ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕವಾಗಿ ಸೈಬರ್ ಅಪರಾಧ ಹೆಚ್ಚಳ

ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶ ಸಂತೋಷ ಗಜಾನನ ಭಟ್ ಕಳವಳ
Last Updated 19 ಜುಲೈ 2019, 14:34 IST
ಅಕ್ಷರ ಗಾತ್ರ

ಕೋಲಾರ: ‘ತಂತ್ರಜ್ಞಾನ ಬೆಳೆದಂತೆ ಜನರು ಸೈಬರ್ ಅಪರಾಧದಲ್ಲಿ ಸಿಲುಕಿ ವಂಚನೆಗೊಳಗಾಗುತ್ತಿರುವುದು ಕಳವಳಕಾರಿ’ ಎಂದು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಧೀಶ ಸಂತೋಷ ಗಜಾನನ ಭಟ್ ವಿಷಾದಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ಜಾಗೃತಿ ಸೇವಾ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಮತ್ತು ಸೈಬರ್ ಕಾನೂನು ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಾಗತಿಕವಾಗಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಪ್ರಮಾಣ ಹೆಚ್ಚುತ್ತಿದೆ. ಸಾರ್ವಜನಿಕರು ವಿಭಿನ್ನ ರೀತಿಯಲ್ಲಿ ವಂಚನೆಗೆ ಒಳಗಾಗುತ್ತಿದ್ದು, ಈ ಪೈಕಿ ವಿದ್ಯಾವಂತರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಸೈಬರ್‌ ಅಪರಾಧ ಪ್ರಕರಣಗಳು ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿವೆ’ ಎಂದರು.

‘ವಿಜ್ಞಾನ ಮತ್ತು ತಂತ್ರಜ್ಞಾನ ದೇಶದ ಅಭಿವೃದ್ಧಿಗೆ ಪೂರಕ. ಆದರೆ, ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಅಪಾಯಕಾರಿ. ವಿದ್ಯಾರ್ಥಿ ಸಮುದಾಯ ಈ ಬಗ್ಗೆ ಜಾಗೃತವಾಗಬೇಕು. ಸೈಬರ್‌ ವಂಚನೆಗೆ ಒಳಗಾಗಬಾರದು. ಸೈಬರ್ ವಂಚನೆ ಪ್ರಕರಣ ಗಮನಕ್ಕೆ ಬಂದರೆ ಪೊಲೀಸರಿಗೆ ಅಥವಾ ನ್ಯಾಯಾಯಲಕ್ಕೆ ದೂರು ನೀಡಿ’ ಎಂದು ಕಿವಿಮಾತು ಹೇಳಿದರು.

ಜಾಗೃತರಾಗಬೇಕು: ‘ಸೈಬರ್ ಅಪರಾಧಿಗಳು ಸಾರ್ವಜನಿಕರನ್ನು ಬಹಳ ಚಾಕಚಕ್ಯತೆಯಿಂದ ವಂಚಿಸಿ ಸುಲಭವಾಗಿ ಲಕ್ಷಾಂತರ ರೂಪಾಯಿ ದೋಚುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು’ ಎಂದು ನಗರದ ಸೈಬರ್ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಂ.ಶಿವಕುಮಾರ್ ತಿಳಿಸಿದರು.

‘ಸಾಮಾಜಿಕ ಜಾಲತಾಣಗಳು ಹಾಗೂ ಇಂಟರ್‌ನೆಟ್‌ನ ಅತಿಯಾದ ಬಳಕೆಯಿಂದ ಜನ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದರೆ. ಹೆಚ್ಚಾಗಿ ಯುವಕ ಯುವತಿಯರು ಸಾಮಾಜಿಕ ಜಾಲತಾಣಗಳ ದಾಸರಾಗಿ ದಾರಿ ತಪ್ಪುತ್ತಿದ್ದಾರೆ’ ಎಂದು ಮನೋವೈದ್ಯ ಆರ್.ಮೋಹನ್‌ಕುಮಾರ್ ಕಳವಳ ವ್ಯಕ್ತಪಡಿಸಿದರು.

‘ಮೊಬೈಲ್‌, ಇಂಟರ್‌ನೆಟ್‌ನ ಅತಿಯಾದ ಬಳಕೆಯಿಂದ ಮಾನಸಿಕ ಖಿನ್ನತೆ ಜತೆಗೆ ದೃಷ್ಟಿ ಸಮಸ್ಯೆ ಎದುರಾಗುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಯುವಕ ಯುವತಿಯರು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್, ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್, ರಾಕ್ ವ್ಯಾಲಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಗೋಪಾಲರೆಡ್ಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT