ಗುರುವಾರ , ಜೂನ್ 30, 2022
25 °C

ಪ್ಯಾಕೇಜ್‌ ₹10 ಸಾವಿರಕ್ಕೆ ಹೆಚ್ಚಿಸಿ: ಸರ್ಕಾರಕ್ಕೆ ಶಾಸಕ ಶ್ರೀನಿವಾಸಗೌಡ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನರಿಗೆ ಘೋಷಿಸಿರುವ ಪ್ಯಾಕೇಜ್‌ನ ಮೊತ್ತವನ್ನು ₹ 10 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಒತ್ತಾಯಿಸಿದರು.

ರಾಜ್ಯ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್‌ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮನೆಗೆಲಸದ ಮಹಿಳಾ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಿ ಮತ್ತು ಆಟೊ ಚಾಲಕರ ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

‘ಕೋವಿಡ್‌ನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಕೋವಿಡ್‌ 2ನೇ ಅಲೆ ಆರ್ಭಟ ಜೋರಾಗಿದ್ದು, ಹಳ್ಳಿ ಹಳ್ಳಿಗೂ ಸೋಂಕು ಕಾಲಿಟ್ಟಿದೆ. ಕೋವಿಡ್‌ ಆತಂಕ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಜನರು ಹಲವು ದಿನಗಳಿಂದ ಮನೆಯಲ್ಲೇ ಉಳಿದಿದ್ದಾರೆ. ಇದರಿಂದ ಸಂಪಾದನೆ ಇಲ್ಲದೆ ಜನರ ಜೀವನಕ್ಕೆ ತೊಂದರೆಯಾಗಿದೆ’ ಎಂದು ಹೇಳಿದರು.

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜನರಿಗೆ ಘೋಷಿಸಿರುವ ಎರಡ್ಮೂರು ಸಾವಿರದ ಆರ್ಥಿಕ ನೆರವಿನ ಪ್ಯಾಕೇಜ್‌ ಜೀವನ ನಿರ್ವಹಣೆಗೆ ಸಾಲುವುದಿಲ್ಲ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಸರ್ಕಾರದ ಪ್ಯಾಕೇಜ್‌ ಸಂಪೂರ್ಣ ಅವೈಜ್ಞಾನಿಕವಾಗಿದೆ. ಆದರೆ, ಸರ್ಕಾರ ಪ್ರತಿ ವ್ಯಕ್ತಿಗೆ ತಲಾ ₹ 10 ಸಾವಿರ ಹಣಕಾಸು ನೆರವಿನ ಪ್ಯಾಕೇಜ್ ನೀಡಬೇಕು’ ಎಂದು ಮನವಿ ಮಾಡಿದರು.

‘ಮನೆಗೆಲಸದವರಿಗೆ, ಚಿಂದಿ ಆಯುವವರಿಗೆ ಸರ್ಕಾರದ ಆರ್ಥಿಕ ನೆರವಿನ ಪ್ಯಾಕೇಜ್ ಪಡೆಯಲು ಬ್ಯಾಂಕ್ ಖಾತೆ, ಪಾನ್ ಕಾರ್ಡ್ ಕಡ್ಡಾಯಗೊಳಿಸಿರುವುದು ಅಸಂಬದ್ಧವಾಗಿದೆ. ಮನೆಗೆಲಸದವರು ಮತ್ತು ಚಿಂದಿ ಆಯುವವರ ಬಳಿ ಪಾನ್‌ ಕಾರ್ಡ್‌, ಬ್ಯಾಂಕ್‌ ಖಾತೆ ಇರುತ್ತದೆಯೇ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿತ್ತು. ಹಣಕಾಸು ನೆರವು ಪಡೆಯಲು ಇರುವ ನಿಯಮಗಳನ್ನು ಸರಳಗೊಳಿಸಬೇಕು. ಇಲ್ಲವಾದರೆ ಯಾವೊಬ್ಬ ಫಲಾನುಭವಿಯೂ ಪ್ಯಾಕೇಜ್ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದರು.

ಅರ್ಜಿ ಸಲ್ಲಿಸಲು ವ್ಯವಸ್ಥೆ: ‘ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿರುವ ಎಲ್ಲಾ ವಲಯಕ್ಕೆ ನೋಂದಣಿ ಮತ್ತು ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಬ್ರಾಹ್ಮಣರ ಬೀದಿಯಲ್ಲಿರುವ ಕಚೇರಿಯಲ್ಲಿ ಫಲಾನುಭವಿಗಳು ಸೇವೆ ಪಡೆಯಬಹುದು’ ಎಂದು ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಮಾಹಿತಿ ನೀಡಿದರು.

ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕ ಪರಿಷತ್ ಸದಸ್ಯರಾದ ರಮೇಶ್‌ಬಾಬು, ಸೌಮ್ಯ ಹಾಗೂ ಮನೆಗೆಲಸದ ಮಹಿಳಾ ಕಾರ್ಮಿಕರು, ಆಟೊ ಚಾಲಕರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು