ಗುರುವಾರ , ಸೆಪ್ಟೆಂಬರ್ 23, 2021
20 °C
ಬ್ರಿಟಿಷರ ಕಾಲದಿಂದ ಇರುವ ತಂಗುದಾಣ ನಗರದ ಎರಡನೇ ಡೇರಿ ಎಂದೇ ಪ್ರಸಿದ್ಧ

ಕೆಜಿಎಫ್: ನೆಲಕಚ್ಚಿದ ಕೌ ಬೌಂಡ್‌; ಬೀದಿಪಾಲಾದ ಹಸುಗಳು

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ನೂರಾರು ಹಸುಗಳಿಗೆ ಆಶ್ರಯತಾಣವಾಗಿದ್ದ ನಗರದ ಎಸ್‌ಟಿ ಬ್ಲಾಕ್‌ನಲ್ಲಿದ್ದ ಕೌ ಬೌಂಡ್ ನೆಲಕಚ್ಚಿದ ಪರಿಣಾಮವಾಗಿ ನೂರಾರು ಹಸುಗಳು ಬೀದಿಗೆ ಬಿದ್ದಿವೆ.

ಬ್ರಿಟಿಷರ ಕಾಲದ ಇರುವ ಈ ತಂಗುದಾಣ ನಗರದ ಎರಡನೇ ಡೇರಿ ಎಂದೇ ಪ್ರಸಿದ್ಧವಾಗಿತ್ತು. ಆಗಿನ ಕಾಲಕ್ಕೇ ಆಧುನಿಕ ಯಂತ್ರಗಳಿಂದ ಸುಸಜ್ಜಿತವಾಗಿದ್ದ ಮತ್ತೊಂದು ಡೇರಿ ಈಗಿನ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿತ್ತು. ನಗರದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಬೀಡಾಡಿ ಹಸುಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತಿತ್ತು.

ದಾರಿ ತಪ್ಪಿ ಹೋಗುವ ಹಸುಗಳನ್ನು ಕೂಡ ಇಲ್ಲಿಗೆ ತಂದು ಬಿಡಲಾಗುತ್ತಿತ್ತು. ನಂತರ ಹಸು ತಪ್ಪಿಸಿಕೊಂಡ ಮಾಲೀಕರು ಈ ತಂಗುದಾಣಕ್ಕೆ ಬಂದು ಹಸುಗಳನ್ನು ಪತ್ತೆ ಹಚ್ಚುತ್ತಿದ್ದರು. ಹಸುಗಳು ಇದ್ದಷ್ಟು ದಿನಗಳ ಶುಲ್ಕ ವಸೂಲಿ ಮಾಡಿದ ನಂತರ ಹಸುವನ್ನು ಮಾಲೀಕರ ಸುಪರ್ದಿಗೆ ಕೊಡಲಾಗುತ್ತಿತ್ತು. ಸ್ಥಳೀಯವಾಗಿ ಈ ಜಾಗವನ್ನು ಕೌ ಬೌಂಡ್ ಎಂದು ಕರೆಯಲಾಗುತ್ತಿತ್ತು.

ಗೋಪಾಲಕರಿಗೆ ಪ್ರಿಯವಾಗಿದ್ದ ಈ ಪ್ರದೇಶವನ್ನು ಹಸುಗಳ ಆರೈಕೆಗೆ ಉತ್ತಮ ರೀತಿಯಲ್ಲಿ ರಕ್ಷಣೆ ಮಾಡಲಾಗಿತ್ತು. ಸುತ್ತಲೂ ಕಾಂಪೌಂಡ್, ಇಂಗ್ಲೀಷ್ ಯ ಅಕ್ಷರ ಮಾದರಿಯಲ್ಲಿ ಕಟ್ಟಡ ಮತ್ತು ಅದರ ಮಧ್ಯದಲ್ಲೊಂದು ತಂಗುದಾಣವನ್ನು ನಿರ್ಮಿಸಲಾಗಿತ್ತು. ಮಳೆ ಮತ್ತು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಕಬ್ಬಿಣದ ಶೀಟ್‌ಗಳನ್ನು ಅಳವಡಿಸಲಾಗಿತ್ತು. ಇಡೀ ಪ್ರದೇಶದ ನೆಲವನ್ನು ಸಿಮೆಂಟ್‌ನಿಂದ ನಿರ್ಮಾಣ ಮಾಡಲಾಗಿತ್ತು. ಅದರಲ್ಲಿ ಮಧ್ಯದಲ್ಲಿ ಹಸುಗಳ ಮೂತ್ರ ಮತ್ತು ಗಂಜಲಗಳು ಹರಿದುಹೋಗಲು ಕೂಡ ವ್ಯವಸ್ಥೆ ಮಾಡಲಾಗಿತ್ತು.

ಎಸ್‌ಟಿ ಬ್ಲಾಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬಿಜಿಎಂಎಲ್ ಕಾರ್ಮಿಕರ ಕುಟುಂಬಗಳು ಹಸು ಸಾಕಾಣಿಕೆಯನ್ನು ಉಪ ವೃತ್ತಿಯನ್ನಾಗಿ ಮಾಡಿಕೊಂಡಿದ್ದವು. ಗಂಡಸರು ಕೆಲಸಕ್ಕೆ ಹೋದರೆ, ಮಹಿಳೆಯರು ಹಸುಗಳ ಆರೈಕೆಯಲ್ಲಿ ತೊಡಗುತ್ತಿದ್ದರು. ಬಿಜಿಎಂಎಲ್ ವಸತಿ ಗೃಹಗಳು ಕಿರಿದಾಗಿದ್ದರಿಂದ ಹಸುಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಸ್ಥೆ ಹಸುಗಳ ತಂಗುದಾಣವನ್ನು ನಿರ್ಮಿಸಿಕೊಟ್ಟಿತ್ತು.

ತಂಗುದಾಣದಲ್ಲಿ ಸದಾ ಭದ್ರತಾ ಸಿಬ್ಬಂದಿ ಇರುತ್ತಿದ್ದರು. ಹಸುಗಳು ನೀರು ಕುಡಿಯಲು ಗೇಟಿನ ಮುಂಭಾಗದಲ್ಲಿ ಸಿಮೆಂಟ್ ತೊಟ್ಟಿ ಇರಿಸಲಾಗಿತ್ತು. ಅದು ಈಗ ಶಿಥಿಲವಾಗಿದೆ. ಬೌಂಡ್‌ನಲ್ಲಿರುವ ಹಸುಗಳಿಂದ ಹಾಲು ಕರೆದ ನಂತರ, ಅಲ್ಲಿಯೇ ಹಾಲನ್ನು ಮಾರಾಟ ಮಾಡಲಾಗುತ್ತಿತ್ತು. ಅದಕ್ಕೆ ಒಂದು ಕಿಟಕಿಯನ್ನು ನಿರ್ಮಾಣ ಮಾಡಿದ್ದು, ಅಗತ್ಯವುಳ್ಳವರು ಹಾಲನ್ನು ಕಿಂಡಿಯಿಂದ ಹಣಕೊಟ್ಟು ಪಡೆದುಕೊಳ್ಳುತ್ತಿದ್ದರು ಎಂದು ಸ್ಥಳೀಯ ನಿವಾಸಿಗಳು ಅದರ ಇತಿಹಾಸವನ್ನು ಹೇಳುತ್ತಾರೆ.

ಈಚೆಗೆ ಬಿದ್ದ ಮಳೆಯಿಂದಾಗಿ ತಂಗುದಾಣದ ಬಹುಪಾಲು ಪ್ರದೇಶ ನೆಲಕಚ್ಚಿದೆ. ಇತ್ತೀಚಿನ ವರ್ಷಗಳಲ್ಲಿ ಶಿಥಿಲವಾಗಿ ಅಲ್ಲಲ್ಲಿ ಗೋಡೆಗಳು ಕುಸಿದುಬಿದ್ದರೂ, ಹಸುಗಳನ್ನು ಕಟ್ಟಲು ತೀರಾ ತೊಂದರೆಯಾಗುತ್ತಿರಲಿಲ್ಲ. ಆದರೆ ಈಗ ಒಂದು ಬದಿ ಬಿಟ್ಟಿರೆ ಉಳಿದೆಲ್ಲಾ ಗೋಡೆಗಳು ಮತ್ತು ಚಾವಣಿ ಕುಸಿದುಬಿದ್ದಿದೆ. ತಾತ್ಕಾಲಿಕವಾಗಿ ಒಂದೆಡೆ ಕಬ್ಬಿಣದ ಶೀಟ್‌ಗಳನ್ನು ಅಳವಡಿಸಿ ಹಸುಗಳು ಹೊರಗೆ ಹೋಗದಂತೆ ತಡೆಯುವ ತಾತ್ಕಾಲಿಕ ಪ್ರಯತ್ನ ಮಾಡಲಾಗಿದೆ.

ಈಗ ಎಸ್‌ಟಿ ಬ್ಲಾಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಹಸುಗಳಿವೆ. ಅವುಗಳ ಆರೈಕೆಯನ್ನು ಮಾಡಲು ನಿವಾಸಿಗಳಿಗೆ ಸಾಧ್ಯವಾಗುತ್ತಿಲ್ಲ. ಹಸುಗಳಿಗೆ ಕುಡಿಯಲು ನೀರಿನ ಸೌಕರ್ಯವಿಲ್ಲ. ಮಳೆ, ಬಿಸಿಲು ಗಾಳಿಯಿಂದ ತಪ್ಪಿಸಿಕೊಳ್ಳಲು ಆಶ್ರಯ ಇಲ್ಲ. ಬೀದಿಯಲ್ಲಿ ಹಸುಗಳನ್ನು ಬಿಟ್ಟರೆ ಕಳ್ಳತನವಾಗುತ್ತದೆ. ಸಾವಿರಾರು ರೂಪಾಯಿ ಮೌಲ್ಯದ ಹಸುಗಳನ್ನು ಜೋಪಾನವಾಗಿಟ್ಟುಕೊಳ್ಳುವುದೇ ನಿವಾಸಿಗಳಿಗೆ ತಲೆನೋವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.