ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ವೃತ್ತಿಯಲ್ಲಿ ಮಾನವೀಯತೆ ಮುಖ್ಯ

ನಿಮ್ಹಾನ್ಸ್‌ ವಿಶ್ರಾಂತ ಉಪ ಕುಲಪತಿ ಸತೀಶ್‌ಚಂದ್ರ ಅಭಿಪ್ರಾಯ
Last Updated 15 ಆಗಸ್ಟ್ 2019, 13:25 IST
ಅಕ್ಷರ ಗಾತ್ರ

ಕೋಲಾರ: ‘ಹಣಕ್ಕಿಂತ ಜೀವ ದೊಡ್ಡದು. ವೈದ್ಯರು ಈ ಸಂಗತಿ ಅರಿತು ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ, ಬದ್ಧತೆ ತೋರಿದಾಗ ಮಾತ್ರ ಸಮಾಜದಲ್ಲಿ ಗೌರವ ಗಳಿಸಲು ಸಾಧ್ಯ’ ಎಂದು ನಿಮ್ಹಾನ್ಸ್‌ ವಿಶ್ರಾಂತ ಉಪ ಕುಲಪತಿ ಡಾ.ಪಿ.ಸತೀಶ್‌ಚಂದ್ರ ಅಭಿಪ್ರಾಯಪಟ್ಟರು.

ಇಲ್ಲಿ ಗುರುವಾರ ನಡೆದ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ತುರ್ತು ವೈದ್ಯಕೀಯ ಸೇವೆ, ವಾಕ್ ಶ್ರವಣ ಹಾಗೂ ಅಡ್ವಾನ್ಸ್ ರೀಸರ್ಚ್ ಅಂಡ್ ಎಕ್ಸೆಲೆನ್ಸ್ ವಿಭಾಗಗಳ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ದೇಶದಲ್ಲಿ ವೈದ್ಯಕೀಯ ಕ್ಷೇತ್ರವು ಹಣ ಮಾಡುವ ದಂಧೆಯಾಗಿದೆ. ವೈದ್ಯರಿಗೆ ಸೇವಾ ಮನೋಭಾವ ಇಲ್ಲವಾಗಿದೆ. ವಿದ್ಯಾರ್ಥಿಗಳು ದೇಶದಲ್ಲಿ ವೈದ್ಯಕೀಯ ಪದವಿ ಪಡೆದು ಹಣ ಸಂಪಾದನೆಗಾಗಿ ವಿದೇಶಕ್ಕೆ ಹೋಗುತ್ತಿರುವುದು ವಿಷಾದಕರ’ ಎಂದು ಕಳವಳ ವ್ಯಕ್ತಪಡಿಸಿದರು.

‘ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ನಡೆಯದಿದ್ದರೆ ಗುರಿ ಸಾಧನೆ ಅಸಾಧ್ಯ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬರುವವರಿಗೆ ಉತ್ತಮ ಸೇವೆ ನೀಡಲು ವೈದ್ಯರು ವಿದ್ಯಾರ್ಥಿ ದಿಸೆಯಲ್ಲೇ ಸಂಶೋಧನೆ ಜತೆಗೆ ಕೌಶಲ ತರಬೇತಿ ಪಡೆಯಬೇಕು. ವೈದ್ಯಕೀಯ ವೃತ್ತಿಯಲ್ಲಿ ಹಣ ಸಂಪಾದನೆಗಿಂತ ಮಾನವೀಯತೆ ಮುಖ್ಯ’ ಎಂದು ಕಿವಿಮಾತು ಹೇಳಿದರು.

‘ಯಾವ ವಿಚಾರದ ಬಗ್ಗೆ ಸಂಶೋಧನೆ ಮಾಡಲಾಗುತ್ತಿದೆ, ಅದರಿಂದ ಸಮಾಜಕ್ಕೆ ಏನು ಉಪಯೋಗ ಎಂಬುದನ್ನು ಅರಿಯುವುದು ಮುಖ್ಯ. ಮೊದಲಿನಿಂದಲೂ ಉನ್ನತ ಸಂಶೋಧನೆ, ಆವಿಷ್ಕಾರ ನಡೆಯುತ್ತಿವೆ. ಆದರಲ್ಲಿ ಕೆಲವಷ್ಟೇ ಫಲಿತಾಂಶ ಪಡೆದುಕೊಳ್ಳುತ್ತಿವೆ’ ಎಂದು ತಿಳಿಸಿದರು.

‘ರೋಗಿ ಹಾಗೂ ವೈದ್ಯರ ಸಂಬಂಧ ಪ್ರಮುಖವಾದದು. ರೋಗಿಗಳಿಗೆ ವಿಶ್ವಾಸದಿಂದ ಚಿಕಿತ್ಸೆ ನೀಡಿದರೆ ಶೇ 100ರಷ್ಟು ಗುಣಮುಖರಾಗುತ್ತಾರೆ. ಪದವಿ ಪಡೆದ ಮಾತ್ರಕ್ಕೆ ವೈದ್ಯ ಎನಿಸಿಕೊಳ್ಳಲು ಆಗುವುದಿಲ್ಲ. ಪ್ರಾಮಾಣಿಕವಾಗಿ ಬಡವರಿಗೆ ಆರೋಗ್ಯ ಸೇವೆ ನೀಡಿದರೆ ಪದವಿಗೆ ಅರ್ಥ ಬರುತ್ತದೆ’ ಎಂದರು.

ಪ್ರತಿನಿತ್ಯ ಅಪಘಾತ: ‘ದೇಶದಲ್ಲಿ ಪ್ರತಿನಿತ್ಯ ಸಾಕಷ್ಟು ಅಪಘಾತ ಸಂಭವಿಸುತ್ತಿದ್ದು, ಈ ಪೈಕಿ 6 ಲಕ್ಷ ಮಂದಿ ತೀವ್ರವಾಗಿ ಗಾಯಗೊಂಡು ಅಂಗಾಂಗ ಕಳೆದುಕೊಳ್ಳುತ್ತಿದ್ದಾರೆ. ತುರ್ತು ಚಿಕಿತ್ಸೆ ಸಿಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ’ ಎಂದು ಅಪೋಲೋ ಆಸ್ಪತ್ರೆ ತುರ್ತು ವೈದ್ಯ ವಿಭಾಗದ ಮುಖ್ಯಸ್ಥೆ ಡಾ.ಸಿ.ಅರುಣಾ ವಿವರಿಸಿದರು.

‘ಅಪಘಾತ ಆಕಸ್ಮಿಕವಾಗಿ ನಡೆಯುತ್ತವೆ. ದೇಶದಲ್ಲಿ ಪ್ರತಿ ನಿಮಿಷಕ್ಕೆ 4 ಮಂದಿ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತಂತ್ರಜ್ಞಾನ ಬಳಕೆ ಮಾಡಿ ಹೊಸ ಆವಿಷ್ಕಾರ, ಸಂಶೋಧನೆಗೆ ಅನುವು ಮಾಡಿಕೊಡಲಾಗುತ್ತಿದೆ. ವೈದ್ಯಕೀಯ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನ ಅರಿಯಬೇಕು’ ಎಂದು ಸಲಹೆ ನೀಡಿದರು.

ದೇವರಾಜ ಅರಸು ವಿದ್ಯಾ ಸಂಸ್ಥೆ ಅಧ್ಯಕ್ಷ ಆರ್‌.ಎಲ್‌.ಜಾಲಪ್ಪ, ನಿರ್ದೇಶಕ ಜೆ.ರಾಜೇಂದ್ರ, ಕುಲಪತಿ ಡಾ.ಎಸ್.ಕುಮಾರ್, ಕುಲಸಚಿವ ಡಾ.ಕೆ.ಎನ್.ವಿ.ಪ್ರಸಾದ್, ನಿವೃತ್ತ ಕುಲಪತಿಗಳಾದ ಡಾ.ಎ.ವಿ.ಎಂ.ಕುಟ್ಟಿ, ಡಾ.ಸಿ.ಕೆ.ರಂಜನ್, ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಲಕ್ಷ್ಮಯ್ಯ, ಡೀನ್ ಡಾ.ಶ್ರೀರಾಮುಲು, ವೈದ್ಯ ಡಾ.ಕೆ.ರಾಜೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT