ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ನಿವಾರಣಾ ಸುರಂಗ ಅಳವಡಿಸಿ

Last Updated 7 ಏಪ್ರಿಲ್ 2020, 13:17 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಸೋಂಕು ನಿವಾರಣಾ ಸುರಂಗ ಮಾರ್ಗ ಅಳವಡಿಸುವಂತೆ ಆಡಳಿತ ಮಂಡಳಿಗಳಿಗೆ ಸೂಚಿಸುತ್ತೇವೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ಇಲ್ಲಿನ ಎಪಿಎಂಸಿಯ ಪ್ರವೇಶದ್ವಾರದಲ್ಲಿ ಸ್ಥಾಪಿಸಿರುವ ಸೋಂಕು ನಿವಾರಣಾ ಸುರಂಗ- ಮಾರ್ಗಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ‘ಕೋಲಾರ ಎಪಿಎಂಸಿ ಮಾದರಿಯಲ್ಲೇ ಜಿಲ್ಲೆಯ ಎಲ್ಲಾ ಎಪಿಎಂಸಿಗಳಲ್ಲೂ ಸೋಂಕು ನಿವಾರಣಾ ಮಾರ್ಗ ಅಳವಡಿಸಬೇಕು’ ಎಂದು ತಿಳಿಸಿದರು.

‘ಜಿಲ್ಲಾ ಕೇಂದ್ರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಏ.8ರಂದು ಹಾಗೂ ಮುಳಬಾಗಿಲು ಎಪಿಎಂಸಿಯಲ್ಲಿ ಏ.9ರಂದು ಸೋಂಕು ನಿವಾರಣಾ ಸುರಂಗ- ಮಾರ್ಗ ಸ್ಥಾಪಿಸಲಾಗುತ್ತದೆ. ಜಿಲ್ಲೆಯನ್ನು ಕೊರೊನಾ ಸೋಂಕು ಜಿಲ್ಲೆಯಾಗಿಸಲು ಎಲ್ಲಾ ಎಪಿಎಂಸಿ ಆಡಳಿತ ಮಂಡಳಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಕೋಲಾರ ಎಪಿಎಂಸಿ ಆಡಳಿತ ಮಂಡಳಿಯು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 50.40 ಲಕ್ಷ ನೀಡಿದೆ. ಇದು ಇತರೆ ಎಪಿಎಂಸಿ ಆಡಳಿತ ಮಂಡಳಿಗಳಿಗೆ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯ ಎಪಿಎಂಸಿಗಳಿಂದ ಹೊರ ರಾಜ್ಯಗಳಿಗೆ ತರಕಾರಿ ಹಾಗೂ ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳಿಗೆ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಹಿಂದಿನ ರೀತಿಯಲ್ಲೇ ತರಕಾರಿ ಮತ್ತು ಕೃಷಿ ಉತ್ಪನ್ನಗಳು ಸಾಗಣೆ ಆಗಬೇಕು. ಜನರು ವಿದೇಶಿ ವಸ್ತುಗಳ ಬಳಕೆ ನಿಯಂತ್ರಿಸಿ ದೇಸಿ ವಸ್ತುಗಳ ಬಳಕೆ ಹೆಚ್ಚು ಮಾಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದರು.

ಆರೋಗ್ಯ ಮುಖ್ಯ: ‘ಮದ್ಯದ ವಹಿವಾಟು ಸ್ಥಗಿತಗೊಂಡಿರುವುದರಿಂದ ಸರ್ಕಾರಕ್ಕೆ ನಷ್ಟವಾದರೂ ಚಿಂತೆಯಿಲ್ಲ. ಜನರ ಆರೋಗ್ಯ ಮುಖ್ಯ. ಮದ್ಯ ವ್ಯಸನಿಗಳು ಕೆಲ ದಿನಗಳವರೆಗೆ ಮದ್ಯಪಾನದಿಂದ ದೂರವಿದ್ದು, ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ಕಾಲ ಕಳೆಯಬೇಕು. ಇದರಲ್ಲಿ ಸಿಗುವ ನೆಮ್ಮದಿ ಮದ್ಯಪಾನದಿಂದ ಸಿಗುವುದಿಲ್ಲ. ಮದ್ಯ ವ್ಯಸನಿಗಳು ಸಾಧ್ಯವಾದರೆ ಜೀವನವಿಡೀ ಮದ್ಯಪಾನ ತ್ಯಜಿಸಿ ಗೌರವಯುತವಾಗಿ ಬದುಕಬೇಕು’ ಎಂದು ಕಿವಿಮಾತು ಹೇಳಿದರು.

ಶಾಸಕ ಕೆ.ಶ್ರೀನಿವಾಸಗೌಡ, ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್, ನಿರ್ದೇಶಕ ಅಪ್ಪಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT