ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮೇಲಿನ ಶೋಷಣೆ ಹೆಚ್ಚಳ: ಸುದರ್ಶನ್‌ ಕಳವಳ

ವಿಧಾನ ಪರಿಷತ್‌ ಮಾಜಿ ಸಭಾಪತಿ ಸುದರ್ಶನ್‌ ಕಳವಳ
Last Updated 11 ಮಾರ್ಚ್ 2021, 15:42 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜ ಬೆಳೆದಂತೆ ಮಹಿಳೆಯರ ಮೇಲಿನ ದೌರ್ಜನ್ಯ, ಶೋಷಣೆ ಕಡಿಮೆಯಾಗಬೇಕು. ಆದರೆ, ಮಹಿಳೆಯರ ಮೇಲೆ ದಬ್ಬಾಳಿಕೆ ಹೆಚ್ಚುತ್ತಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಕಳವಳ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಾಲ್ಲೂಕಿನ ವೇಮಗಲ್ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿ, ‘ಪುರುಷರ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮಹಿಳೆಯರ ಮೇಲಿನ ಶೋಷಣೆ ತಡೆಗಟ್ಟಬೇಕು’ ಎಂದು ಕಿವಿಮಾತು ಹೇಳಿದರು.

‘ಜಗತ್ತಿನ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಮಹಿಳೆಯರು ಯಾವುದೇ ಫಲಾಪೇಕ್ಷೆ ನಿರೀಕ್ಷಿಸುತ್ತಿಲ್ಲ. ವಿವಿಧ ಕ್ಷೇತ್ರಗಳಲ್ಲಿನ ಸಾಧಕಿಯರು ಮಹಿಳಾ ಸಮುದಾಯಕ್ಕೆ ಮಾದರಿಯಾಗಬೇಕು’ ಎಂದು ಸಲಹೆ ನೀಡಿದರು.

‘ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯ ಜ್ಞಾನವಿದೆ. ಮಹಿಳೆಯರ ಶಕ್ತಿ ಸಾಮರ್ಥ್ಯ ಮತ್ತು ಜವಾಬ್ದಾರಿ ಅರಿತು ಸರ್ಕಾರ ಬಹುತೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮಹಿಳೆಯರ ಹೆಸರಿನಲ್ಲಿ ನೀಡುತ್ತಿದೆ. ಮಹಿಳೆಯರು ಶತಮಾನಗಳಿಂದ ಇತಿಹಾಸ ಸೃಷ್ಟಿಸಿದ್ದಾರೆ. ಹೆಣ್ಣೆಂಬ ಕೀಳರಿಮೆ ಬಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ಶ್ರಮ ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಅಭಿಪ್ರಾಯಪಟ್ಟರು.

‘ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮಾಜದಲ್ಲಿ ಬಾಲ್ಯವಿವಾಹ ತಡೆಗೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಆದ್ಯತೆ ನೀಡಬೇಕು. ಮಹಿಳಾ ಸಾಂಸ್ಕೃತಿಕ ಉತ್ಸವದ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು. ಮಹಿಳಾ ಕಾನೂನುಗಳು ಸಮರ್ಪಕವಾಗಿ ಜಾರಿಯಾಗಬೇಕು’ ಎಂದು ಸಲಹೆ ನೀಡಿದರು.

‘ಮಹಿಳಾ ಸಮುದಾಯದ ಮೇಲೆ ಕೆಲ ಧಾರವಾಹಿಗಳು ಕೆಟ್ಟ ಪರಿಣಾಮ ಬೀರುತ್ತಿವೆ. ವೈಜ್ಞಾನಿಕ ಹಾಗೂ ವೈಚಾರಿಕ ಆಲೋಚನೆಯು ಸಹಜ ಪ್ರಯತ್ನವಾಗಬೇಕು. ಮಹಿಳೆಯರು ಸಮಾನತೆ ಅವಕಾಶ ಸದ್ಬಳಕೆ ಮಾಡಿಕೊಂಡು ಸುಶಿಕ್ಷಿತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಅಬಲೆಯಲ್ಲ: ‘ದೇಶದಲ್ಲಿ ಪುರುಷ ಪ್ರಧಾನ ಸಮಾಜವಿದ್ದರೂ ಮಹಿಳೆಯರು ಹಂತ ಹಂತವಾಗಿ ಸಾಧನೆ ಹಾದಿಯಲ್ಲಿ ಸಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಮಹಿಳೆ ಸಬಲೆಯೇ ಹೊರತು ಅಬಲೆಯಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಹೇಳಿದರು.

‘ಮಹಿಳೆಯು 4 ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ. ದೇಶದಲ್ಲಿನ ಕೆಲ ಅನಿಷ್ಟ ಪದ್ದತಿಗಳು ಮಹಿಳೆಯರಿಗೆ ಮಾರಕವಾಗಿ ಪರಿಣಮಿಸಿವೆ. ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳೆಂದು ತಾರತಮ್ಯ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಈ ಬದಲಾವಣೆ ಮನೆಯಿಂದಲೇ ಆರಂಭವಾಗಬೇಕು’ ಎಂದರು.

ಸಮಾನ ಸ್ಥಾನಮಾನ: ‘ಸಮಾಜದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಸ್ಥಾನಮಾನ ಕಲ್ಪಿಸಬೇಕು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕು. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ವಿ.ಎಂ.ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಓಬವ್ವ ಸಾಂಸ್ಕೃತಿಕ ಕಲಾ ಸಂಘದ ಸಂಸ್ಥಾಪಕಿ ಎಂ.ಮಂಜುಳಾ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವಿಜಯಮ್ಮ, ವೇಮಗಲ್‌ ಪಿಡಿಒ ರಮೇಶ್‌ಬಾಬು, ಸಿಡಿಪಿಒ ರಮೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT