ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಬೆಲೆ ರಸ್ತೆ ಸಂಚಾರ; ಪ್ರಾಣಕ್ಕೆ ಸಂಚಕಾರ

ಕಾಮಗಾರಿಗೆ ಬಿಡುಗಡೆಯಾದ ಅನುದಾನ ತಡೆಹಿಡಿದ ರಾಜ್ಯ ಸರ್ಕಾರ: ನಾಗರಿಕರ ಆಕ್ರೋಶ
Last Updated 30 ಮೇ 2022, 4:45 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣ ಹೊರ ವಲಯದ ಹುಣಸನಹಳ್ಳಿ ರೈಲ್ವೆ ಗೇಟ್‌ನಿಂದ ಹುಲಿಬೆಲೆ, ಅಬ್ಬಿಗಿರಿ ಹೊಸಹಳ್ಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ಮಾರ್ಗದ ಕಣಿವೇಕಲ್ಲು ಗ್ರಾಮದಿಂದ ಅಬ್ಬಿಗಿರಿ ಹೊಸಹಳ್ಳಿವರೆಗಿನ 4 ಕಿ.ಮೀ. ರಸ್ತೆಗೆ ಜಲ್ಲಿ ಕಲ್ಲು ಸುರಿದು ಹಾಗೆಯೇ ಬಿಡಲಾಗಿದೆ. ಹಾಗಾಗಿ, ಐದಾರು ತಿಂಗಳಿಂದ ಇಲ್ಲಿನ ರಸ್ತೆ ಸಂಚಾರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ.

ರಸ್ತೆಗೆ ಚೂಪಾದ ಜಲ್ಲಿ ಕಲ್ಲು ಹರಡಿದ್ದ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಸಾಧಿಸ ಲಾಗದೆ ನಿತ್ಯ ಅಪಘಾತಗಳು ಸಂಭವಿ ಸುತ್ತಿವೆ. ಜೀವವನ್ನು ಅಂಗೈಯಲ್ಲಿ ಇಟ್ಟು ಕೊಂಡು ಚಲಿಸುವ ಅನಿವಾರ್ಯ ಸ್ಥಿತಿ ತಲೆದೋರಿದೆ.‌

ದಿನಕ್ಕೆ ಎರಡ್ಮೂರು ದ್ವಿಚಕ್ರ ವಾಹನದ ಟೈರ್‌ಗಳು ಸೀಳುವುದು, ಪಂಕ್ಚರ್ ಆಗುವುದು ತಪ್ಪತ್ತಿಲ್ಲ. ಪಟ್ಟಣದಿಂದ ಮಾಸ್ತಿವರೆಗೆ ಸುಮಾರು 25 ಕಿ.ಮೀ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಾತ್ರ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತವೆ. ಉಳಿದ ವೇಳೆಯಲ್ಲಿ ಪಟ್ಟಣಕ್ಕೆ ಸಂಚರಿಸ ಬೇಕಾದರೆ ಆಟೊಗಳೇ ಗತಿ.

ಬಸ್‌ನಲ್ಲಿ ₹ 5 ದರ ನಿಗದಿಪಡಿಸಿದ್ದರೆ ಆಟೊಗೆ ನಾಲ್ಕು ಪಟ್ಟು ಅಂದರೆ ₹ 20 ಕೊಡುವುದು ಅನಿವಾರ್ಯ. ಅಷ್ಟು ಕೊಟ್ಟರೂ ಸುರಕ್ಷತೆಯಿಂದ ಸಂಚರಿಸುವ ಖಾತರಿ ಇಲ್ಲ. ಎಲ್ಲಿ ಮುಗುಚಿ ಬೀಳುವುದೋ ಎನ್ನುವ ಆತಂಕದಲ್ಲಿ ನಿತ್ಯ ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ನನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿ ಸುವಂತೆ ಒತ್ತಾಯಿಸಿ ನಾಲ್ಕು ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಅಗತ್ಯ ಕ್ರಮಕೈಗೊಳ್ಳುವಂತೆ ಸಂಸದರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೂ ಆಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಗ್ರಾಮಸ್ಥರ ದೂರು.

ರಾತ್ರಿವೇಳೆ ರಸ್ತೆಯಲ್ಲಿ ಸಂಚರಿಸಲು ಆಗದ ಸ್ಥಿತಿ ಒದಗಿದೆ. ರಸ್ತೆ ಅಂಚಿಗೆ ಚಲಿಸಿದರೆ ಕೆಳಗೆ ಬೀಳುವುದು ನಿಶ್ಚಿತ. ಅಲ್ಲದೇ, ಆರು ತಿಂಗಳಿಂದ ಜಲ್ಲಿ ಕಲ್ಲು ಹಾಕಿ ಹಾಗೆಯೇ ಬಿಟ್ಟಿರುವುದರಿಂದ ವಾಹನಗಳು ಸಂಚರಿಸಿ ರಸ್ತೆಯಲ್ಲಾ ದೂಳುಮಯವಾಗಿದೆ.

ಹುಲಿಬೆಲೆ ಅಬ್ಬಿಗಿರಿ ಹೊಸಹಳ್ಳಿ, ಚಿಕ್ಕಹೊಸಹಳ್ಳಿ ಮಧ್ಯೆ ರಸ್ತೆ ಹಾದು ಹೋಗಿದ್ದು, ರಸ್ತೆ ಅಂಚಿನ ಮನೆಗಳಿಗೆ ನಿತ್ಯ ದೂಳು ಆವರಿಸುತ್ತಿದೆ. ಆಸ್ತಮಾ, ಉಸಿರಾಟ ಸಮಸ್ಯೆ ಇರುವವರು ದೂಳಿಗೆ ಸಿಲುಕಿ ಸಮಸ್ಯೆಯಿಂದ ನರಳುವಂತಾಗಿದೆ.

ಪಟ್ಟಣದಿಂದ ಹುಲಿಬೆಲೆ ಮಾರ್ಗವಾಗಿ ನೂಟವೆವರೆಗೂ ರಸ್ತೆ ಕಾಮಗಾರಿಗೆ 2017ರಲ್ಲೇ ಟೆಂಡರ್ ಆಗಿದೆ. ಬಿಜೆಪಿ ಸರ್ಕಾರ ಅನುದಾನ ತಡೆಹಿಡಿದ ಕಾರಣ ಗುತ್ತಿಗೆದಾರರು ಕಾಮಗಾರಿ ನಡೆಸಲು ಕಾಳಜಿವಹಿಸಿಲ್ಲ ಎನ್ನುವುದು ಶಾಸಕರ ಆರೋಪ.

ಹುಲಿಬೆಲೆ ಗ್ರಾಮದಿಂದ ತಿಮ್ಮರಾಯ ಸ್ವಾಮಿ ದೇಗುಲ ಹಾಗೂ ತುಮುಟಗೆರೆಗೆ ತೆರಳುವ ರಸ್ತೆ ಮಾರ್ಗದಲ್ಲಿ ಗ್ರಾಮದ ಕೆಲವರು ಹಳ್ಳ ತೋಡಿ ಸಂಚಾರಕ್ಕೆ ಅಡಚಣೆ ಮಾಡಿದ್ದಾರೆ. ಅಲ್ಲದೆ ದನ, ಕರುಗಳನ್ನು ರಸ್ತೆಯಲ್ಲಿ ಕಟ್ಟಿ ತೊಂದರೆ ಕೊಡುತ್ತಿದ್ದಾರೆ. ಕ್ರಮಕೈಗೊಳ್ಳುವಂತೆ ಪಿಡಿಒ ಅವರಿಗೆ ಮನವಿ ಸಲ್ಲಿಸಿದೆ. ಆದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಗ್ರಾಮದ ನಿಶಾಂತ್‌ಕುಮಾರ್ ಅವರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT