‘ನಾನು ಜಿಲ್ಲೆಯ ಮಣ್ಣಿನ ಮಗ: ಮುನಿಯಪ್ಪ ವಲಸೆ ಹಕ್ಕಿ’

ಬುಧವಾರ, ಏಪ್ರಿಲ್ 24, 2019
27 °C
ಲೋಕಸಭಾ ಕ್ಷೇತ್ರದ ಕೇಸರಿ ಪಡೆ ಅಭ್ಯರ್ಥಿ ಮುನಿಸ್ವಾಮಿ ಬಿಚ್ಚು ನುಡಿ

‘ನಾನು ಜಿಲ್ಲೆಯ ಮಣ್ಣಿನ ಮಗ: ಮುನಿಯಪ್ಪ ವಲಸೆ ಹಕ್ಕಿ’

Published:
Updated:
Prajavani

ಕೋಲಾರ: ಸಮಾಜ ಸೇವೆಯ ನಂಟಿನೊಂದಿಗೆ ರಾಜಕೀಯ ಪ್ರವೇಶಿಸಿದ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಅವರ ರಾಜಕೀಯ ಬದುಕು ಕಾಂಗ್ರೆಸ್‌ನಿಂದ ಆರಂಭಗೊಂಡಿತು.

ವಿದ್ಯಾರ್ಥಿ ದಿಸೆಯಲ್ಲೇ ಜನಪರ ಹೋರಾಟದೊಂದಿಗೆ ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿದ ಇವರು 1997ರಲ್ಲಿ ಕಾಂಗ್ರೆಸ್‌ನ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಬೆಂಗಳೂರು ಜಿಲ್ಲಾ ಘಟಕದ ಕಾರ್ಯದರ್ಶಿಯಾದರು.

ನಂತರ 2001ರಲ್ಲಿ ಕರ್ನಾಟಕ ಜನಾಂದೋಲನ ಸಂಘಟನೆಯ ಅಧ್ಯಕ್ಷರಾದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಒಕ್ಕೂಟದ ಉಪಾಧ್ಯಕ್ಷ, ಎನ್‌ಎಸ್‌ಯುಐ ಬೆಂಗಳೂರು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಮ್ಯಾಕ್ಸಿ ಕ್ಯಾಬ್‌ ಒಕ್ಕೂಟದ ಕಾರ್ಯಾಧ್ಯಕ್ಷ ಹೀಗೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕು ಸೀಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, 2007ರಿಂದ 2012ರವರೆಗೆ ಕೆಪಿಸಿಸಿ ರಾಜ್ಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ‘ಕೈ’ ಪಾಳಯ ತೊರೆದು ಬಿಜೆಪಿ ಸೇರಿದ ಇವರು 2015ರಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾಡುಗೋಡಿ ವಾರ್ಡ್‌ ಸದಸ್ಯರಾಗಿ ಆಯ್ಕೆಯಾದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಎದುರಾಳಿಯಾಗಿರುವ ಮುನಿಸ್ವಾಮಿ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಪ್ರಜಾವಾಣಿ: ನೀವು ಕ್ಷೇತ್ರಕ್ಕೆ ಪರಕೀಯರೆಂಬ ಭಾವನೆ ಜನರಲ್ಲಿ ಬಲವಾಗಿದೆ. ಟಿಕೆಟ್‌ ವಂಚಿತ ಸ್ವಪಕ್ಷೀಯ ಮುಖಂಡರೇ ನಿಮ್ಮನ್ನು ಆಮದು ಅಭ್ಯರ್ಥಿ ಎಂದು ಹಾದಿಬೀದಿಯಲ್ಲಿ ಹೀಗಳೆಯುತ್ತಿರುವ ಬಗ್ಗೆ ಏನು ಹೇಳುತ್ತೀರಿ?

ಮುನಿಸ್ವಾಮಿ: ರಾಜಕೀಯ ವಿರೋಧಿಗಳು ದುರುದ್ದೇಶಪೂರ್ವಕವಾಗಿ ನಾನು ಕ್ಷೇತ್ರಕ್ಕೆ ಹೊರಗಿನವನೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಶುದ್ಧ ಸುಳ್ಳು. ನಾನು ಕೋಲಾರ ಜಿಲ್ಲೆಯ ಮಣ್ಣಿನ ಮಗ. ಮಾಲೂರು ತಾಲ್ಲೂಕಿನ ಯಲುವಗುಳಿ ಗ್ರಾಮದಲ್ಲಿ ಹುಟ್ಟಿ ಬೆಳೆದ ನಾನು ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಹೋದೆ. ನನ್ನ ದಾಯಾದಿಗಳು ಇಂದಿಗೂ ಯಲುವಗುಳಿಯಲ್ಲಿದ್ದಾರೆ. ಅಲ್ಲಿ ನನ್ನ ಜಮೀನಿದ್ದು, ಅಲ್ಲಿ ಬೆಳೆದ ಟೊಮೆಟೊ ಹಾಗೂ ರಾಗಿಯನ್ನು ಕೋಲಾರ ಎಪಿಎಂಸಿಗೆ ತಂದು ಮಾರುತ್ತೇನೆ.
ಜನರಲ್ಲಿ ನಾನು ಹೊರಗಿನವನೆಂಬ ಭಾವನೆ ಮೂಡಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ವಲಸೆ ಹಕ್ಕಿ. ರಾಜಕೀಯ ನೆಲೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಗಂಟು ಮೂಟೆ ಕಟ್ಟಿಕೊಂಡು ವಲಸೆ ಬಂದಿರುವ ಅವರ ಪೂರ್ವಾಪರ ಕ್ಷೇತ್ರದ ಮತದಾರರಿಗೆ ಗೊತ್ತಿದೆ. ಇಲ್ಲಿನ ಜನ ನನ್ನನ್ನು ಮನೆ ಮಗನಿಗಿಂತ ಹೆಚ್ಚಾಗಿ ನೋಡುತ್ತಾರೆ.

ಪ್ರ: ಹಿಂದೆ ಕಾಂಗ್ರೆಸ್‌ ಕಟ್ಟಾಳುವಾಗಿದ್ದ ನಿಮ್ಮನ್ನು ಮುನಿಯಪ್ಪರೇ ಬಿಜೆಪಿಯಲ್ಲಿನ ಆಪ್ತರ ಮೂಲಕ ಅಭ್ಯರ್ಥಿಯಾಗುವಂತೆ ಮಾಡಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಇದರ ಗುಟ್ಟೇನು?
ಮು
: 18 ವರ್ಷ ಕಾಂಗ್ರೆಸ್‌ನಲ್ಲಿ ಇದ್ದದ್ದು ನಿಜ. ಈ ಕಾರಣಕ್ಕೆ ಮುನಿಯಪ್ಪರ ಬಾಲಂಗೋಚಿಗಳು ಪುಕಾರು ಹಬ್ಬಿಸುತ್ತಿದ್ದಾರೆ. ಮುನಿಯಪ್ಪ ಮತ್ತು ನನ್ನ ನಡುವೆ ಒಳ ಒಪ್ಪಂದವಾಗಿದೆ ಎಂಬ ಭಾವನೆ ಮೂಡುವಂತೆ ಮಾಡುತ್ತಿದ್ದಾರೆ. ಮುನಿಯಪ್ಪರಿಗೆ 70 ವರ್ಷ ವಯಸ್ಸಾಗಿದೆ. ಪಾಪಾ ಅವರ ದೇಹದಲ್ಲಿ ಮೊದಲಿನಂತೆ ಶಕ್ತಿ ಇಲ್ಲ. ತಲೆ, ಕಾಲು ಅಲುಗಾಡುತ್ತಿದ್ದು, ಸೋಲಿನ ಭೀತಿಯಿಂದ ನಾನು ಅವರಿಗೆ ಪ್ರಬಲ ಸ್ಪರ್ಧಿಯಲ್ಲ ಎಂಬ ಭಾವನೆ ಮೂಡಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜಕೀಯ ಮಾಡಿಕೊಂಡು ಬಂದಿರುವ ನಾನು ಡಮ್ಮಿಯಲ್ಲ. ಚುನಾವಣಾ ಫಲಿತಾಂಶದ ದಿನ ಎದುರಾಳಿಗಳಿಗೆ ನನ್ನ ಸಾಮರ್ಥ್ಯ ಗೊತ್ತಾಗಲಿದೆ. ಎಲ್ಲರಿಗೂ ಮಂಕು ಬೂದಿ ಎರಚಿ ಸತತ 7 ಬಾರಿ ಸಂಸದರಾಗಿರುವ ಮುನಿಯಪ್ಪರಿಗೆ ಚುನಾವಣೆಯಲ್ಲಿ ಜನರ ಶಾಪ ತಟ್ಟಲಿದೆ.

ಪ್ರ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಿಯೂ ಬಿಜೆಪಿ ಶಾಸಕರಿಲ್ಲ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಗೆಲುವು ಸಾಧ್ಯವೇ?
ಮು:
ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಕಡಿಮೆ ಇರಬಹುದು, ಶಾಸಕರು ಇಲ್ಲದಿರಬಹುದು. ಆದರೆ, ಪಕ್ಷ ಸಂಘಟನೆ ಬಲವಾಗಿದೆ. ಮತದಾರರೇ ಪಕ್ಷದ ಶಕ್ತಿ. ಹಿಂದಿನ 10 ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನಿಯಪ್ಪರ ಎದುರು ತುಂಬಾ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಬಾರಿ ಆ ರೀತಿ ಆಗುವುದಿಲ್ಲ. ಮತದಾರರು ನನ್ನ ಕೈ ಹಿಡಿಯಲಿದ್ದು, ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಗೆಲುವಿನ ಖಾತೆ ತೆರೆಯಲಿದೆ. ಮತದಾರರು ರಾಜಕೀಯ ಬದಲಾವಣೆ ಬಯಸಿದ್ದು, ನನ್ನ ಗೆಲುವು ನಿಶ್ಚಿತ.

ಪ್ರ: ಬೆಂಗಳೂರಿನ ಪೊಲೀಸ್ ಠಾಣೆಯೊಂದರ ರೌಡಿಪಟ್ಟಿಯಲ್ಲಿ ನಿಮ್ಮ ಹೆಸರಿದೆ. ಈ ಸಂಗತಿ ಮುನ್ನೆಲೆಗೆ ಬಂದಿದ್ದು, ನಿಮ್ಮನ್ನು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯೆಂದು ಸ್ವಪಕ್ಷೀಯರೇ ಬಿಂಬಿಸುತ್ತಿದ್ದಾರೆ. ಇದರಿಂದ ನಿಮಗೆ ಚುನಾವಣೆಯಲ್ಲಿ ಹಿನ್ನಡೆ ಆಗುವುದಿಲ್ಲವೇ?
ಮು:
ನಾನು ಅತ್ಯಾಚಾರ ಅಥವಾ ಕೊಲೆ ಮಾಡಿ ಜೈಲಿಗೆ ಹೋಗಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಿ ಬೀದಿಗಿಳಿದು ಹೋರಾಟ ಮಾಡಿದ್ದಕ್ಕೆ ರಾಜಕೀಯ ಎದುರಾಳಿಗಳು ರೌಡಿ ಪಟ್ಟ ಕಟ್ಟಿದ್ದಾರೆ. ರಸ್ತೆ ಅಗಲೀಕರಣಕ್ಕಾಗಿ ಬಡವರ ಮನೆಗಳ ತೆರವು ಕಾರ್ಯಾಚರಣೆ, ಶಾಲೆಯಲ್ಲಿ ಮಗುವಿನ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪೊಲೀಸರ ಸುಳ್ಳು ಪ್ರಕರಣ ದಾಖಲಿಸಿ ರೌಡಿಪಟ್ಟಿಗೆ ಸೇರಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ಜನಪರವಾಗಿ ಹೋರಾಟ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲವಿದು. ಪೊಲೀಸರು ಸಾವಿರ ಕೇಸು ದಾಖಲಿಸಲಿ, ಹೆದರುವುದಿಲ್ಲ. ಜನರಿಗೆ ಒಳಿತು ಕೆಡುಕಿನ ವ್ಯತ್ಯಾಸ ಗೊತ್ತಿದೆ. ಜನ ದಡ್ಡರಲ್ಲ. ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಮುನಿಯಪ್ಪ ತಮ್ಮ ಹಿಂಬಾಲಕರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ತೇಜೋವಧೆ ಮಾಡಿಸುತ್ತಿದ್ದಾರೆ. ಅವರು ಅಪಪ್ರಚಾರ ಮಾಡಿದಷ್ಟು ನಾನು ಜನರಿಗೆ ಮತ್ತಷ್ಟು ಹತ್ತಿರವಾಗುತ್ತೇನೆ.

ಪ್ರ: ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲು ನಿಮ್ಮ ಯೋಜನೆ ಏನು?
ಮು: ರಾಜಕೀಯವಾಗಿ ತಳ ಮಟ್ಟದಿಂದ ಬೆಳೆದು ಬಂದಿದ್ದೇನೆ. ಕೋಲಾರ ನನ್ನ ತವರು ಮನೆ, ಇಲ್ಲಿನ ಜನ ನನ್ನ ಕುಟುಂಬ ಸದಸ್ಯರು. ನನ್ನ ಮನೆಗೆ ಮತ್ತು ಕುಟುಂಬ ಸದಸ್ಯರಿಗೆ ಏನು ಬೇಕೆಂದು ಗೊತ್ತಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸಂಸದನಾಗಿ ಆಯ್ಕೆಯಾದರೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಮೊದಲ ಆದ್ಯತೆ ಕೊಡುತ್ತೇನೆ.
ಎತ್ತಿನಹೊಳೆ, ಯರಗೋಳ್‌ ಯೋಜನೆಗಳನ್ನು ಪೂರ್ಣಗೊಳಿಸಿ ಜನರಿಗೆ ನೀರು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೆ.ಸಿ ವ್ಯಾಲಿ ಯೋಜನೆಗೆ ಸುಪ್ರೀಂ ಕೋರ್ಟ್‌ ನೀಡಿರುವ ತಡೆಯಾಜ್ಞೆ ತೆರವಿಗೆ ಕಾನೂನು ಹೋರಾಟ ನಡೆಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಜಿಲ್ಲೆಯಲ್ಲಿ ಮಾವು, ಟೊಮೆಟೊ ಉತ್ಪಾದನೆ ಹೆಚ್ಚಿದೆ. ರೈತರ ಹಿತದೃಷ್ಟಿಯಿಂದ ಮಾವು ಮತ್ತು ಟೊಮೆಟೊ ಸಂಸ್ಕರಣಾ ಘಟಕ, ಜ್ಯೂಸ್‌ ಕಾರ್ಖಾನೆಗಳ ಮಂಜೂರಾತಿಗೆ ಶ್ರಮಿಸುತ್ತೇನೆ. ಎಲ್ಲಾ ಪಕ್ಷಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಗೆ ಶುದ್ಧ ನೀರು ತರುವ ಪ್ರಯತ್ನ ಮಾಡುತ್ತೇನೆ.

ಪ್ರ: ಬಿಜೆಪಿಯೊಳಗಿನ ಮುನಿಸು ನಿಮ್ಮ ಗೆಲುವಿಗೆ ಮುಳುವಾಗುವುದಿಲ್ಲವೇ?
ಮು:
ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಭಿನ್ನಮತ ಸಹಜ. ಬಿಜೆಪಿ ಸಹ ಇದಕ್ಕೆ ಹೊರತಲ್ಲ. ಟಿಕೆಟ್‌ ಕೈ ತಪ್ಪಿರುವುದಕ್ಕೆ ಡಿ.ಎಸ್‌.ವೀರಯ್ಯ, ಚಿ.ನಾ.ರಾಮು, ಚಲವಾದಿ ನಾರಾಯಣಸ್ವಾಮಿ ಅಸಮಾಧಾನಗೊಂಡಿದ್ದಾರೆ. ಅವರೆಲ್ಲಾ ನನ್ನ ಸಹೋದರರಿದ್ದಂತೆ. ಪಕ್ಷವು ವೀರಯ್ಯ ಅವರನ್ನು 2 ಬಾರಿ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿದೆ. ಅಲ್ಲದೇ, ಅವರಿಗೆ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷಗಾದಿ ಕೊಟ್ಟಿದೆ. ವರಿಷ್ಠರು ಅವರ ಮನವೊಲಿಸಿದ್ದಾರೆ. ವೀರಯ್ಯ ಖಂಡಿತ ನನ್ನ ಬೆನ್ನಿಗೆ ನಿಲ್ಲುತ್ತಾರೆಂಬ ವಿಶ್ವಾಸವಿದೆ.

ಪ್ರ: ಸಂವಿಧಾನ ಬದಲಿಸುವ ಮತ್ತು ಅಂಬೇಡ್ಕರ್‌ ವಿರುದ್ಧ ಮಾತನಾಡುವ ಬಿಜೆಪಿ ನಾಯಕರು ದಲಿತ ವಿರೋಧಿಗಳೆಂಬ ಭಾವನೆ ಜನರಲ್ಲಿದೆ. ಈ ಸನ್ನಿವೇಶದಲ್ಲಿ ಕೋಲಾರ ಮೀಸಲು ಕ್ಷೇತ್ರದ ಮತದಾರರು ನಿಮ್ಮ ಕೈ ಹಿಡಿಯುತ್ತಾರಾ?
ಮು:
ಸಂಸದ ಮುನಿಯಪ್ಪ ದಲಿತರ ಉದ್ಧಾರಕ್ಕೆ ಏನು ಮಾಡಿದ್ದಾರೆ? ದಲಿತರ ಹೆಸರೇಳಿಕೊಂಡು ಮುನಿಯಪ್ಪ ಮತ್ತು ಅವರ ಕುಟುಂಬ ಸದಸ್ಯರು ಕೋಟಿಗಟ್ಟಲೇ ಆಸ್ತಿ ಮಾಡಿದ್ದಾರಷ್ಟೇ. ಮೀಸಲಾತಿ ಬಲದಿಂದ ಮಗಳನ್ನು ಶಾಸಕಿಯಾಗಿ ಮಾಡಿದ್ದೇ ಮುನಿಯಪ್ಪರ ಸಾಧನೆ. ಬಿಜೆಪಿಯ ಕೆಲ ನಾಯಕರು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಈ ಕಾರಣಕ್ಕೆ ಬಿಜೆಪಿ ದಲಿತ ವಿರೋಧಿ ಎಂದು ಹೇಳುವುದು ಸರಿಯಲ್ಲ, ಜನರಲ್ಲೂ ಆ ಭಾವನೆಯಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !