ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಬೆಲೆ ಏರಿಕೆ: ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ, ಆಕ್ರೋಶ

ಜನಸಾಮಾನ್ಯರ ಬದುಕಿನ ಮೇಲೆ ಬರೆ
Last Updated 21 ಆಗಸ್ಟ್ 2021, 15:44 IST
ಅಕ್ಷರ ಗಾತ್ರ

ಕೋಲಾರ: ಅಡುಗೆ ಅನಿಲ ಹಾಗೂ ತೈಲೋತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಸದಸ್ಯರು ಇಲ್ಲಿ ಶನಿವಾರ ಪ್ರತಿಭಟನೆ ಮಾಡಿದರು.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರು ಗತಿಯಲ್ಲೇ ಸಾಗಿದೆ. ಕೇಂದ್ರವು ಕೋವಿಡ್‌ ಸಂಕಷ್ಟದಲ್ಲಿರುವ ಜನಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ ಶೇ 9ರಷ್ಟು ತೆರಿಗೆ ವಿಧಿಸಲಾಗಿತ್ತು. ಆದರೆ, ಈಗಿನ ಕೇಂದ್ರದ ಬಿಜೆಪಿ ಸರ್ಕಾರ ಶೇ 35ಕ್ಕಿಂತ ಹೆಚ್ಚು ತೆರಿಗೆ ವಿಧಿಸಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ಬೇಳೆ ಕಾಳು, ಅಕ್ಕಿ, ಅಡುಗೆ ಎಣ್ಣೆಯಂತಹ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹೇಳಿದರು.

‘ಕೇಂದ್ರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನ, ಕಾರ್ಮಿಕರು, ರೈತರು ತೊಂದರೆ ಅನುಭವಿಸುವಂತಾಗಿದೆ. ಪ್ರಧಾನಿ ಮೋದಿ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಬಂಡವಾಳಶಾಹಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ಕೈಗೊಂಬೆಯಾಗಿರುವ ಅವರಿಗೆ ಜನಸಾಮಾನ್ಯರ ಕಷ್ಟದ ಅರಿವಿಲ್ಲ’ ಎಂದು ಕಿಡಿಕಾರಿದರು.

ಹಿಡಿಶಾಪ: ‘ಜನರ ಮೇಲೆ ತೆರಿಗೆ ಹೊರೆ ಹೆಚ್ಚಿದೆ. ದುಡಿಮೆಯ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ತೈಲೋತ್ಪನ್ನ ಹಾಗೂ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರದ ದುರಾಡಳಿತದಿಂದ ಬೇಸತ್ತಿರುವ ಜನ ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಗುಡುಗಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ತೈಲೋತ್ಪನ್ನಗಳ ಹಾಗೂ ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತೈಲ ಕಂಪನಿಗಳು ಬಡ ಜನರ ಹಣ ಲೂಟಿ ಮಾಡುತ್ತಿವೆ. ದೇಶ ಮತ್ತು ರಾಜ್ಯದಲ್ಲಿ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ಬಡ ಜನರಿಗೆ ಆಹಾರ ಭದ್ರತೆಯಿಲ್ಲದೆ ಬೀದಿ ಪಾಲಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ವಿರೋಧಿ ನೀತಿ ಅನುಸರಿಸುತ್ತಿವೆ. ಕೃಷಿ ಪರಿಕರಗಳ ಬೆಲೆ ದುಪ್ಪಟ್ಟಾಗಿದ್ದು, ರೈತರಿಗೆ ಕೃಷಿ ನಿರ್ವಹಣೆಯು ದೊಡ್ಡ ಸವಾಲಾಗಿದೆ. ಇಂತಹ ಸಂಕಷ್ಟದಲ್ಲಿ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಹೊರಟಿದೆ. ಕೃಷಿ ಉದ್ದೇಶದ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಿ ರೈತ ಕುಲವನ್ನು ಬೀದಿಗೆ ತಳ್ಳುವ ಹುನ್ನಾರ ನಡೆದಿದೆ’ ಎಂದು ದೂರಿದರು.

ತೆರಿಗೆ ಇಳಿಸಿ: ‘ತೈಲೋತ್ಪನ್ನಗಳು ಹಾಗೂ ಅಡುಗೆ ಅನಿಲದ ಬೆಲೆ ನಿಯಂತ್ರಿಸಬೇಕು. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ವಿದ್ಯುತ್‌ ಕ್ಷೇತ್ರ ಖಾಸಗೀಕರಣಗೊಳಿಸಬಾರದು. ರೈತ ಕುಲಕ್ಕೆ ಮಾರಕವಾಗಿರುವ ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT