ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆ ಹಿರಿಮೆ ಹೆಚ್ಚಿಸಿ: ರುಕ್ಮಿಣಿ ದೇವಿ ಸಲಹೆ

Last Updated 1 ನವೆಂಬರ್ 2021, 15:28 IST
ಅಕ್ಷರ ಗಾತ್ರ

ಕೋಲಾರ: ‘ಕನ್ನಡದಲ್ಲೇ ವ್ಯವಹರಿಸುವ ಮೂಲಕ ಭಾಷೆಯ ಹಿರಿಮೆ ಹೆಚ್ಚಿಸಬೇಕು. ಪರ ಭಾಷೆಯ ವ್ಯಾಮೋಹಕ್ಕೆ ಒಳಗಾಗಬಾರದು’ ಎಂದು ಖಜಾನೆ ಇಲಾಖೆ ಉಪ ನಿರ್ದೇಶಕಿ ರುಕ್ಮಿಣಿ ದೇವಿ ಸಲಹೆ ನೀಡಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿ ಜಿಲ್ಲಾ ಖಜಾನೆ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಮಾತೃಭಾಷೆಯಲ್ಲಿ ಮಾತನಾಡುವುದಕ್ಕಿಂತ ಆತ್ಮತೃಪ್ತಿ ಮತ್ತೊಂದಿಲ್ಲ. ಈ ನೆಲದಲ್ಲಿ ಹುಟ್ಟಿದ, ಇಲ್ಲಿ ಬದುಕು ಬಯಸಿ ಬಂದಿರುವ ಪ್ರತಿಯೊಬ್ಬರು ಕನ್ನಡವನ್ನೇ ಮಾತನಾಡಬೇಕು’ ಎಂದರು.

‘ಕನ್ನಡಿಗರು ರಾಜ್ಯಕ್ಕೆ ಬಂದಿರುವ ಅನ್ಯ ಭಾಷಿಕರಿಗೆ ಕನ್ನಡ ಭಾಷೆ ಕಲಿಸಬೇಕು. ಕನ್ನಡ ರಾಜ್ಯೋತ್ಸವದ ಸಂಭ್ರಮ ನವೆಂಬರ್‌ಗೆ ಮಾತ್ರ ಸೀಮಿತವಾಗಬಾರದು. ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಸುವ ಮೂಲಕ ಇತರರು ಕನ್ನಡವನ್ನೇ ಬಳಸಲು ಪ್ರೇರಣೆಯಾಗಬೇಕು. ಕನ್ನಡ ಅತ್ಯಂತ ಪುರಾತನ ಭಾಷೆಯಾದರೂ ಶಾಸ್ತ್ರೀಯ ಸ್ಥಾನಮಾನ ಸಿಗುವುದು ವಿಳಂಬವಾಯಿತು. ಭಾಷೆ ರಕ್ಷಣೆಯು ನಾಡಿನ ಪ್ರತಿಯೊಬ್ಬರ ಜವಾಬ್ದಾರಿ’ ಎಂದು ತಿಳಿಸಿದರು.

‘ಕನ್ನಡ ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಭಾಷೆ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು. ನಾಡು, ನುಡಿಗೆ ಕೊಡುಗೆ ನೀಡಿದ ಸಾಹಿತಿಗಳು, ಹೋರಾಟಗಾರರನ್ನು ಸ್ಮರಿಸಬೇಕು. ಮಕ್ಕಳಿಗೆ ಆ ಮಹನೀಯರ ಆದರ್ಶ ರೂಢಿಸಿಕೊಳ್ಳಲು ತಿಳಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಕನ್ನಡದಲ್ಲೇ ಕಚೇರಿ ವ್ಯವಹಾರ ನಡೆಸುವಂತೆ ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಕೆಲವರು ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿರುವುದನ್ನು ನೋಡಿದ್ದೇವೆ. ಅಂತಹ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ಕನ್ನಡದಲ್ಲೇ ವ್ಯವಹರಿಸಲು ನಾವು ಪ್ರೇರಣೆಯಾಗಬೇಕು’ ಎಂದು ಸಹಾಯಕ ಖಜಾನಾಧಿಕಾರಿ ವರದರಾಜು ತಿಳಿಸಿದರು.

ಖಜಾನೆ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಂ.ನಾರಾಯಣರಾವ್, ಸಹಾಯಕ ಖಜಾನಾಧಿಕಾರಿಗಳಾದ ಸತೀಶ್, ಎಸ್.ಕುಮುದವಳ್ಳಿ, ನರಸಿಂಹರೆಡ್ಡಿ, ಎಚ್.ಶಂಕರ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT