ಭಾನುವಾರ, ಆಗಸ್ಟ್ 25, 2019
24 °C
ಇಲಾಖೆ ಅನುದಾನ ಬಳಕೆ: ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ

ಸರ್ಕಾರಿ ಕಟ್ಟಡದಲ್ಲಿ ಮಳೆ ಕೊಯ್ಲು ಅಳವಡಿಕೆ

Published:
Updated:
Prajavani

ಕೋಲಾರ: ‘ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಇಲಾಖೆ ಅನುದಾನದಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಅನುದಾನ ಇಲ್ಲದಿದ್ದರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಲಶಕ್ತಿ ಅಭಿಯಾನದಡಿ ಮಳೆ ನೀರು ಇಂಗಿಸುವ ನಿಟ್ಟಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಜತೆಗೆ ಕೆರೆ ಕಲ್ಯಾಣಿ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಪ್ರತಿ ತಾಲ್ಲೂಕಿನಲ್ಲೂ ಶುಕ್ರವಾರ ಮತ್ತು ಶನಿವಾರ ಒಂದು ಕೆರೆ, ಕಾಲುವೆ ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದ್ದು, ಈ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಅಂಗನವಾಡಿ ಕಟ್ಟಡದಿಂದ ಹಿಡಿದು ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆ ಕೊಯ್ಲು ಅಳವಡಿಸಿಕೊಳ್ಳಬೇಕು’ ಎಂದರು.

‘ಯಾವ ಸರ್ಕಾರಿ ಕಟ್ಟಡದಲ್ಲಿ ಮಳೆ ಕೊಯ್ಲು ವ್ಯವಸ್ಥೆಯಿದೆ ಮತ್ತು ಇಲ್ಲ ಎಂಬ ಬಗ್ಗೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇಲಾಖೆಯಲ್ಲಿ ಅನುದಾನ ಲಭ್ಯವಿರದಿದ್ದರೆ ವಿಶೇಷ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ. ಖಾಸಗಿ ಕಟ್ಟಡಗಳಾದ ಕಲ್ಯಾಣ ಮಂಟಪ, ಬೃಹತ್ ವಾಣಿಜ್ಯ ಮಳಿಗೆಗಳಲ್ಲೂ ಮಳೆ ಕೊಯ್ಲು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬೃಹತ್‌ ಕಟ್ಟಡ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ಕೆಜಿಎಫ್‌ನ ಬೆಮಲ್‌ ಕಾರ್ಖಾನೆಯಲ್ಲಿ 6,500 ಕಾರ್ಮಿಕರಿದ್ದಾರೆ. ಪ್ರತಿ ಇಬ್ಬರು ಕಾರ್ಮಿಕರು ಒಂದೊಂದು ಸಸಿ ನೆಟ್ಟರೆ 3,250 ಗಿಡ ಬೆಳೆಸಬಹುದು. ಈ ದಿಸೆಯಲ್ಲಿ ಬೆಮಲ್‌ ಕಾರ್ಖಾನೆಗೆ ಸಸಿ ಪೂರೈಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನೀರಿನ ಸಮಸ್ಯೆ: ‘ಜಿಲ್ಲೆಯ 143 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, 71 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಪ್ರತಿನಿತ್ಯ 181 ಲೋಡ್‌ ನೀರು ಪೂರೈಸಲಾಗುತ್ತಿದೆ. ಉಳಿದ 72 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ನಗರ, ಪುರಸಭೆ ವ್ಯಾಪ್ತಿಯ 28 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಿದ್ದು, 25 ಟ್ಯಾಂಕರ್‌ಗಳಲ್ಲಿ ದಿನಕ್ಕೆ 105 ಲೋಡ್‌ ನೀರು ಕೊಡಲಾಗುತ್ತಿದೆ’ ಎಂದರು.

‘ಹೊಸ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಅವಕಾಶ ಇದ್ದೆಡೆ ಮಾತ್ರ ಹೊಸ ಕೊಳವೆ ಬಾವಿ ಕೊರೆಸಲು ಸೂಚಿಸಲಾಗಿದೆ. ಸಾರ್ವಜನಿಕ ಬಳಕೆಗೆ ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಅನುಮತಿ ನೀಡಿದ್ದೇವೆ. ಖಾಸಗಿಯಾಗಿ ಕೊಳವೆ ಬಾವಿ ಕೊರೆಸಲು ಅನುಮತಿ ನೀಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮಳೆ ಕೊರತೆ: ‘ಹಿಂದಿನ ವರ್ಷ ಜಿಲ್ಲೆಯ 6 ತಾಲ್ಲೂಕುಗಳನ್ನೂ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿತ್ತು. ಈ ವರ್ಷದಲ್ಲಿ ಜೂನ್ ಮತ್ತು ಜುಲೈ ತಿಂಗಳ ವಾಡಿಕೆ ಮಳೆ ಪ್ರಮಾಣ 139 ಮಿ.ಮೀ ಇತ್ತು. ಆದರೆ, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.  ಶೇ 20ರಷ್ಟು ಮಳೆ ಕೊರತೆ ಆಗಿರುವುದರಿಂದ ಬರ ನಿರ್ವಹಣೆ ಕಾಮಗಾರಿಗಳನ್ನು ಮುಂದುವರಿಸುವಂತೆ ಸರ್ಕಾರ ಸೂಚಿಸಿದೆ’ ಎಂದು ವಿವರಿಸಿದರು.

‘ರಾಜ್ಯದ 65 ತಾಲ್ಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿಯಿದೆ. ಈ ಪೈಕಿ ಜಿಲ್ಲೆಯ ಮಾಲೂರು ಮತ್ತು ಬಂಗಾರಪೇಟೆ ಸಹ ಸೇರಿವೆ. ಜಿಲ್ಲೆಯಲ್ಲಿ 13 ವಾರಕ್ಕೆ ಮೇವು ಲಭ್ಯವಿದ್ದು, ಮಾಲೂರು ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ ಗೋಶಾಲೆ ತೆರೆಯುವಂತೆ ಅಥವಾ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಗೋಶಾಲೆಯಲ್ಲಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದೆ’ ಎಂದು ತಿಳಿಸಿದರು.

‘ಮಾಲೂರು ತಾಲ್ಲೂಕಿನ ಗಂಗಾಪುರದಲ್ಲಿ ರಾಘವೇಂದ್ರ ಗೋ ಆಶ್ರಮ ಹಾಗೂ ಬಂಗಾರಪೇಟೆ ತಾಲ್ಲೂಕಿನ ಬ್ಯಾಟರಾಯನಪುರದಲ್ಲಿ ನಂದಿ ಗೋಶಾಲೆಯಿದ್ದು, ಇವುಗಳ ಸ್ಥಳೀಯ ರೈತರ ಜಾನುವಾರುಗಳಿಗೆ ಮೇವು ಮತ್ತು ನೀರು ಸೌಲಭ್ಯ ಕಲ್ಪಿಸಲಾಗುವುದು. ಪ್ರತಿ ಜಾನುವಾರಿಗೆ ದಿನಕ್ಕೆ ₹ 70ರಂತೆ ಸರ್ಕಾರ ವೆಚ್ಚ ಭರಿಸುತ್ತದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

Post Comments (+)