಕಾರದ ಯೋಜನೆಗಳ ಮಾಹಿತಿ ಪಡೆದು ಸವಲತ್ತು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಅತಿ ವೇಗದ ಚಾಲನೆ ಮತ್ತು ಅಜಾಗರೂಕ ಚಾಲನೆಯಿಂದ ಅಪಘಾತ ಪ್ರಮಾಣ ಹೆಚ್ಚುತ್ತಿದೆ. ಚಾಲಕರು ತಮ್ಮ ಸಂಸಾರದ ಹಿತ ಮನಸ್ಸಿನಲ್ಲಿಟ್ಟುಕೊಂಡು ಚಾಲನೆ ಮಾಡುವುದರಿಂದ ಅಪಘಾತ ಪ್ರಮಾಣ ಕಡಿಮೆ ಮಾಡಬಹುದು’ ಎಂದು ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಉಪಾಧ್ಯಕ್ಷ ಆರ್.ಶ್ರೀನಿವಾಸನ್ ಹೇಳಿದರು.

ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯ ಡಾ.ರಾಘವೇಂದ್ರ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ವಾಹನ ಚಾಲನಾ ತರಬೇತಿ ಶಾಲೆ ಮಾಲೀಕರ ಸಂಘದ ಅಧ್ಯಕ್ಷ ಗೋಪಾಲ್, ಕಾರ್ಮಿಕ ಅಧಿಕಾರಿ ವಿಜಯ್‌ಕುಮಾರ್, ರಾಜ್ಯ ಸರಕು ಮಾರಾಟ ಮತ್ತು ಖರೀದಿದಾರರ ಸಹಕಾರ ಸಂಘದ ನಿರ್ದೇಶಕ ವಿ.ಮುನಿರಾಜು, ಅಡುಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜಗೌಡ, ರಾಜ್ಯ ಆಟೊ ಚಾಲಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ರೆಡ್‌ಕ್ರಾಸ್‌ ಸಂಸ್ಥೆ ಪದಾಧಿಕಾರಿಗಳಾದ ನಾಗಶೇಖರ್, ಸೋಮಶೇಖರ್‌ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !