ಬುಧವಾರ, ನವೆಂಬರ್ 20, 2019
25 °C
ಸಂಚಾರ ನಿಯಮ ಉಲ್ಲಂಘನೆ: ಸಂಸದ ಮುನಿಸ್ವಾಮಿ ಹೇಳಿಕೆ

ದಂಡದ ಮೊತ್ತ ಹೆಚ್ಚಳ ಸ್ವಾಗತಾರ್ಹ

Published:
Updated:

ಕೋಲಾರ: ‘ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಂಡದ ಮೊತ್ತ ಹೆಚ್ಚಿಸಿರುವುದರಿಂದ ಅಪಘಾತ ಪ್ರಮಾಣ ತಗ್ಗಲಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂಚಾರ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗದ ಕಾರಣ ಅಪಘಾತ ಸಂಭವಿಸಿ ಸಾವು ನೋವು ಪ್ರಮಾಣ ಹೆಚ್ಚುತ್ತಿದೆ. ಜನರ ಸುರಕ್ಷತೆ ದೃಷ್ಟಿಯಿಂದಲೇ ಸಂಚಾರ ನಿಯಮ ರೂಪಿಸಲಾಗಿದೆ. ಕೇಂದ್ರ ಸರ್ಕಾರ ಜನರ ಹಿತದೃಷ್ಟಿಯಿಂದ ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಮೊತ್ತ ಹೆಚ್ಚಿಸಿರುವುದು ಸ್ವಾಗತಾರ್ಹ’ ಎಂದರು.

‘ಪಾನಮತ್ತರಾಗಿ ಚಾಲನೆ ಹಾಗೂ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತ ಆಗುತ್ತಿವೆ. ಅಪಘಾತಗಳಲ್ಲಿ ಮೃತಪಡುವವರ ಕುಟುಂಬಗಳು ಬೀದಿಗೆ ಬರುತ್ತಿವೆ. ದಂಡದ ಮೊತ್ತ ಹೆಚ್ಚಿಸಿರುವುದರಿಂದ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸುತ್ತಾರೆ’ ಎಂದು ಹೇಳಿದರು.

‘ರಾಜ್ಯ ಮತ್ತು ರಾಷ್ಟ್ರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸಂಚಾರ ನಿಯಮ ಪಾಲಿಸದಿದ್ದರೆ ಪ್ರಾಣ ಕಳೆದುಕೊಳ್ಳಬೆಕಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆಯು ಜಾಗೃತಿ ಕಾರ್ಯಕ್ರಮ ನಡೆಸಲಿದೆ. ಅನೇಕರು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಸಂಚಾರದ ವೇಳೆ ತಪ್ಪು ಮಾಡಿ ಯಾರೂ ದಂಡ ಕಟ್ಟುವುದು ಬೇಡ. ಕಾನೂನು ಕಠಿಣವಾದರೆ ಅಪರಾಧ ಹಾಗೂ ಅಪಘಾತ ಕಡಿಮೆಯಾಗುತ್ತವೆ’ ಎಂದು ತಿಳಿಸಿದರು.

ಹೆಚ್ಚಿನ ನೆರವು: ‘ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ನೆರವಾಗಲು ಕೋಲಾರ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ಸುಮಾರು 60 ಟನ್ ಆಹಾರ ಸಾಮಗ್ರಿ ಸಂಗ್ರಹಿಸಿ ನೀಡಲಾಗಿತ್ತು. ಇದೀಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಪುನಃ ಹೆಚ್ಚಿನ ಆಹಾರ ಸಾಮಗ್ರಿ ಸಂಗ್ರಹಿಸಿ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರವಾಹಪೀಡಿತ ಪ್ರದೇಶದ ಜನರೊಂದಿಗೆ ಸಂಪರ್ಕದಲ್ಲಿದ್ದು, ಮನೆ ನಿರ್ಮಾಣಕ್ಕೆ ₹ 5 ಲಕ್ಷ ಮತ್ತು ಮನೆ ದುರಸ್ತಿಗೆ ₹ 1 ಲಕ್ಷ, ಬಾಡಿಗೆಗೆ ₹ 10 ಸಾವಿರ ನೀಡುತ್ತಿದ್ದಾರೆ. ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿ ಪರಿಹಾರ ಕಾರ್ಯ ನಡೆದಿಲ್ಲ. ಬೆಂಗಳೂರಿನಲ್ಲಿ ಭಾನುವಾರ ನಗರ ಪ್ರದಕ್ಷಿಣೆ ನಡೆಸಿದ ಮುಖ್ಯಮಂತ್ರಿಯವರು ಉದ್ದಿಮೆದಾರರೊಂದಿಗೆ ಚರ್ಚಿಸಿ ನೆರೆ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡಲು ಕ್ರಮ ಕೈಗೊಂಡಿದ್ದಾರೆ’ ಎಂದು ವಿವರಿಸಿದರು.

ಜಿಲ್ಲೆಗೆ ಸಿ.ಎಂ: ‘ಜಿಲ್ಲೆಯ ರೈತರು ಕೊಳವೆ ಬಾವಿ ನಂಬಿ ಕೃಷಿ ಮಾಡುತ್ತಿದ್ದಾರೆ. ಹೊಸದಾಗಿ ಕೊಳವೆ ಬಾವಿ ಕೊರೆಯುವುದಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಿಸುತ್ತಿರುವ ಸಂಗತಿ ನನಗೆ ಗೊತ್ತಿಲ್ಲ. ಸರ್ಕಾರದ ಆದೇಶದ ಸಂಬಂಧ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಅಗತ್ಯವಿದ್ದರೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡುತ್ತೇನೆ. ರೈತರಿಗೆ ತೊಂದರೆಯಾಗಲು ಬಿಡುವುದಿಲ್ಲ. ಯಡಿಯೂರಪ್ಪ ಅವರನ್ನು ಸದ್ಯದಲ್ಲೇ ಜಿಲ್ಲೆಗೆ ಕರೆತರಲಾಗುವುದು’ ಎಂದು ಮಾಹಿತಿ ನೀಡಿದರು.

‘ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸೌಕರ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಕೊಳವೆ ಬಾವಿ ಕೊರೆಸುತ್ತೇವೆ. ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೇನೆ. ನಗರಸಭೆ ಆಯುಕ್ತರು ವರ್ಗಾವಣೆಯಾಗಿದ್ದು, ಹೊಸಬರು ಬಂದ ನಂತರ ಪ್ರತಿ ವಾರ್ಡ್‌ನಲ್ಲಿ ಪರಿಶೀಲನೆ ನಡೆಸಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ. ಟ್ಯಾಂಕರ್ ನೀರು ಪೂರೈಕೆಯಲ್ಲಿ ಅಕ್ರಮ ಎಸಗಿದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)