ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಖರೀದಿ ದರ ₹ 2 ಹೆಚ್ಚಿಸಿ

ಕೋಚಿಮುಲ್‌ ಆಡಳಿತ ಮಂಡಳಿಗೆ ಶಾಸಕ ಶ್ರೀನಿವಾಸಗೌಡ ಮನವಿ
Last Updated 23 ಫೆಬ್ರುವರಿ 2020, 15:41 IST
ಅಕ್ಷರ ಗಾತ್ರ

ಕೋಲಾರ: ‘ಹಾಲು ಖರೀದಿ ದರವನ್ನು ಪುನಃ ₹ 2 ಹೆಚ್ಚಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕೋಚಿಮುಲ್‌ ಆಡಳಿತ ಮಂಡಳಿಗೆ ಮನವಿ ಮಾಡಿದರು.

ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ತಾಲ್ಲೂಕಿನ ಮಡೇರಹಳ್ಳಿ ಕೆರೆ ಭರ್ತಿಯಾಗಿ ಅಮ್ಮೇರಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ಭಾನುವಾರ ಪರಿಶೀಲಿಸಿ ಮಾತನಾಡಿ, ‘ಜಿಲ್ಲೆಯ ರೈತರಿಗೆ ಹೈನೋದ್ಯಮವೇ ಜೀವನಾಡಿ. ಬೇಸಿಗೆ ಆರಂಭಕ್ಕೂ ಮುನ್ನವೇ ಹಾಲು ಸಂಗ್ರಹಣೆ ಗಣನೀಯವಾಗಿ ಕುಸಿದಿದ್ದು, ಹಾಲು ಉತ್ಪಾದಕರನ್ನು ರಕ್ಷಿಸಬೇಕು’ ಎಂದು ತಿಳಿಸಿದರು.

‘ಹಾಲು ಖರೀದಿ ದರ ಹೆಚ್ಚಿಸದಿದ್ದರೆ ರೈತರು ಉಳಿಯುವುದು ಕಷ್ಟ. ಪಶು ಆಹಾರದ ಬೆಲೆ ಏರಿಕೆ ಆಗಿದೆ. ಮತ್ತೊಂದೆಡೆ ಅನಾವೃಷ್ಟಿಯಿಂದ ಹಸಿರು ಮೇವು ಸಿಗದೆ ರಾಸುಗಳನ್ನು ಸಾಕಲು ರೈತರಿಗೆ ಸಮಸ್ಯೆಯಾಗಿದೆ. ಬೇಸಿಗೆ ಸಮೀಪಿಸುತ್ತಿದ್ದು, ಮೇವಿನ ಕೊರತೆ ಮತ್ತಷ್ಟು ಗಂಭೀರವಾಗಲಿದೆ. ಹೀಗಾಗಿ ಹಾಲು ಖರೀದಿ ದರ ಹೆಚ್ಚಿಸುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

‘ಕೋಚಿಮುಲ್‌ನ ಅಧ್ಯಕ್ಷರೂ ಆಗಿರುವ ಮಾಲೂರು ಶಾಸಕ ಕೆ.ವೈ.ನಂಜೇಗೌಡರ ಹಾಲು ಖರೀದಿ ದರ ಹೆಚ್ಚಳದ ವಿಚಾರವಾಗಿ ಮಾತಾಡುತ್ತೇನೆ. ಹಾಲು ಒಕ್ಕೂಟವು ಈಗಾಗಲೇ ಲೀಟರ್‌ ಹಾಲಿಗೆ ₹ 2 ಹೆಚ್ಚಳ ಮಾಡಿದೆ. ಆದರೆ, ಇದರಿಂದ ಏನೂ ಪ್ರಯೋಜನವಿಲ್ಲ. ಲೀಟರ್‌ ಹಾಲಿಗೆ ₹ 35 ಖರೀದಿ ದರ ನಿಗದಿಪಡಿಸಬೇಕು’ ಎಂದು ಹೇಳಿದರು.

ಒಕ್ಕೂಟ ಉಳಿಸಿ

‘ಜಿಲ್ಲೆಯ ಹಾಲು ಒಕ್ಕೂಟ ಉಳಿಸಬೇಕು. ಗ್ರಾಮೀಣ ಭಾಗದಲ್ಲಿ ರೈತರು ಯಾವುದೇ ಕಾರಣಕ್ಕೂ ಹೈನುಗಾರಿಕೆ ಬಿಡಬಾರದು. ಖಾಸಗಿ ಡೇರಿಗಳಿಗೆ ಹಾಲು ಮಾರಾಟ ಮಾಡಬಾರದು’ ಎಂದು ರೈತರಿಗೆ ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ಹೈನುಗಾರಿಕೆ ಉಳಿಸುವ ನಿಟ್ಟಿನಲ್ಲಿ ಹಸುಗಳ ಖರೀದಿಗೆ ಡಿಸಿಸಿ ಬ್ಯಾಂಕ್‌ ಮೂಲಕ ಸಾಲ ಕೊಡುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ. ಪ್ರತಿ ತಾಲೂಕಿನಲ್ಲಿ 500 ಹಸು ಖರೀದಿಸಲು ಬ್ಯಾಂಕ್‌ನಿಂದ ಸಾಲ ಕೊಡಲಾಗುವುದು’ ಎಂದು ಭರವಸೆ ನೀಡಿದರು.

ನೀರು ಹೆಚ್ಚಳ

‘ಬೇಸಿಗೆಗಾಲ ಆರಂಭವಾಗುತ್ತಿರುವುರಿಂದ ಕೆ.ಸಿ ವ್ಯಾಲಿ ಯೋಜನೆ ಮೂಲಕ ಹರಿದು ಬರುವ ನೀರಿನ ಪ್ರಮಾಣ ಸಾಲದು. ಹೀಗಾಗಿ ನೀರಿನ ಹರಿವು ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಚರ್ಚಿಸಲಾಗಿದೆ. ಶಾಸಕ ರಮೇಶ್‌ಕುಮಾರ್ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿ ನೀರು ಹೆಚ್ಚಿಸುವಂತೆ ಕೋರುತ್ತೇವೆ’ ಎಂದು ಮಾಹಿತಿ ನೀಡಿದರು.

‘ಕೆ.ಸಿ ವ್ಯಾಲಿ ಯೋಜನೆಗೆ ಸಾಕಷ್ಟು ಮಂದಿ ಅಡ್ಡಿಪಡಿಸಿದರು. ಈಗ ಅದೇ ನೀರು ಜಿಲ್ಲೆಯನ್ನು ಉಳಿಸುತ್ತಿದೆ. ಯೋಜನೆಯಿಂದ ಭರ್ತಿಯಾಗಿರುವ ಕೆರೆಗಳ ಅಕ್ಕಪಕ್ಕದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಆ ಭಾಗದ ರೈತರು ಬೆಳೆ ಸಹ ಬೆಳೆಯುತ್ತಿದ್ದಾರೆ. ಒಣಗಿದ್ದ ಭೂಮಿಯಲ್ಲಿ ಹಸಿರು ನಳನಳಿಸುತ್ತಿದೆ’ ಎಂದರು.

‘ಮಡೇರಹಳ್ಳಿ ಕೆರೆ ತುಂಬಿ ಅಮ್ಮೇರಹಳ್ಳಿ ಕೆರೆಗೆ ನೀರು ಬರುತ್ತಿದೆ. ಅಮ್ಮೇರಹಳ್ಳಿ ಕೆರೆ ಭರ್ತಿಯಾದರೆ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಹೆಚ್ಚಳವಾಗಲಿದೆ. ಅಮ್ಮೇರಹಳ್ಳಿ ಕೆರೆ ತುಂಬಿದ ನಂತರ ಕೋಲಾರಮ್ಮ ಕೆರೆಗೆ ನೀರು ಹರಿಸಲಾಗುವುದು’ ಎಂದು ವಿವರಿಸಿದರು.

ಭೂಸ್ವಾಧೀನಕ್ಕೆ ಅಂಕಿತ

‘ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ನೀರು ಹರಿದು ಬರಲು 2 ವರ್ಷ ಕಾಲಾವಕಾಶ ಬೇಕು. ತುಮಕೂರು ಜಿಲ್ಲೆಯ ಬೈರಗೊಂಡ್ಲುವಿನಲ್ಲಿ ಅಣೆಕಟ್ಟು ನಿರ್ಮಿಸಲು 2 ಸಾವಿರ ಹೆಕ್ಟೇರ್ ಭೂಮಿ ಅವಶ್ಯಕತೆಯಿದೆ. ಅಲ್ಲಿನ ರೈತರ ಜಮೀನು ಸ್ವಾಧೀನಕ್ಕೆ ರಾಷ್ಟ್ರಪತ ಅಂಕಿತ ಹಾಕಿದ್ದಾರೆ. ಭೂಮಿ ಬೆಲೆ ನಿಗದಿಪಡಿಸಿದ ನಂತರ ಭೂಸ್ವಾಧೀನವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT