ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಮರೆತರೆ ಸಂಪ್ರದಾಯ ಅಸ್ವಸ್ಥ

ಡಿಸಿಸಿ ಬ್ಯಾಂಕ್ ಹಿರಿಯ ಪ್ರಬಂಧಕ ದೊಡ್ಡಮನಿ ಕಳವಳ
Last Updated 17 ಜನವರಿ 2021, 14:00 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದಲ್ಲಿ ಕನ್ನಡ ಭದ್ರವಾಗಬೇಕಾದರೆ ಬೇರೆಯವರಿಗೆ ಕನ್ನಡ ಭಾಷೆ ಅನಿವಾರ್ಯವಾಗಬೇಕು. ಆಗ ಮಾತ್ರ ಕನ್ನಡದ ಸಿರಿ ಬೆಳೆಯಲು ಸಾಧ್ಯ’ ಎಂದು ಡಿಸಿಸಿ ಬ್ಯಾಂಕ್ ಹಿರಿಯ ಪ್ರಬಂಧಕ ಹುಸೇನ್ ಸಾಬ್ ಎಂ.ದೊಡ್ಡಮನಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್, ಜಿಲ್ಲಾ ಸಿರಿಗನ್ನಡ ವೇದಿಕೆ, ಲಯನ್ಸ್ ಕ್ಲಬ್, ಕನ್ನಡ ಸಾಂಸ್ಕೃತಿಕ ವೇದಿಕೆ, ಮಾನವ ಅಭಿವೃದ್ಧಿ ಯೋಗ ಟ್ರಸ್ಟ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಿರಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಕನ್ನಡ ಬೆಳೆಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ’ ಎಂದರು.

‘ಕನ್ನಡದ ಸಿರಿ ಆಲದ ಮರವು ಎಲ್ಲರಿಗೂ ಆಶ್ರಯ ನೀಡುತ್ತದೆ. ಜಗತ್ತಿನ ಮೂಲೆ ಮೂಲೆಯವರು ಬೆಂಗಳೂರಿಗೆ ಬಂದು ಸೇರಿಕೊಂಡಿದ್ದಾರೆ. ಮತ್ತೆ ಗೋಕಾಕ್ ಮಾದರಿಯ ಚಳವಳಿ ನಡೆದರೆ ಕನ್ನಡದ ಸಿರಿ ಪ್ರಜ್ವಲಿಸಲು ಸಾಧ್ಯ’ ಎಂದು ತಿಳಿಸಿದರು.

‘ಕಲೆ, ಸಾಂಸ್ಕೃತಿಕ, ಸಾಂಪ್ರದಾಯಿಕ ಆಚರಣೆಗಳು ದಾರಿ ದೀಪವಾಗಬೇಕು. ಸಂಸ್ಕೃತಿ ಮರೆಯದೆ ಬೆಳೆಸಿಕೊಂಡು ಹೋಗಬೇಕು. ನಾವು ಸಂಸ್ಕೃತಿ ಮರೆತರೆ ಕುಟುಂಬ ಮರೆಯುತ್ತದೆ. ಕುಟುಂಬ ಮರೆತರೆ ಗ್ರಾಮ ಮರೆಯುತ್ತದೆ, ಗ್ರಾಮ ಮರೆತರೆ ಸಂಪ್ರದಾಯ ಅಸ್ವಸ್ಥವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಹಬ್ಬಗಳ ದೇಶ: ‘ಭಾರತ ಹಬ್ಬಗಳ ದೇಶ. ಆಚರಿಸಲಿ ಇಲ್ಲದಿರಲಿ ಹಬ್ಬಗಳು ಒಂದರ ಹಿಂದೆ ಬಂದು ಹೋಗುತ್ತವೆ. ಒಂದೊಂದು ಹಬ್ಬಕ್ಕೆ ಒಂದೊಂದು ಅರ್ಥವಿದೆ. ಆಚರಣೆ, ಸಂದೇಶ ಸಂಕಲ್ಪ, ಆನಂದ, ಆಶಯ ಇದೆ. ಅದು ಹಬ್ಬಗಳ ವೈಶಿಷ್ಠ್ಯ’ ಎಂದು ಸಾಹಿತಿ ಕೆ.ಪಿ.ಪುತ್ತೂರಾಯ ನುಡಿದರು.

‘ಮಕರ ಸಂಕ್ರಾಂತಿಯು ವರ್ಷದ ಮೊದಲ ಹಬ್ಬ. ದೇಶದ ಅತಿ ದೊಡ್ಡ ಸಂಪತ್ತು ಭಾರತೀಯ ಸಂಸ್ಕೃತಿ, ಸಂಪ್ರದಾಯ, ಹಬ್ಬ, ಹುಣ್ಣಿಮೆ, ವೈಜ್ಞಾನಿಕ ಹಿನ್ನೆಲೆ ಸಾಮಾಜಿಕ ಸಾಮರಸ್ಯವಿದೆ. ಸಂಪ್ರದಾಯ, ಸಂಸ್ಕೃತಿ ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಆದರೆ, ಈಗಿನ ಪೀಳಿಗೆಯ ಜನರಿಗೆ ಹಬ್ಬ ಹುಣ್ಣಿಮೆಗಳಲ್ಲಿ ನಂಬಿಕೆಯಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ, ಹೆತ್ತವರ ಆಸಕ್ತಿಗಳು ಇದಕ್ಕೆ ಕಾರಣ’ ಎಂದರು.

‘ಸಕಲ ಸೌಭಾಗ್ಯದಲ್ಲಿ ಶ್ರೇಷ್ಠವಾದುದು, ನರಳಿ ನರಳಿ ಸಾಯುವ ಸಾವು ನೀಡಬೇಡ, ಕಾಡಿ ಬೇಡುವ ಜೀವನ ನೀಡಬೇಡ ಎಂಬುದು ಜೀವನದ ಕೊನೆಯ ಪ್ರಾರ್ಥನೆ. ಕಣ್ಣಿಗೆ ಕಾಣುವ ಆರೋಗ್ಯ ಮಾತ್ರ ಆರೋಗ್ಯವಲ್ಲ, ವಯಸ್ಸಿಗೆ ತಕ್ಕಂತಹ ದೈಹಿಕ, ಮಾನಸಿಕ ಲವಲವಿಕೆ ಹೊಂದಿರುವುದೆ ಆರೋಗ್ಯ. ರೋಗ ರಹಿತ ಶರೀರ, ದುಗುಡರಹಿತ ಮನಸ್ಸು, ದುಖಃರಹಿತ ಆತ್ಮವೇ ಆರೋಗ್ಯ. ಅಂತಹ ಆರೋಗ್ಯ ಉಳಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಪರಮೇಶ್ವರನ್, ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಡಿ.ವೆಂಕಟೇಶ್, ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಸುಬ್ಬರಾಮಯ್ಯ, ಕನ್ನಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣ, ಮಾನವ ಅಭಿವೃದ್ಧಿ ಯೋಗ ಟ್ರಸ್ಟ್ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ, ಸಾಹಿತಿಗಳಾದ ರವೀಂದ್ರಸಿಂಗ್‌, ಶರಣಪ್ಪ ಗಬ್ಬೂರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT