ಬಾಲ್ಯದಿಂದಲೇ ನಾಯಕತ್ವ ಗುಣ ಬೆಳೆಸಿ

7

ಬಾಲ್ಯದಿಂದಲೇ ನಾಯಕತ್ವ ಗುಣ ಬೆಳೆಸಿ

Published:
Updated:
Deccan Herald

ಕೋಲಾರ: ‘ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ನಾಯಕತ್ವ ಗುಣ ಬೆಳೆಸಬೇಕು’ ಎಂದು ತಾಲ್ಲೂಕಿನ ಅರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆರ್‌.ನಾರಾಯಣಸ್ವಾಮಿ ಸಲಹೆ ನೀಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಅರಹಳ್ಳಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ಪ್ರಜೆಗಳು. ಮಕ್ಕಳೇ ದೇಶದ ಬುನಾದಿ. ಹೀಗಾಗಿ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಸತ್ಪ್ರಜೆಗಳಾಗಿ ಮಾಡಬೇಕು’ ಎಂದು ತಿಳಿಸಿದರು.

‘ಸಮಾಜ ಸರಿ ದಾರಿಯಲ್ಲಿ ಸಾಗಿದರೆ ಮಾತ್ರ ದೇಶದಲ್ಲಿ ಶಾಂತಿ ಹಾಗೂ ಸಹಬಾಳ್ವೆ ನೆಲೆಗೊಳ್ಳುತ್ತದೆ. ಮಕ್ಕಳು ಅಡ್ಡ ದಾರಿ ಹಿಡಿದರೆ ದೇಶದ ಭವಿಷ್ಯ ಕತ್ತಲಾಗುತ್ತದೆ. ಆದ ಕಾರಣ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಅವರಿಗೆ ಒಳಿತು ಕೆಡುಕಿನ ಅರಿವು ಮೂಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಸದಾ ಓದು, ಪರೀಕ್ಷೆ ಪ್ರಕ್ರಿಯೆಯಲ್ಲಿ ಮುಳುಗಿರುವ ವಿದ್ಯಾರ್ಥಿಗಳಿಗೆ ಮನರಂಜನೆ ಅತ್ಯಗತ್ಯ. ಸ್ಕೌಟ್ಸ್– ಗೈಡ್ಸ್‌ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಜೀವನಾವಶ್ಯಕ ಕೌಶಲ ಮತ್ತು ಸೃಜನಶೀಲತೆ ಬೆಳೆಸುತ್ತವೆ. ಜತೆಗೆ ದೈಹಿಕ ಸಾಮರ್ಥ್ಯ ವೃದ್ಧಿಗೆ ಮತ್ತು ಜ್ಞಾನ ವಿಕಾಸಕ್ಕೂ ಪೂರಕ. ಮಕ್ಕಳು ಪಠ್ಯ ಪುಸ್ತಕಗಳಿಗೆ ಸೀಮಿತವಾದರೆ ಜ್ಞಾನ ವೃದ್ಧಿಸಿಕೊಳ್ಳಲು ಸಾಧ್ಯವಿಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಜ್ಞಾನ ವೃದ್ಧಿಯಾಗುತ್ತದೆ’ ಎಂದರು.

ಯಶಸ್ಸು ಸಾಧ್ಯ: ‘ಉತ್ತಮ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ. ಜೀವನದಲ್ಲಿ ಯೋಜನೆ ರೂಪಿಸಿಕೊಂಡಾಗ ಮಾತ್ರ ಗುರಿ ಸಾಧಿಸಿ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿಗಳು ಯಾವುದೇ ಕೆಲಸಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಿಕೊಂಡು ಧನಾತ್ಮಕವಾಗಿ ಕಾರ್ಯಪ್ರವೃತ್ತರಾಗಬೇಕು. ಓದಿಗಷ್ಟೇ ಸೀಮಿತವಾಗದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಮಾರ್ಜೇನಹಳ್ಳಿ ಶಾಲೆ ಮುಖ್ಯ ಶಿಕ್ಷಕ ಮುರಳಿಕೃಷ್ಣನ್ ಹೇಳಿದರು.

ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸಂಘಟಕ ವಿಶ್ವನಾಥ್, ರೋವರ್ ವೆಂಕಟೇಗೌಡ, ಶಿಕ್ಷಕರಾದ ನಾಗರತ್ನ, ಶಂಕರಪ್ಪ, ಉಮಾರಾಣಿ ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !