ಗುರುವಾರ , ಆಗಸ್ಟ್ 22, 2019
25 °C
ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸುತ್ತೇವೆ: ಸಂಸದ ಮುನಿಸ್ವಾಮಿ ಎಚ್ಚರಿಕೆ

ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ

Published:
Updated:

ಕೋಲಾರ: ‘ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೆಲ ರಾಜಕಾರಣಿಗಳೊಂದಿಗೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆ ಅಧಿಕಾರಗಳ ಸಭೆಯಲ್ಲಿ ಮಾತನಾಡಿ, ‘ಮಾಲೂರು ತಾಲ್ಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಬೆಟ್ಟ ಗುಡ್ಡಗಳನ್ನೇ ಕೆಲವರು ನುಂಗಿ ನೀರು ಕುಡಿದಿದ್ದಾರೆ. ಅನುಮತಿ ಇಲ್ಲದೆ ಜಲ್ಲಿ ಕ್ರಷರ್‌ ನಡೆಸಿದವರಿಗೆ ₹ 90 ಕೋಟಿ ದಂಡ ವಿಧಿಸಲಾಗಿದೆ. ಆದರೆ, ಕ್ರಷರ್‌ ಮಾಲೀಕರು ಈವರೆಗೂ ಸರ್ಕಾರಕ್ಕೆ ದಂಡ ಪಾವತಿಸಿಲ್ಲ’ ಎಂದರು.

‘ಮಾಲೂರು ತಾಲ್ಲೂಕಿನಲ್ಲಿ 22 ಜಲ್ಲಿ ಕ್ರಷರ್‌ಗಳಿದ್ದು, ಈ ಪೈಕಿ 2 ಮಾತ್ರ ಬಹಳ ವರ್ಷಗಳಿಂದ ನಡೆಯುತ್ತಿವೆ. ಉಳಿದ 20 ಕ್ರಷರ್‌ಗಳು ಅಕ್ರಮವಾಗಿದ್ದು, ಮಾಲೀಕರು ಯಾವುದೇ ಅನುಮತಿ ಪಡೆದಿಲ್ಲ. ಕ್ರಷರ್‌ ಮಾಲೀಕರ ಕೈಗೊಂಬೆಯಾಗಿರುವ ಅಧಿಕಾರಿಗಳು ದಂಡ ವಸೂಲಿ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

‘ಒಂದೇ ಕುಟುಂಬದ ಐದಾರು ಮಂದಿ ಕ್ರಷರ್ ನಡೆಸುತ್ತಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಪ್ರಶ್ನೆ ಮಾಡದೆ ಮೌನವಾಗಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗೆ ದೂರು ನೀಡಲಾಗಿದೆ. ಅಕ್ರಮ ಕ್ರಷರ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ದಂಡ ವಸೂಲಿ ಮಾಡಲು ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿದರು.

ವಂಚನೆಯಾಗಿದೆ: ‘ಅಕ್ರಮವಾಗಿ ನಡೆಯುತ್ತಿರುವ ಕ್ರಷರ್‌ಗಳ ಮಾಲೀಕರು ಮಾ.31ರೊಳಗೆ ದಂಡ ಮತ್ತು ತೆರಿಗೆ ಪಾವತಿಸಬೇಕೆಂದು ಸೂಚನೆ ನೀಡಲಾಗಿತ್ತು. ಮಾಲೀಕರು ಈವರೆಗೂ ದಂಡ ಮತ್ತು ತೆರಿಗೆ ಪಾವತಿಸದಿದ್ದರೂ ಅಧಿಕಾರಿಗಳು ಅವರ ವಿರುದ್ಧ ಕ್ರಮ ಜರುಗಿಸಿಲ್ಲ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆಯಾಗಿದೆ’ ಎಂದು ಗುಡುಗಿದರು.

‘ಮಾಲೂರು ತಾಲ್ಲೂಕಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದರೂ ಏಕೆ ಮೌನವಾಗಿದ್ದೀರಿ? ತಪ್ಪಿತಸ್ಥರ ವಿರುದ್ಧ ಏಕೆ ಶಿಸ್ತುಕ್ರಮ ಜರುಗಿಸಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಷಣ್ಮುಗಂ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಷಣ್ಮುಗಂ, ‘ಅಕ್ರಮ ಗಣಿಗಾರಿಕೆ ತಡೆಗೆ ಕಾರ್ಯೋನ್ಮುಖರಾಗಿದ್ದು, ಮೂರ್ನಾಲ್ಕು ದಿವಸಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ದಂಡ ಪಾವತಿಸದ ಕ್ರಷರ್‌ಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. 2015ರಿಂದ ಗಣಿಗಾರಿಕೆ ನಡೆಸುತ್ತಿರುವವರಿಗೆ ರಾಜಧನ ಕಟ್ಟುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ಶಿಷ್ಟಾಚಾರ ಪಾಲಿಸಿ: ಇದಕ್ಕೂ ಮುನ್ನ ಮಾಲೂರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಂಸದರು, ‘ಮಾಲೂರು ಶಾಸಕ ಕೆ.ನಂಜೇಗೌಡರು ಏಕಪಕ್ಷಿಯವಾಗಿ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮ ನಡೆಸುವಾಗ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ದೂರಿದರು.

‘ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಅಭಿವೃದ್ಧಿ ಕಾರ್ಯದಲ್ಲಿ ಪಕ್ಷಪಾತ ಮಾಡಬಾರದು. ಜನಪ್ರತಿನಿಧಿಗಳು ಸಾರ್ವಜನಿಕರ ಸೇವಕರು ಎಂಬುದನ್ನು ನಂಜೇಗೌಡರು ಮರೆಯಬಾರದು’ ಎಂದರು.

ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ಮಹೇಶ್, ಶ್ರೀನಿವಾಸ್‌ ಹಾಜರಿದ್ದರು.

Post Comments (+)