ಸೋಮವಾರ, ಜನವರಿ 17, 2022
22 °C
ಅಬ್ಬೇನಹಳ್ಳಿ ಸುತ್ತಮುತ್ತ ಉಲ್ಬಣ

ಕೋಲಾರ: ಹಾಲಿನ ಕಲಬೆರಕೆ ಹಾವಳಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ಹಾಲಿನಲ್ಲಿ ರಾಸಾಯನಿಕ ಮಿಶ್ರಣ ಮಾಡುವ ದಂಧೆಕೋರರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ತಹಶೀಲ್ದಾರ್‌ ಶೋಭಿತಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತಾಯಲೂರು ಹೋಬಳಿಯ ಅಬ್ಬೇನಹಳ್ಳಿ ಹಾಗೂ ಅದರ ಸುತ್ತಮುತ್ತಲ ಗ್ರಾಮಗಳಲ್ಲಿ ಕಲಬೆರಕೆ ಹಾಲು ಮಿಶ್ರಣ ಮಾಡುವ ದಂಧೆ ಹೆಚ್ಚಿದೆ. ಈ ದಂಧೆಕೋರರನ್ನು ಗಡಿಪಾರು ಮಾಡಬೇಕು. ಇದರ ನಿಯಂತ್ರಣಕ್ಕೆ ವಿಶೇಷ ಕಾನೂನು ಜಾರಿಗೆ ತಂದು ಜಿಲ್ಲೆಯಾದ್ಯಂತ ಖಾಸಗಿ ಡೇರಿಗಳ ಹಾಲಿನ ಗುಣಮಟ್ಟ ಪರೀಕ್ಷೆ ಮಾಡಲು ವಿಶೇಷ ತಂಡ ರಚಿಸಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಒತ್ತಾಯಿಸಿದರು.

ಹಾಲಿನ ಕಲಬೆರಕೆ ಮಾಡುವ ಮೂಲಕ ಶ್ರೀಮಂತಿಕೆಯ ಜೀವನ ನಡೆಸುತ್ತಿರುವ ದಂಧೆಕೋರರಿಗೆ ಬಡ ಮಕ್ಕಳಿಗೆ ಬಾಧಿಸುವ ಕಾಯಿಲೆಗಳ ಬಗ್ಗೆ ಅರಿವಿಲ್ಲ. ದಂಧೆಗೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಅವ್ಯವಸ್ಥೆಯಿಂದ ಕೂಡಿದೆ. ಲಕ್ಷಾಂತರ ಬಡ ರೈತ ಕುಟುಂಬಗಳಿಗೆ ನೆರವಾಗಿರುವ ಹಾಲಿನ ದರವನ್ನು ಇಳಿಕೆ ಮಾಡಿದೆ. ಇದನ್ನೇ ಖಾಸಗಿ ಡೇರಿಗಳು ಬಂಡವಾಳ ಮಾಡಿಕೊಂಡಿವೆ ಎಂದು ಟೀಕಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಮಾತನಾಡಿ, ಹಾಲಿನ ಕಲಬೆರಕೆ ವಿರುದ್ಧ ಈಗಾಗಲೇ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಶಿವನಾರಹಳ್ಳಿ ವೇಣು, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದ ರೆಡ್ಡಿ, ಮುಖಂಡರಾದ ಹೆಬ್ಬಣಿ ರಾಮಮೂರ್ತಿ, ಅಂಬ್ಲಿಕಲ್ ಮಂಜುನಾಥ್, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ನಂಗಲಿ ಕಿಶೋರ್, ಪೊಂಬರಹಳ್ಳಿ ನವೀನ್, ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಪುತ್ತೇರಿ ರಾಜು
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು