ಶುಕ್ರವಾರ, ಅಕ್ಟೋಬರ್ 23, 2020
27 °C
ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಹೇಳಿಕೆ

ಶಿಕ್ಷಣ ಸೇವೆ ವಿಸ್ತರಿಸುವ ಆಶಯ: ಕೆ.ಎಂ.ಸುರೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕಳೆದ 2 ದಶಕದಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಾನು ವಿಧಾನ ಪರಿಷತ್‌ಗೆ ಆಯ್ಕೆಯಾದರೆ ಶಿಕ್ಷಣ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಆಶಯ ಹೊಂದಿದ್ದೇನೆ’ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೆ.ಎಂ.ಸುರೇಶ್ ತಿಳಿಸಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿಧಾನ ಪರಿಷತ್ ಚುನಾವಣೆ ಪಕ್ಷ ರಹಿತವಾದುದು. ಆದರೂ ಚುನಾವಣೆ ಬೇರೆ ರೀತಿಯಲ್ಲೇ ನಡೆಯುತ್ತದೆ. ವಿವಿಧ ಪಕ್ಷಗಳಿಂದ ಆಹ್ವಾನ ಬಂದಿದ್ದರೂ ನಾನು ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳಲಿಲ್ಲ’ ಎಂದು ಹೇಳಿದರು.

‘ವ್ಯಕ್ತಿ ಹಾಗೂ ಪಕ್ಷಕ್ಕಿಂತ ರಾಷ್ಟ್ರ ಮುಖ್ಯ ಎಂಬ ಧ್ಯೇಯದಲ್ಲಿ ನಂಬಿಕೆ ಇಟ್ಟಿರುವ ಎಲ್ಲಾ ಪ್ರಜ್ಞಾವಂತ ಮತದಾರರು ಚುನಾವಣೆಯಲ್ಲಿ ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು. ಮತದಾರರು ನನ್ನನ್ನು ಗೆಲ್ಲಿಸಿದರೆ ಕ್ಷೇತ್ರದ ವ್ಯಾಪ್ತಿಯ 5 ಜಿಲ್ಲೆಗಳಲ್ಲೂ ಸ್ಪರ್ಧಾ ಭವನ ನಿರ್ಮಿಸಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಹಾಗೂ ಕೌಶಲಾಭಿವೃದ್ಧಿ ತರಬೇತಿ ಶಿಬಿರ ನಡೆಸುತ್ತೇನೆ. ಪ್ರತಿಭಾವಂತ ಪದವೀಧರರು ಸ್ವಉದ್ಯೋಗಿಗಳಾಗಿ ಮಾಡುವ ಗುರಿ ಹೊಂದಿದ್ದೇನೆ’ ಎಂದು ಭರವಸೆ ನೀಡಿದರು.

‘ಪದವೀಧರರ ಸಮಸ್ಯೆಗೆ ಸದನದ ಒಳಗೆ ಹಾಗೂ ಹೊರಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಯಾದರೆ ಮಾತ್ರ ಸಾಧ್ಯ ಎಂಬುದನ್ನು ಮನಗಂಡು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮಾದರಿ ಕ್ಷೇತ್ರವಾಗಿಸುವ ಕನಸು ಹೊಂದಿದ್ದೇನೆ’ ಎಂದು ವಿವರಿಸಿದರು.

2 ಲಕ್ಷ ಹುದ್ದೆ ಖಾಲಿ: ‘ರಾಜ್ಯದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿವೆ. ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮ ತಡೆ, ನೇಮಕಾತಿ ವಿಳಂಬ, ವಯೋಮಿತಿ ಕಳೆದುಕೊಳ್ಳುತ್ತಿರುವ ಪದವೀಧರರನ್ನು ಗಮನದಲ್ಲಿಟ್ಟುಕೊಂಡು ಖಾಲಿ ಹುದ್ದೆಗಳ ನೇಮಕಾತಿಗೆ ಒತ್ತಡ ಹೇರುವುದು, ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವಂತೆ ಮಾಡುವುದು ಮುಖ್ಯ ಗುರಿಗಳಾಗಿವೆ’ ಎಂದರು.

‘ಸ್ಪರ್ಧಾತ್ಮಕ ಪರೀಕ್ಷೆಗಳ ಸಂಬಂಧ 14 ವರ್ಷಗಳಿಂದ ಸ್ಪರ್ಧಾ ವಿಜೇತ ಮಾಸಪತ್ರಿಕೆ ಪ್ರಕಟಿಸುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉಚಿತ ತರಬೇತಿ ಕಾರ್ಯಾಗಾರ ನಡೆಸುತ್ತಿದ್ದೇವೆ. 40 ಸಾವಿರಕ್ಕೂ ಹೆಚ್ಚು ಮತದಾರರನ್ನು ನೋಂದಣಿ ಮಾಡಿಸಿದ್ದೇನೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದಾರೆ. ಮತದಾರರು ನನ್ನನ್ನು ಬೆಂಬಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪನ್ಯಾಸಕರಾದ ಮನೋಜ್, ಶ್ರೀಕಂಠ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು