‘ದುಡ್ಡಿನ ಗುಟ್ಟು ರಟ್ಟು ಮಾಡುತ್ತೇನೆ’

ಕೋಲಾರ: ‘ಮಾಲೂರು ತಾಲ್ಲೂಕಿನ ಗ್ರಾ.ಪಂಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 300ಕ್ಕೂ ಹೆಚ್ಚು ಕಡೆ ಗೆದ್ದಿದ್ದಾರೆ. ಕಾಂಗ್ರೆಸ್ಗೆ ನ್ಯಾಯಯುತವಾಗಿ 3 ಪಂಚಾಯಿತಿಗಳಲ್ಲಷ್ಟೇ ಬಹುಮತ ಬಂದಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗ್ಯವಾಡಿದರು.
ಇಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ಯಾರಿಗೋ ಹುಟ್ಟಿದ ಮಗುವನ್ನು ತನ್ನ ಮಗುವೆಂದು ಹೇಳುವುದು ಬೇಡ. ಅವರು ಮೊದಲು ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲಿ’ ಎಂದು ಕಾಂಗ್ರೆಸ್ ಶಾಸಕ ನಂಜೇಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ನವರು 6 ದಶಕದಿಂದ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಇಂದಿರಾ ಗಾಂಧಿಯವರು ಚುನಾವಣೆ ಸಂದರ್ಭದಲ್ಲಿ ಗೊಣ್ಣೆ ಸುರಿಸುವ ಮಗುವನ್ನು ಎತ್ತಿಕೊಂಡು ಮುತ್ತು ಕೊಡುತ್ತಿದ್ದುದನ್ನು ನೋಡಿದ್ದೇವೆ. ಅದೇ ರೀತಿ ಇವರೂ ಯಾರಿಗೋ ಹುಟ್ಟಿದ ಮಗುವನ್ನು ನಮ್ಮದೇ ಎಂದು ಎತ್ತಿಕೊಳ್ಳಲು ಹೊರಟಿದ್ದಾರೆ’ ಎಂದು ಲೇವಡಿ ಮಾಡಿದರು.
‘ಪುರಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ ಕುದುರಿಸಿದಂತೆ ಗ್ರಾ.ಪಂ ಸದಸ್ಯರನ್ನೂ ರೆಸಾರ್ಟ್ಗೆ ಕರೆದೊಯ್ದು ಒಂದು ತಿಂಗಳು ಸಾಕಬೇಕೆಂಬ ಲೆಕ್ಕಾಚಾರದಲ್ಲಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಮಾಡಿರುವ ಹಣ ಜಾಸ್ತಿ ಇರಬಹುದು, ಸಾಕಿಕೊಳ್ಳಲಿ. ಆ ರೀತಿಯಾದರೂ ಅನ್ಯಾಯದ ದುಡ್ಡು ಬಡವರಿಗೆ ಪೋಲಾಗಲಿ ಎಂದು ಸುಮ್ಮನಿದ್ದೇವೆ. ಸಮಯ ಬಂದಾಗ ದುಡ್ಡಿನ ಗುಟ್ಟು ರಟ್ಟು ಮಾಡುತ್ತೇನೆ’ ಎಂದು ಕುಟುಕಿದರು.
ಲೆಕ್ಕ ಕೊಡಲಿ: ‘ದೇಶದೆಲ್ಲೆಡೆ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದಂತೆ ಗ್ರಾ.ಪಂ ಚುನಾವಣೆಯಲ್ಲೂ ತಿರಸ್ಕರಿಸಿದ್ದಾರೆ. ಕೆ.ಎಚ್.ಮುನಿಯಪ್ಪರ ಮಗಳ ಕೆಜಿಎಫ್ ಕ್ಷೇತ್ರವಿರಬಹುದು, ನಂಜೇಗೌಡರ ಮಾಲೂರು ಕ್ಷೇತ್ರವಿರಬಹುದು. ಬಿಜೆಪಿಗೆ ನೆಲೆಯಿಲ್ಲದ ಕಡೆಯಲ್ಲೂ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ನಂಜೇಗೌಡರು ಗ್ರಾ.ಪಂ ಚುನಾವಣಾ ಫಲಿತಾಂಶದ ಲೆಕ್ಕ ಕೊಡಲಿ, ನಾವೂ ಲೆಕ್ಕ ಹೇಳುತ್ತೇವೆ’ ಎಂದು ಸವಾಲು ಹಾಕಿದರು.
‘ಕೆಜಿಎಫ್ ತಾಲ್ಲೂಕಿನ ಗ್ರಾ.ಪಂಗಳಲ್ಲಿ 190 ಮಂದಿ, ಕೋಲಾರದಲ್ಲಿ 52, ಮುಳಬಾಗಿಲಿನಲ್ಲಿ 55, ಶಿಡ್ಲಘಟ್ಟದಲ್ಲಿ 57, ಚಿಂತಾಮಣಿಯಲ್ಲಿ 14, ಬಂಗಾರಪೇಟೆಯಲ್ಲಿ 150 ಮಂದಿ ಸೇರಿದಂತೆ ಸುಮಾರು 900 ಸದಸ್ಯರನ್ನು ಗೆಲ್ಲಿಸಿದ್ದೇವೆ. ಪಕ್ಷೇತರರೂ ನಮ್ಮ ಜತೆಗೆ ಬರುತ್ತಿದ್ದಾರೆ. ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸ, ಮುಖ್ಯಮಂತ್ರಿ ಯಡಿಯೂರಪ್ಪ ರೈತಪರ ಕೆಲಸ ಮಾಡಿದ್ದಾರೆಂದು ಜನ ಬಿಜೆಪಿ ಬೆಂಬಲಿಸಿದ್ದಾರೆ’ ಎಂದರು.
‘ಮೋದಿಯವರು ಹಳ್ಳಿಗಳ ಅಭಿವೃದ್ಧಿಗೆ 15ನೇ ಹಣಕಾಸು ಯೋಜನೆಯಡಿ ಗ್ರಾ.ಪಂಗಳಿಗೆ ₹ 2-3 ಕೋಟಿ ಕೊಡುತ್ತಾರೆ. ಮೊದಲ ಕಂತಿನಲ್ಲಿ ₹ 50 ಲಕ್ಷ ನೀಡಿದ್ದಾರೆ. ಶೇ 80ರಷ್ಟು ಹಣ ಕೇಂದ್ರದಿಂದ ಬರುತ್ತದೆ. ಆದರೆ, ನಂಜೇಗೌಡರು ಹೋದ ಕಡೆಯಲೆಲ್ಲಾ ತಾನು, ತನ್ನಿಂದಲೇ ಎಂದು ಹೇಳುತ್ತಾರೆ. ಅವರಿಗೆ ರಾಜಕೀಯ ಅನುಭವವೂ ಇಲ್ಲ, ಇನ್ನೊಂದೆಡೆ ವಿದ್ಯಾಭ್ಯಾಸವೂ ಸರಿಯಾಗಿಲ್ಲ’ ಎಂದು ಮೂದಲಿಸಿದರು.
ಶೋಭೆಯಲ್ಲ: ‘ದೇಶ ದ್ರೋಹ ಸಹಿಸಲ್ಲ. ದೇಶದ್ರೋಹಿಗಳು ಬೇರೆ ದೇಶದ ಪರ ಜಿಂದಾಬಾದ್ ಕೂಗುವುದು ದೇಶಕ್ಕೆ ಮಾಡಿದ ಅಪಮಾನ. ಅಂತಹವರು ಈ ದೇಶದಲ್ಲಿರಲು ನಾಲಾಯಕ್. ಜನ್ಮ ಕೊಟ್ಟ ತಂದೆ ತಾಯಿಯನ್ನು ಮರೆತು ಬೇರೆಯವರನ್ನು ತಂದೆ ತಾಯಿ ಎನ್ನುವುದು ಶೋಭೆಯಲ್ಲ. ಅವರ ಬೂಟಾಟಿಕೆ ನಡೆಯಲ್ಲ’ ಎಂದು ಪಾಕಿಸ್ತಾನದ ಪರ ಘೋಷಣೆ ಕೂಗಿದ ಎಸ್ಡಿಪಿಐ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಯಲ್ಲಿ ಎಸ್ಡಿಪಿಐ ಮತ್ತು ಪಿಎಫ್ಐ ಪಾತ್ರ ಏನೆಂದು ಗೊತ್ತಾಗಿದೆ. ಈ ಸಂಘಟನೆಗಳವರು ಅವಿದ್ಯಾವಂತರು, ತಂದೆ ತಾಯಿಗೆ ಊಟ ಹಾಕಲು ಯೋಗ್ಯತೆ ಇಲ್ಲದವರು. ಹೆತ್ತ ತಂದೆ ತಾಯಿಗೆ, ಭಾರತ ಮಾತೆಗೆ ಮೊದಲು ಗೌರವ ನೀಡಲಿ. ಇವತ್ತಲ್ಲ ನಾಳೆ ಖಂಡಿತ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆ ನಿಷೇಧ ಮಾಡುತ್ತೇವೆ’ ಎಂದು ಗುಡುಗಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.