ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಝಳ: ತಂಪಿಗಾಗಿ ಉದ್ಯಾನಕ್ಕೆ ಮೊರೆ

ಐತಿಹಾಸಿಕ ಸ್ಮಾರಕಗಳ ನೆರಳಿಗೆ ಮನಸೋತ ನಗರವಾಸಿಗಳು
Last Updated 7 ಮೇ 2018, 14:03 IST
ಅಕ್ಷರ ಗಾತ್ರ

ವಿಜಯಪುರ: ಕಡು ಬೇಸಿಗೆ ವಿಜಯಪುರಿಗರನ್ನು ದುಃಸ್ವಪ್ನವಾಗಿ ಕಾಡುತ್ತಿದೆ. ಮಧ್ಯಾಹ್ನದ ವೇಳೆ ಸರ್ಕಾರಿ ಕಚೇರಿ ಕೆಲಸಗಳ ನಿಮಿತ್ತ ನಗರದ ಸುತ್ತಮುತ್ತಲ ಊರುಗಳು ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದ ಜನರು ನೆರಳನ್ನು ಆಶ್ರಯಿಸಿ ಉದ್ಯಾನದ ಮೊರೆ ಹೊಕ್ಕುತ್ತಿರುವ ಚಿತ್ರಣ ಸಾಮಾನ್ಯವಾಗಿದೆ.

ಬೇಸಿಗೆಯ ಈ ದಿನಗಳಲ್ಲಿ ನಗರದ ಹೃದಯ ಭಾಗದಲ್ಲಿರುವ ಗಗನ ಮಹಲ್, ಬಾರಾ ಕಮಾನ್‌ ಉದ್ಯಾನಗಳಲ್ಲಿ ನಿತ್ಯವೂ ತಂಡೋಪ ತಂಡವಾಗಿ ಮಧ್ಯಾಹ್ನದ ವೇಳೆ ವಿಶ್ರಮಿಸಿಕೊಳ್ಳುವ ಜನ ಸಮೂಹವನ್ನು ಕಾಣಬಹುದಾಗಿದೆ.

ವಿಜಯಪುರ ನಗರ ವ್ಯಾಪ್ತಿಯಲ್ಲಿ ಐದು ಐತಿಹಾಸಿಕ ಉದ್ಯಾನಗಳಿವೆ. ಗೋಳಗುಮ್ಮಟ, ಇಬ್ರಾಹಿಂ ರೋಜಾ, ಗಗನ ಮಹಲ್‌, ಬಾರಾ ಕಮಾನ್‌, ಮುಲ್ಕ್ ಎ ಮೈದಾನ್‌ ತೋಪು ಆವರಣದಲ್ಲಿ ಉದ್ಯಾನಗಳಿವೆ. ಇದರಲ್ಲಿ ಮುಲ್ಕ್‌ ಎ ಮೈದಾನ್‌ ತುಂಬಾ ಪುಟ್ಟ ಉದ್ಯಾನ.

ಗೋಳಗುಮ್ಮಟ, ಇಬ್ರಾಹಿಂ ರೋಜಾ ಆವರಣದ ಉದ್ಯಾನ ಪ್ರವೇಶಿಸಲು ಪ್ರವೇಶ ಶುಲ್ಕ ಪಾವತಿಸಬೇಕಿದೆ.

ಇದರಿಂದ ಈ ಮೂರು ಉದ್ಯಾನಗಳಿಗೆ ವಿಶ್ರಮಿಸಲು ಹೋಗುವವರ ಸಂಖ್ಯೆ ಕಡಿಮೆ. ಪ್ರವಾಸಿಗರೇ ಹೆಚ್ಚು. ಆದರೆ ಗಗನ ಮಹಲ್‌, ಬಾರಾ ಕಮಾನ್‌ ಉದ್ಯಾನಗಳಿಗೆ ಯಾವುದೇ ಪ್ರವೇಶ ಶುಲ್ಕ ಇಲ್ಲದಿರುವುದರಿಂದ ಹೆಚ್ಚಿನ ಸಂಖ್ಯೆಯ ಜನ ಸಾಮಾನ್ಯರು ಬೇಸಿಗೆಯ ದಿನಗಳಲ್ಲಿ ತಮ್ಮ ವಿಶ್ರಾಂತಿಯ ತಾಣವನ್ನಾಗಿ ಮಾಡಿಕೊಳ್ಳುವುದು ವಿಶೇಷ.

‘ನೋಡ್ರೀ ಇದೀಗ ಬಿಸಿಲು ವಿಪರೀತ ಐತಿ. ಜಿಲ್ಲಾಧಿಕಾರಿ ಕಚೇರಿ, ಕೃಷಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಸೇರಿದಂತೆ ಇನ್ನಿತರೆ ಸರ್ಕಾರಿ ಕಚೇರಿಗಳಿಗೆ ವಿವಿಧ ಕೆಲಸಗಳ ನಿಮಿತ್ತ ಮುಂಜಾನೆಯೇ ಬರುವ ಗ್ರಾಮೀಣ ಜನರ ಕೆಲಸ ಕಾರ್ಯ ಮಧ್ಯಾಹ್ನದ ವೇಳೆಗೆ ಪೂರ್ಣಗೊಳ್ಳುತ್ತವೆ.

ಆ ಸಂದರ್ಭ ಹೊರಗೆ ಹೆಜ್ಜೆಯಿಡಲಾರದಷ್ಟು ಬಿಸಿಲ ಪ್ರಖರತೆಯಿರುತ್ತದೆ. ಊರಿಗೆ ಮರಳಲಾಗದೆ ಅನಿವಾರ್ಯವಾಗಿ ಸಮೀಪದ ಗಗನ ಮಹಲ್‌, ಬಾರಾ ಕಮಾನ್‌ ಉದ್ಯಾನಗಳಿಗೆ ಬಂದು ವಿಶ್ರಾಂತಿ ಪಡೆಯುತ್ತೇವೆ. ಬಿಸಿಲ ಝಳ ಕಡಿಮೆಯಾಗುತ್ತಿದ್ದಂತೆ, ಸನಿಹದಲ್ಲಿರುವ ಬಸ್‌ ನಿಲ್ದಾಣಕ್ಕೆ ತೆರಳಿ ಊರುಗಳಿಗೆ ಮರಳುತ್ತೇವೆ’ ಎಂದು ಭಾನುವಾರ ಗಗನ ಮಹಲ್‌ ಉದ್ಯಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಿದ್ದರಾಯ ಶಿಂಧೆ ತಿಳಿಸಿದರು.

‘ಈ ರೀತಿಯ ಉದ್ಯಾನ ನಗರದ ಎಲ್ಲ ಬಡಾವಣೆಗಳಲ್ಲೂ ಆದರೆ ತುಂಬಾ ಚಲೋ. ಬೇಸಿಗೆಯ ದಿನಗಳಲ್ಲಿ ವಿಜಯಪುರಿಗರಿಗೆ ಹಸಿರ ವಾತಾವರಣ ಸಿಗಲಿದೆ. ಆದರೆ ಮಹಾನಗರ ಪಾಲಿಕೆ ಈ ನಿಟ್ಟಿನಲ್ಲಿ ಎಂದೂ ಕಾರ್ಯೋನ್ಮುಖವಾಗಿಲ್ಲ’ ಎಂದು ಸಿದ್ದು ಮಣವಾರ ಅಸಮಾ ಧಾನ ವ್ಯಕ್ತಪಡಿಸಿದರು.

‘ಬಿಸಿಲ ಝಳಕ್ಕೆ ತತ್ತರಿಸಿ ವಿಶ್ರಾಂತಿಗೆಂದು ಬರುವವರು ಮರದ ನೆರಳಿನಲ್ಲಿ ಕೂತು ವಿರಮಿಸುತ್ತಾರೆ. ಕೆಲವರು ಝಳ ತಾಳಲಾರದೆ ನಿದ್ರೆ ಮಾಡುತ್ತಾರೆ. ಕೊಂಚ ಹೊತ್ತಿನ ಬಳಿಕ ಎಚ್ಚರಗೊಂಡು, ತಮ್ಮ ಕೆಲಸದ ನಿಮಿತ್ತ ಹೋಗುತ್ತಾರೆ’ ಎನ್ನುತ್ತಾರೆ ನಗರದ ನಿವಾಸಿ ವಸಂತ ಶಿವಣಗಿ.

**
ಗಗನ ಮಹಲ್‌ ಉದ್ಯಾನದ ಪಕ್ಕದಲ್ಲಿನ ಕಂದಕ ಸ್ವಚ್ಛ ಗೊಳಿಸಬೇಕು ಎಂಬ ಬೇಡಿಕೆಗೆ ಇದೂವರೆಗೂ ಮನ್ನಣೆ ಸಿಕ್ಕಿಲ್ಲ. ಆರಂಭಗೊಂಡ ಕಾರ್ಯ ಪೂರ್ಣ ಗೊಳ್ಳಲಿಲ್ಲ
  – ವಸಂತ ಶಿವಣಗಿ, ‌ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT